ಕಳೆದ ವರ್ಷಾಂತ್ಯಕ್ಕೆ ತರೆಕಂಡು ಬಾಕ್ಸ್ ಆಫೀಸ್ ರೂಲ್ ಮಾಡಿದಂತಹ ಪುಷ್ಪರಾಜ್, ಇದೀಗ ಜಾಪನೀಸ್ ಗಲ್ಲಾ ಪೆಟ್ಟಿಗೆಗೂ ಕೈ ಹಾಕ್ತಿದ್ದಾರೆ. ಯೆಸ್.. ಜಾಪನೀಸ್‌ಗೆ ಡಬ್ ಆಗಿರೋ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಜಪಾನ್‌ನಲ್ಲಿ ತೆರೆಗಪ್ಪಳಿಸೋಕೆ ಸಜ್ಜಾಗಿದೆ. ಟ್ರೈಲರ್ ಹೇಗಿದೆ..? ಯಾವಾಗ ರಿಲೀಸ್ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ಜಪಾನ್ ಬಾಕ್ಸಾಫೀಸ್‌ಗೆ ಅಲ್ಲು ಅರ್ಜುನ್ ಗ್ರ್ಯಾಂಡ್ ಎಂಟ್ರಿ
- ಜನವರಿ 16ರಿಂದ ಜಾಪನೀಸ್‌ನಲ್ಲಿ ‘ಪುಷ್ಪ’ರಾಜ್ ರೂಲ್..!
- ಸಿನಿಮಾ ಓಪನ್ ಆಗೋದೇ ಜಪಾನ್ ಮಾರ್ಕೆಟ್‌ನಿಂದ..!
- 30 ದಿನದಲ್ಲಿ ಜಾಪನೀಸ್ ಕಲಿಯಿರಿ ಬುಕ್.. ಅಲ್ಲು ಕಿಕ್..!
ಪುಷ್ಪ-2.. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದಂತಹ ಪುಷ್ಪ ಸಿನಿಮಾದ ಸೀಕ್ವೆಲ್. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಮ್ಮ ಕನ್ನಡದ ರಶ್ಮಿಕಾ ಮಂದಣ್ಣ ಕಾಂಬೋನಲ್ಲಿ ತಯಾರಾದ ಮಸ್ತ್ ಮನರಂಜನಾತ್ಮಕ ಸಿನಿಮಾ. ಅದೇ ಕಾರಣಕ್ಕೆ ಜನ ವರ್ಲ್ಡ್‌ವೈಡ್ ಅದನ್ನ ಇಷ್ಟ ಪಟ್ಟು ನೋಡುವುದರ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿದ್ರು. ಹೌದು.. ಕಳೆದ ವರ್ಷಾಂತ್ಯ ಡಿಸೆಂಬರ್ 5ರಂದು ತೆರೆಕಂಡ ಪುಷ್ಪ-2 ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1800 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಗಳಿಸಿತು.
ರಕ್ತಚಂದನ ಮರಗಳ ಸ್ಮಗ್ಲರ್ ಒಬ್ಬ, ಸಿಎಂನೇ ಬದಲಾಯಿಸೋ ರೇಂಜ್‌ಗೆ ಬೆಳೆಯುತ್ತಾನೆ ಅನ್ನೋ ಕಮರ್ಷಿಯಲ್ ಎಂಟರ್‌ಟೈನರ್ ಪುಷ್ಪ- ದಿ ರೂಲ್ ಸಿನಿಮಾ ನೋಡುಗರಿಗೆ ಬೇಜಾನ್ ಕಿಕ್ ಕೊಟ್ಟಿತ್ತು. ಇದೀಗ ಅದೇ ಪುಷ್ಪರಾಜ್ ಜಪಾನ್ ಬಾಕ್ಸ್ ಆಫೀಸ್‌ಗೂ ಲಗ್ಗೆ ಇಡ್ತಿದ್ದಾರೆ. ಯೆಸ್.. ಹೊಸ ವರ್ಷಕ್ಕೆ ಅಂದ್ರೆ 2026ರ ಜನವರಿ 16ರಂದು ಪುಷ್ಪ-2 ಸಿನಿಮಾ ಜಾಪನೀಸ್ ಭಾಷೆಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿದೆ.
ಈಗಾಗ್ಲೇ ಪುಷ್ಪ-2 ಸಿನಿಮಾ ಜಾಪನೀಸ್ ಭಾಷೆಗೆ ಡಬ್ಬಿಂಗ್ ಕೂಡ ಆಗಿದ್ದು, ಟ್ರೈಲರ್ ಇಂಪ್ರೆಸ್ಸೀವ್ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಪುಷ್ಪ-2 ಸಿನಿಮಾ ಶುರು ಆಗೋದೇ ಜಪಾನ್ ನೆಲದಿಂದ. ಅದ್ರಲ್ಲೂ ಜಾಪನೀಸ್ ಮಾತನಾಡುವ ಹೀರೋ ಮೂಲಕ. ಹೌದು.. ಕಂಟೈನರ್‌ನಲ್ಲೇ 30 ದಿನದಲ್ಲಿ ಜಾಪನೀಸ್ ಕಲಿಯಿರಿ ಅನ್ನೋ ಬುಕ್ ಇಟ್ಕೊಂಡು, ಜಾಪನೀಸ್ ಕಲಿತು ಮಾತನಾಡೋ ಆತ, ಅಲ್ಲಿನ ಪ್ರೇಕ್ಷಕರ ದಿಲ್ ದೋಚಿದ್ದರು. ಹಾಗಾಗಿ ಸದ್ಯ ಪುಷ್ಪ-2 ಜಪಾನ್ ರಿಲೀಸ್‌ಗೆ ಅದು ಪ್ಲಸ್ ಆಗಲಿದೆ.
ಈ ಹಿಂದೆ ದಂಗಲ್, ಕೆಜಿಎಫ್, ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳೆಲ್ಲಾ ಜಾಪನೀಸ್‌ಗೆ ಡಬ್ ಆಗಿ ರಿಲೀಸ್ ಆಗಿದ್ದವು. ಅಲ್ಲಿನ ಪ್ರೇಕ್ಷಕರಿಗೆ ನಮ್ಮ ಇಂಡಿಯನ್ ಮೂವೀಸ್ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಪುಷ್ಪ-2 ಕೂಡ ಈ ಬಾರಿ ಅವ್ರಿಗೆ ರುಚಿಸುವುದರ ಜೊತೆ ಹೌಸ್‌ಫುಲ್ ಪ್ರದರ್ಶನ ಕಾಣುವ ಸೂಚನೆ ಸಿಕ್ಕಿದೆ. ಅಟ್ಲೀ ಸಿನಿಮಾದ ಶೂಟಿಂಗ್ ಬಿಟ್ಟು, ಪುಷ್ಪ-2 ಜಾಪನೀಸ್ ರಿಲೀಸ್ ಪ್ರಮೋಷನ್ಸ್‌ಗೆ ಅಲ್ಲು ಅರ್ಜುನ್ ತೆರಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





