ಟಾಲಿವುಡ್ ಅಂಗಳದಲ್ಲಿ ಹುಟ್ಟಿಕೊಂಡಿದ್ದ ಬಿಸಿಬಿಸಿ ಟೈಟಲ್ ವಾರ್‌ಗೆ ಕೊನೆಗೂ ಬಿಗ್ ಎಂಡ್ ಸಿಕ್ಕಿದೆ. ಜ್ಯಾಕ್‌ಪಾಟ್ ಹೊಡೆದ ರಾಜಮೌಳಿ ಸಿನಿಮಾಗೆ, ನಿರ್ದೇಶಕರೊಬ್ಬರು ಗ್ರ್ಯಾಂಡ್ ಆಗಿ ವಾರಣಾಸಿ ಬಿಟ್ಟುಕೊಟ್ಟಿದ್ದಾದರೂ ಹೇಗೆ..? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್…
- ವಾರಣಾಸಿ ಟೈಟಲ್ ವಾರ್‌ಗೆ ಬಿಗ್ ಕ್ಲೈಮ್ಯಾಕ್ಸ್..!
- ಹಣವಿಲ್ಲದೇ ಟೈಟಲ್ ಹಸ್ತಾಂತರ..ವಾರಣಾಸಿ ರಾಜಮೌಳಿ ಪಾಲು
- ಇಂಡಸ್ಟ್ರಿ ಗೌರವಕ್ಕೆ ಟೈಟಲ್ ತ್ಯಾಗ, ಕೋಟಿ ಡೀಲ್ ತಿರಸ್ಕಾರ..!
- ರಾಜಮೌಳಿ ಪ್ರಾಜೆಕ್ಟ್‌ಗೆ ಅಡ್ಡಿ ನಿವಾರಣೆ, ವಾರಣಾಸಿ ಈಗ ಅಧಿಕೃತ
ಆರ್‌ಆರ್‌ಆರ್ ಜಮಾನಾ ಮುಗಿದು, ಜೇಮ್ಸ್ ಬಾಂಡ್ ಲೆವೆಲ್‌ನ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಮಾಡೋಕೆ ಜ್ಯಾಕ್ ಹಾಕಿರೋ ಡೈರೆಕ್ಟರ್ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬುಗಾಗಿ ನೆಕ್ಸ್ಟ್ ಯಾವ ಶೀರ್ಷಿಕೆ ಹಿಡಿತಾರೆ ಅನ್ನೋ ಕುತೂಹಲ ಸಿನಿ ಪ್ರಿಯರಲ್ಲಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ‘ವಾರಣಾಸಿ’ ಅನ್ನೋ ಪವರ್‌ಫುಲ್ ಶೀರ್ಷಿಕೆ ಅನೌನ್ಸ್ ಮಾಡ್ತಿದ್ದಂತೆಯೇ ಫ್ಯಾನ್ಸ್ ಖುಷಿ ಪಟ್ಟಿದ್ರು. ಆದ್ರೆ, ಈ ಖುಷಿ ಬೆನ್ನಲ್ಲೇ ತೆಲುಗು ಚಿತ್ರರಂಗದಲ್ಲಿ ಸಣ್ಣ ಮಟ್ಟದ ಭೂಕಂಪ ಸೃಷ್ಟಿಯಾಗಿತ್ತು. “ನನ್ನ ಪರ್ಮಿಷನ್ ಇಲ್ಲದೇ ಈ ಹೆಸರನ್ನ ರಾಜಮೌಳಿ ಹೇಗೆ ಬಳಸಿಕೊಳ್ತಾರೆ?” ಅಂತ ನಿರ್ದೇಶಕ ಸುಬ್ಬಾರೆಡ್ಡಿ ತೊಡೆ ತಟ್ಟಿದ್ದೇ ತಡ, ಫಿಲ್ಮ್ ನಗರಿಯ ಕಾಂಪೌಂಡ್‌ನಲ್ಲಿ ಟೈಟಲ್ ವಾರ್ ಶುರುವಾಗಿತ್ತು.
ನಿಜ ಹೇಳ್ಬೇಕಂದ್ರೆ, 2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್‌ರಂತ ಬಿಗ್ ರೇಂಜ್ ಸ್ಟಾರ್ಸ್‌ಗಳಿರೋ ಜ್ಯಾಕ್‌ಪಾಟ್ ಪ್ರಾಜೆಕ್ಟ್‌ಗೆ ಈ ಹೆಸರೇ ಬೇಕು ಅಂತ ರಾಜಮೌಳಿ ಅನೌನ್ಸ್ ಮಾಡಿದಾಗ ಸುಬ್ಬಾರೆಡ್ಡಿ ಹರ್ಟ್ ಆಗಿದ್ದು ಹೌದು. ಟೈಟಲ್ ಕಳೆದುಕೊಂಡ ಸಿಟ್ಟಿನಲ್ಲಿ ಇಡೀ ತೆಲುಗು ಫಿಲ್ಮ್ ಛೇಂಬರ್‌ಗೆ ವಿಷಯ ತಲುಪಿ, ಗಾಂಧಿನಗರ ಶೈಲಿಯಲ್ಲೇ ಟಾಲಿವುಡ್‌ನಲ್ಲೂ ಪಂಚಾಯಿತಿ ರಂಗೇರಿತ್ತು.
