ಕನ್ನಡ ಚಲನಚಿತ್ರ ರಂಗದ ಹಿರಿಯ ಹಾಸ್ಯ ನಟ ಮತ್ತು ರಂಗಕರ್ಮಿ ರಾಜು ತಾಳಿಕೋಟೆ ಅವರು ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹೃದಯಾಘಾತದಿಂದ ಬಳಲುತ್ತಿದ್ದ ಅವರು ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಬನಿ ಮಿಡಿಯುತ್ತಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ 1965 ಡಿಸೆಂಬರ್ 18ರಂದು ಜನಿಸಿದ ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ, ಅಂದರೆ ಜನಪ್ರಿಯ ಕಲಾವಿದ ರಾಜು ತಾಳಿಕೋಟೆ. ಬಾಲ್ಯದಲ್ಲೇ ರಂಗಭೂಮಿಯ ಮೆಚ್ಚುಗೆ ಗಳಿಸಿದ ರಾಜು ತಾಳಿಕೋಟೆ, ತಮ್ಮ ವಿಶಿಷ್ಟ ಅಭಿನಯದ ಮೂಲಕ ಉತ್ತರ ಕರ್ನಾಟಕದ ಜನಮನಗಳಲ್ಲಿ ಅಚ್ಚಳಿಯ ಗುರುತು ಮೂಡಿಸಿದರು.
ಬಾಲ್ಯ ಮತ್ತು ರಂಗಭೂಮಿ ಪಯಣ
ತಂದೆ ಮುಕ್ತಂ ಸಾಬ್ ಹಾಗೂ ತಾಯಿ ಮೆಹಬೂಬ್ ಜಾನ್ ಅವರ ಪುತ್ರನಾದ ರಾಜು, ಕೇವಲ ಏಳನೇ ವಯಸ್ಸಿನಲ್ಲೇ ತಂದೆಯವರ “ಶ್ರೀ ಖಾನ್ಗತೇಶ್ವರ ನಾಟ್ಯ ಸಂಘ”ದ ವೇದಿಕೆಯಲ್ಲಿ ಮೊದಲ ಬಾರಿಗೆ ನಟನೆ ಮಾಡಿದರು. ಸತ್ಯ ಹರೀಶ್ಚಂದ್ರ ನಾಟಕದ ಲೋಹಿತಾಶ್ವ, ರೇಣುಕಾ ಎಲ್ಲಮ್ಮ ನಾಟಕದ ಬಾಲ ಪರಶುರಾಮ, ಬಾಲಚಂದ್ರ ನಾಟಕದ ಬಾಲಚಂದ್ರ ಪಾತ್ರಗಳಲ್ಲಿ ಮಿಂಚಿದ್ದರು.
ತಾಯಿಯ ಕ್ಯಾನ್ಸರ್ ಮತ್ತು ತಂದೆಯ ಪಾರ್ಶ್ವವಾಯದ ಸಂಕಷ್ಟದಲ್ಲಿ ರಾಜು ತಾಳಿಕೋಟೆ ಹೋಟೆಲ್‌ನಲ್ಲಿ ಕೆಲಸ ಮಾಡಿ, ಲಾರಿ ಕ್ಲೀನರ್ ಆಗಿ ಜೀವನ ಸಾಗಿಸಿದರು. ರಾಜು ತಾಳಿಕೋಟಿ ಅವರಿಗೆ ಇಬ್ಬರು ಮಡದಿಯರು, ಐದು ಜನ ಮಕ್ಕಳು.
ಬಸೀರ, ದಾವಲ್, ಮತ್ತು ಮೂರು ಜನ ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಕಲೆಯ ಮೇಲಿನ ಪ್ರೀತಿ ಅವರನ್ನು ಮತ್ತೆ ರಂಗಭೂಮಿಯತ್ತ ಕರೆತಂದಿತ್ತು. 1977ರಿಂದ “ಶ್ರೀ ಗುರುಪ್ರಸಾದ ನಾಟ್ಯ ಸಂಘ”, “ಪಂಚಾಕ್ಷರಿ ವಿಜಯ ನಾಟ್ಯ ಸಂಘ”ಗಳಲ್ಲಿ ಕೆಲಸ ಮಾಡಿ, ನಂತರ ನಟನವಾಗಿ ಪ್ರೇಕ್ಷಕರ ಮನ ಗೆದ್ದರು.
