ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ

Untitled design 2026 02 03T214558.146

ದಕ್ಷಿಣ ಭಾರತದ ಚಿತ್ರರಂಗದ ಅದ್ಭುತ , ಖ್ಯಾತ ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (71) ಅವರು ಇಂದು (ಫೆಬ್ರವರಿ 03) ಚೆನ್ನೈನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿಟಾರಿಸ್ಟ್ ಆಗಿ ವೃತ್ತಿಜೀವನ ಆರಂಭಿಸಿ, ಆರು ಭಾಷೆಗಳ ನೂರಾರು ಚಿತ್ರಗಳಿಗೆ ಮಧುರ ಸಂಗೀತ ನೀಡಿದ್ದರು.

ಕನ್ನಡದೊಂದಿಗೆ ಅವಿನಾಭಾವ ಸಂಬಂಧ

ಕನ್ನಡಿಗರ ಪಾಲಿಗೆ ಎಸ್.ಪಿ. ವೆಂಕಟೇಶ್ ಎಂದರೆ ಮೊದಲು ನೆನಪಾಗುವುದೇ ‘ಅಶ್ವಮೇಧ’ ಸಿನಿಮಾದ ಅಮರಗೀತೆ ‘ಹೃದಯ ಸಮುದ್ರ ಕಲಕಿ…’. ದಶಕಗಳೇ ಕಳೆದರೂ ಈ ಹಾಡಿನ ಮೋಡಿ ಕಿಂಚಿತ್ತೂ ಕಡಿಮೆಯಾಗಿಲ್ಲ. ‘ಪ್ರೇಮ ಯುದ್ಧ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಇವರು, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’ ಹಾಗೂ ‘ಮೇಘ ಮಂದಾರ’ದಂತಹ ಚಿತ್ರಗಳಿಗೆ ತಮ್ಮ ವಿಶಿಷ್ಟ ಸಂಗೀತದ ಸ್ಪರ್ಶ ನೀಡಿದ್ದರು. ಇವರ ಹಾಡುಗಳು ಇಂದಿಗೂ ರೇಡಿಯೋ ಮತ್ತು ರಿಯಾಲಿಟಿ ಶೋಗಳಲ್ಲಿ ಸದಾ ಜೀವಂತವಾಗಿವೆ.

ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಬ್ಯುಸಿ ಮ್ಯೂಸಿಕ್ ಡೈರೆಕ್ಟರ್

ಮಲಯಾಳಂ ಚಿತ್ರರಂಗದಲ್ಲಿ ವೆಂಕಟೇಶ್ ಅವರು ಬ್ಲಾಕ್ ಬಸ್ಟರ್ ಸಿನಿಮಾಗಳ ಸರದಾರನಾಗಿದ್ದರು. ಮಾಲಿವುಡ್‌ನ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ಇವರದ್ದೇ ಸಂಗೀತವಿರುತ್ತಿತ್ತು. ಇನ್ನು ಬಾಲಿವುಡ್‌ನಲ್ಲೂ ಇವರ ಸಾಧನೆ ಸಣ್ಣದೇನಲ್ಲ. ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’ಗೆ ಇವರೇ ಸಂಗೀತ ನೀಡಿದ್ದರು. ಅನಿಲ್ ಕಪೂರ್-ಟಬು ಜೋಡಿಯ ‘ವಿರಾಸತ್’ ಹಾಗೂ ಇಂದಿಗೂ ಎಲ್ಲರ ನೆಚ್ಚಿನ ಕಾಮಿಡಿ ಸಿನಿಮಾ ‘ಹಂಗಾಮ’ ಚಿತ್ರಗಳ ಹಾಡುಗಳಿಗೆ ವೆಂಕಟೇಶ್ ಅವರು ಜೀವ ತುಂಬಿದ್ದರು.

ಚಿತ್ರರಂಗದ ಗಣ್ಯರ ಸಂತಾಪ

ವೆಂಕಟೇಶ್ ಅವರ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಬಿ. ಉನ್ನಿಕೃಷ್ಣನ್ ಸೇರಿದಂತೆ ತಮಿಳು ಮತ್ತು ಕನ್ನಡ ಚಿತ್ರರಂಗದ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 71 ವರ್ಷದ ವೆಂಕಟೇಶ್ ಅವರ ಅಂತಿಮ ಸಂಸ್ಕಾರ ನಾಳೆ (ಫೆಬ್ರವರಿ 04) ಚೆನ್ನೈನಲ್ಲಿ ಜರುಗಲಿದೆ.

Exit mobile version