ವಿಷಯ ಸೀರಿಯಸ್ ಆಗ್ತಿದ್ದಂತೆಯೇ ರಂಗಕ್ಕಿಳಿದ ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್ ಸೆಕ್ರೆಟರಿ ಪ್ರಸನ್ನ ಕುಮಾರ್ ಮತ್ತು ಡೈರೆಕ್ಟರ್ಸ್ ಅಸೋಸಿಯೇಷನ್ ಮಾಜಿ ಪ್ರೆಸಿಡೆಂಟ್ ವೀರಶಂಕರ್, ಡೈರೆಕ್ಟರ್ ಸುಬ್ಬಾರೆಡ್ಡಿ ಜೊತೆ ಹೈ-ವೋಲ್ಟೇಜ್ ಚರ್ಚೆ ನಡೆಸಿದ್ರು. ಆರಂಭದಲ್ಲಿ ಶೀರ್ಷಿಕೆಯೊಂದಿಗೆ ಭಾವುಕವಾಗಿ ಕನೆಕ್ಟ್ ಆಗಿದ್ದ ಸುಬ್ಬಾರೆಡ್ಡಿಗೆ ರಾಜಮೌಳಿ ಹಾಗೂ ಕೆ.ಎಲ್. ನಾರಾಯಣರಂತಹ ದಿಗ್ಗಜರ ಪ್ಯಾನ್ ವರ್ಲ್ಡ್ ಸಿನಿಮಾಗೆ ಈ ಟೈಟಲ್ ಸಿಕ್ಕಿದ್ರೆ ಇಡೀ ಇಂಡಸ್ಟ್ರಿಗೇ ಹೆಮ್ಮೆಅಂತ ವೀರಶಂಕರ್ ಮಾಸ್ ಡೈಲಾಗ್ ಹೊಡೆದು ತಿಳಿಹೇಳಿದ್ರು. ಈ ಮಾತು ಕೇಳಿ ಸುಬ್ಬಾರೆಡ್ಡಿ ಮನಸ್ಸು ತಕ್ಷಣವೇ ಕರಗಿ ನೀರಾಯ್ತು.
ಇಲ್ಲೇ ನೋಡಿ ಅಸಲಿ ಟ್ವಿಸ್ಟ್ ಅಡಗಿರೋದು. ಸಾಮಾನ್ಯವಾಗಿ ಇಂಥಾ ಹೈ-ಪ್ರೊಫೈಲ್ ಸಿನಿಮಾಗಳ ಟೈಟಲ್ ವ್ಯಾಪಾರದಲ್ಲಿ ಕೋಟಿ ಕೋಟಿ ಹಣ ಕೈಬದಲಾಯಿಸುತ್ತೆ. ಆದ್ರೆ, ಸುಬ್ಬಾರೆಡ್ಡಿ ಮಾತ್ರ “ಈ ಟೈಟಲ್ ನನಗೆ ಬರೀ ಬ್ಯುಸಿನೆಸ್ ಅಲ್ಲ, ಅದೊಂದು ಎಮೋಷನ್ ಇದನ್ನ ಮಾರಾಟ ಮಾಡೋಕೆ ನಾನಿಲ್ಲಿಲ್ಲ, ಇಂಡಸ್ಟ್ರಿಯ ಗೌರವಕ್ಕಾಗಿ ಬಿಡುಗಾಸು ಪಡೆಯದೇ ಉಚಿತವಾಗಿ ಬಿಟ್ಟುಕೊಡ್ತಿದ್ದೀನಿ” ಅಂತ ದೊಡ್ಡ ಮನಸು ಮಾಡಿದ್ರು, ಇದೀಗ ಟೈಟಲ್ ಹಕ್ಕನ್ನ ರಾಜಮೌಳಿ ಟೀಮ್‌ಗೆ ಹಸ್ತಾಂತರಿಸಿದ್ದಾರೆ.
ಯಾವುದೇ ರಾದ್ಧಾಂತವಿಲ್ಲದೆ, ಸೈಲೆಂಟ್ ಆಗಿ ಸುಖಾಂತ್ಯ ಕಂಡಿರೋ ಈ ಟೈಟಲ್ ವಿವಾದದಿಂದೀಗ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಚಿತ್ರಕ್ಕೆ ದೊಡ್ಡ ವಿಘ್ನವೊಂದು ನಿವಾರಣೆಯಾಗಿದೆ. ಬಿಗ್ ಬಜೆಟ್ ಸಿನಿಮಾಗೆ ಮಾಸ್ ಶೀರ್ಷಿಕೆ ಫಿಕ್ಸ್ ಆಗಿದ್ದು, ಯಾವುದೇ ಅಡೆತಡೆ ಇಲ್ಲದೇ ರಾಜಮೌಳಿ ಪಡೆ ಈಗ ‘ವಾರಣಾಸಿ’ ಕಡೆ ಗಮನ ಹರಿಸಿದ್ದಾರೆ.