ತಾವು ಅಭಿನಯಿಸಿದ ತಾಳಿತಕರಾರು ನಾಟಕದ ಕಿವುಡ ಸ್ತ್ರೀಯಾದ ಸುಮಿತ್ರ ಪಾತ್ರ ಜನಮನ್ನಣೆ ಗಳಿಸಿತ್ತು. ನಂತರದ ಕಣ್ಣಿದ್ದರೂ ಬುದ್ಧಿ ಬೇಕು, ಹೂವಿನ ಅಂಗಡಿ, ಭಾಗ್ಯ ಬಂತು ಬುದ್ಧಿ ಹೋಯಿತು ಮೊದಲಾದ ನಾಟಕಗಳಲ್ಲಿ ಅವರ ಹಾಸ್ಯ ಮತ್ತು ಅಭಿನಯದ ಪ್ರೇಕ್ಷಕರ ಮನಸೆಳೆಯಿತು.
1984ರಲ್ಲಿ ತಮ್ಮದೇ “ಶ್ರೀ ಶರೀಫ ಶಿವಯೋಗಿ ವಿಜಯ ನಾಟ್ಯ ಸಂಘ”ವನ್ನು ಸ್ಥಾಪಿಸಿ ಅನೇಕ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದರು.
ಕಲಿಯುಗದ ಕುಡುಕ: ಜನಮನದ ನಾಟಕ
ರಾಜು ತಾಳಿಕೋಟೆಯ “ಕಲಿಯುಗದ ಕುಡುಕ” ನಾಟಕವು 40 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡು ಅಪಾರ ಜನಪ್ರಿಯತೆ ಪಡೆದಿತ್ತು. ಈ ನಾಟಕದ ಧ್ವನಿಮುದ್ರಿಕೆಗಳು ಮನೆಮಾತಾದವು. ನಂತರ ಕುಡುಕರ ಸಾಮ್ರಾಜ್ಯ, ಲತ್ತುಗುಣಿ ಲಕ್ಕವ್ವ, ಅಸಲಿ ಕುಡುಕ ನಾಟಕಗಳು ಕೂಡ ಯಶಸ್ಸು ಕಂಡವು.
ರಂಗಭೂಮಿಯ ಪಯಣದ ನಂತರ ರಾಜು ತಾಳಿಕೋಟೆ ಕನ್ನಡ ಚಿತ್ರರಂಗದತ್ತ ಕಾಲಿಟ್ಟರು. ಹೆಂಡ್ತಿ ಅಂದರೆ ಹೆಂಡತಿ, ಮನಸಾರೆ, ಪಂಚರಂಗಿ, ಮೈನಾ, ಸುಗ್ರೀವ, ಲೈಫು ಇಷ್ಟೇನೆ, ರಾಜಧಾನಿ, ಶ್ರೀಮಂತ ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ನಟನೆ ಶೈಲಿಗೆ ವಿಶೇಷ ಮೆಚ್ಚುಗೆ ದೊರಕಿತು.
ಗೌರವ ಮತ್ತು ಪ್ರಶಸ್ತಿಗಳು
ರಾಜು ತಾಳಿಕೋಟೆ “ಹಾಸ್ಯ ರತ್ನಾಕರ”, “ಹಾಸ್ಯ ಸಾಮ್ರಾಟ”, “ಕಾಮಿಡಿ ಕಿಂಗ್”, “ಕನ್ನಡದ ಸೆಂದಿಲ್” ಎಂಬ ಬಿರುದುಗಳಿಂದ ಗೌರವಿಸಲ್ಪಟ್ಟಿದ್ದರು. 2010ರಲ್ಲಿ ಸುವರ್ಣ ವಾಹಿನಿಯ ಬೆಸ್ಟ್ ಕಾಮಿಡಿಯನ್ ಅವಾರ್ಡ್, 2011ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ, 2013ರಲ್ಲಿ ಬೆಸ್ಟ್ ಕಾಮಿಡಿಯನ್ ಪ್ರಶಸ್ತಿ, 2015ರಲ್ಲಿ ರಾಜ್ಯೋತ್ಸವ ಪಾಪ್ಯುಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಪಡೆದಿದ್ದರು.