ಗಾಯಕಿ ಮತ್ತು ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ಅವರು ತಮ್ಮ ಎರಡನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 50 ವರ್ಷದ ರಘು ದೀಕ್ಷಿತ್ ಮತ್ತು 34 ವರ್ಷದ ವಾರಿಜಶ್ರೀ ಅವರು ಇಂದು ಬೆಂಗಳೂರಿನಲ್ಲಿ ಸರಳ ಹಾಗೂ ಶಾಸ್ತ್ರೋಕ್ತ ಸಮಾರಂಭದಲ್ಲಿ ವಿವಾಹವಾದರು.
ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಸಂಗೀತ ಕ್ಷೇತ್ರದ ಕೆಲವು ಗಣ್ಯರ ಸಮ್ಮುಖದಲ್ಲಿ ಈ ಮಧುರ ಕ್ಷಣ ನಡೆದಿದೆ. ಸಾಂಪ್ರದಾಯಿಕ ಹಿಂದೂ ಆಚಾರಗಳೊಂದಿಗೆ ನಡೆದ ಈ ವಿವಾಹದಲ್ಲಿ ದಂಪತಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಮಾಲೆ ಹಾಕಿಕೊಂಡು ಸಪ್ತಪದಿ ತುಳಿದರು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
ವಾರಿಜಶ್ರೀ ವೇಣುಗೋಪಾಲ್: ಸಂಗೀತ ಪ್ರತಿಭೆಯ ಹಿನ್ನೆಲೆ
ವಾರಿಜಶ್ರೀ ವೇಣುಗೋಪಾಲ್ ಅವರು ಒಬ್ಬ ಪ್ರತಿಭಾವಂತ ಗಾಯಕಿ ಮತ್ತು ಕೊಳಲು ವಾದಕಿಯಾಗಿದ್ದು, ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಗೌರವ ಅವರದ್ದಾಗಿದೆ. ಸಂಗೀತ ಕುಟುಂಬದಿಂದ ಬಂದ ವಾರಿಜಶ್ರೀ, ಕರ್ನಾಟಕ ಸಂಗೀತ ಮತ್ತು ಸಮಕಾಲೀನ ಸಂಗೀತ ಎರಡರಲ್ಲೂ ಜನಪ್ರೀಯತೆ ಗಳಿಸಿದ್ದಾರೆ. ಅವರ ಸಂಗೀತ ಪ್ರತಿಭೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ ಮತ್ತು ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರು ತಮ್ಮ ಕಲಾಪ್ರದರ್ಶನ ನೀಡಿದ್ದಾರೆ.
ರಘು ದೀಕ್ಷಿತ್ ಮೊದಲ ವಿವಾಹ
ರಘು ದೀಕ್ಷಿತ್ ಅವರು ಈ ಹಿಂದೆ ಪ್ರಸಿದ್ಧ ನರ್ತಕಿ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. 2019ರಲ್ಲಿ ಇಬ್ಬರ ನಡುವೆ ಡಿವೋರ್ಸ್ ಆಗಿ ದೂರವಿದ್ದಾರೆ. ಈಗ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆಗೆ ರಘು ದೀಕ್ಷಿತ್ ಅವರು ತಮ್ಮ ಜೀವನದ ಎರಡನೇ ಅಧ್ಯಾಯವನ್ನು ಆರಂಭಿಸಿದ್ದಾರೆ. ಸಂಗೀತ ಪ್ರೇಮವೇ ಅವರಿಬ್ಬರನ್ನು ಕೂಡಿಸಿದ ಹಿನ್ನೆಲೆಯಲ್ಲಿ, ಈ ಜೋಡಿ ವೈವಾಹಿಕ ಜೀವನದಲ್ಲಿ ಸಂಗೀತದ ಹೊಸ ಸ್ವರಗಳನ್ನು ಸೃಷ್ಟಿಸುವರೆಂದು ನಿರೀಕ್ಷಿಸಲಾಗಿದೆ.





