MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವೃತ್ತಿಜೀವನದಲ್ಲಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ – ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ “ರಕ್ತ ಕಾಶ್ಮೀರ” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ಈ ಕುರಿತು ಮಾಹಿತಿ ನೀಡಲು ನಿರ್ದೇಶಕರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಎರಡು ಹಾಡುಗಳು ಹಾಗೂ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು.
“ರಕ್ತ ಕಾಶ್ಮೀರ” ಒಂದು ಸಾಮಾಜಿಕ ಸಂದೇಶವುಳ್ಳ ಚಿತ್ರ. ಭಯೋತ್ಪಾದನೆಯ ವಿರುದ್ದ ಸಮರ ಸಾರುವ ಚಿತ್ರವೂ ಹೌದು. ಉಪೇಂದ್ರ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯ ಈ ಚಿತ್ರದ ನಾಯಕಿ. ಚಿತ್ರದಲ್ಲಿ ನಾಯಕ(ಉಪೇಂದ್ರ) ಮಕ್ಕಳಿಗೆ ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಹೇಗೆ ಎಂಬುದನ್ನು ಮಕ್ಕಳಿಗೆ ತರಭೇತಿ ನೀಡಿರುತ್ತಾರೆ. ಈ ಸನ್ನಿವೇಶ ಎದುರಾದಾಗ ಮಕ್ಕಳು ಹೇಗೆ ಪಾರಾಗುತ್ತಾರೆ ಹಾಗೂ ನಗರದಲ್ಲಿ ನಡೆಯಬಹುದಾದಾ ಭಾರಿ ಸ್ಪೋಟವನ್ನು ಹೇಗೆ ತಪಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. “ನಾಗರಹೊಳೆ” ಚಿತ್ರದ ನಂತರ ಮಕ್ಕಳನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಚಿತ್ರವಿದು. ಇದರಲ್ಲಿ ನೂರಕ್ಕೂ ಆಧಿಕ ಮಕ್ಕಳು ಅಭಿನಯಿಸಿದ್ದಾರೆ.
ಪ್ರಮುಖಪಾತ್ರದಲ್ಲಿ ಏಳುಜನ ಮಕ್ಕಳು ನಟಿಸಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಹದಿನೆಂಟು ನಿಮಿಷದ ಒಂದು ಹಾಡು. ಈ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಅಭಿನಯಿಸಿದ್ದಾರೆ.
ಒಂದೇ ಹಾಡಿನಲ್ಲಿ ಇಷ್ಟು ಜನ ನಾಯಕರು ಅಭಿನಯಿಸಿರುವ ದಾಖಲೆ ಯಾವ ಭಾಷೆಯ ಚಿತ್ರದಲ್ಲೂ ಇಲ್ಲ. ಇದೊಂದು ದಾಖಲೆಯೇ ಸರಿ. ನನ್ನ ಮೇಲೆ ಪ್ರೀತಿಯಿಟ್ಟು ಅಭಿನಯಿಸಿದ ಅಷ್ಟು ನಾಯಕರಿಗೂ ಧನ್ಯವಾದ. ಇನ್ನೂ ಈ ರೀತಿಯ ಹಲವು ವಿಷಯಗಳನ್ನೊಳಗೊಂಡಿರುವ ಈ ಚಿತ್ರವನ್ನು ಸದ್ಯದಲ್ಲೇ ತಮ್ಮ ಮುಂದೆ ತರುವ ಪ್ರಯತ್ನ ನಡೆಯುತ್ತಿದೆ. ನನ್ನ ನಿರ್ದೇಶನ ಮತ್ತೊಂದು ಚಿತ್ರ “ವೀರ ಕಂಬಳ” ಕೂಡ ಜನವರಿಯಲ್ಲಿ ಬಿಡುಗಡೆಯಾಗಲಿದೆ.
ಆನಂತರ “ರಾಣಿ ಚೆನ್ನ ಭೈರಾದೇವಿ” ಚಿತ್ರವನ್ನು ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ರಮ್ಯ ಅವರು ಈ ಪಾತ್ರಕ್ಕೆ ಸೂಕ್ತ. ಹಾಗಾಗಿ ಸದ್ಯದಲ್ಲೇ ಅವರ ಜೊತೆಗೂ ಮಾತನಾಡುತ್ತೇನೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲು ಹೇಳಿದ್ದಾರೆ ಎಂದರು. “ವೀರ ಕಂಬಳ” ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





