ಬೆಂಗಳೂರು: ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ “ಅಪ್ಪು” ಮೊಬೈಲ್ ಆಪ್‌ನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುನೀತ್ ಮತ್ತು ಅವರ ಸಹೋದರಿ ಅಶ್ವಿನಿ ರಾಜಕುಮಾರ್ ರಾಜಕಾರಣದಲ್ಲಿ ಪ್ರವೇಶಿಸಲು ನಿರಾಕರಿಸಿದ್ದರ ಬಗ್ಗೆ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದರು.
“ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಅನೇಕ ಬಾರಿ ಪ್ರಯತ್ನಿಸಿದೆ. ಚಾಕಲೇಟ್ ಕೊಟ್ಟು ಆಮಿಷ ಒಡ್ಡಿದ್ದೇನೆ. ಆದರೆ ಅವರು ಬರಲಿಲ್ಲ. ಅಶ್ವಿನಿ ಅವರನ್ನೂ ಆಹ್ವಾನಿಸಿದ್ದೆ. ಅವರು ತಮ್ಮ ಪತಿಯ ಹಾದಿಯಲ್ಲೇ ನಡೆಯುತ್ತೇನೆ ಎಂದು ಹೇಳಿ ತಿರಸ್ಕರಿಸಿದರು. ಸಕ್ರಿಯ ರಾಜಕಾರಣಕ್ಕೆ ಬರದಿದ್ದರೂ ಮುಖ್ಯವಾಹಿನಿಯಲ್ಲಿರಿ ಎಂದು ಸಲಹೆ ನೀಡಿದ್ದೆ. ಇದನ್ನು ಇಷ್ಟು ದಿನಗಳವರೆಗೆ ಬಹಿರಂಗಪಡಿಸಿರಲಿಲ್ಲ. ಇಂದು ಹೇಳುತ್ತಿದ್ದೇನೆ” ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಈ ಆಪ್ ಮೂಲಕ ಪುನೀತ್ ಅವರ ಕೆಲಸಗಳು ತಂತ್ರಜ್ಞಾನದ ಸಹಾಯದಿಂದ ಜೀವಂತವಾಗಿ ಉಳಿಯಲಿವೆ ಎಂದು ಅವರು ಹೇಳಿದರು. ರಾಮಾಯಣ ಮತ್ತು ಮಹಾಭಾರತದಂತೆ ಪುರಾಣಗಳು ನೂರಾರು ವರ್ಷಗಳಿಂದ ನಮ್ಮ ನಡುವೆ ಬೆಳೆದುಕೊಂಡಿವೆ. ಅದೇ ರೀತಿ ಎಐ ತಂತ್ರಜ್ಞಾನದ ಮೂಲಕ ಪುನೀತ್ ಅವರ ಬಾಲ್ಯದಿಂದ ಕೊನೆಯ ದಿನಗಳವರೆಗಿನ ಚಿತ್ರಣವನ್ನು ನೈಜವಾಗಿ ಸೃಷ್ಟಿಸಲಾಗಿದೆ. ಭೀಮ, ಅರ್ಜುನ, ರಾಮನಂತಹ ಪಾತ್ರಗಳನ್ನು ಎಐಯಲ್ಲಿ ಚಿತ್ರಿಸುವಂತೆ, ಪುನೀತ್ ಅವರ ಜೀವನವೂ ಇಲ್ಲಿ ಬೆಳಕು ಕಾಣುತ್ತದೆ. ಅವರ ಕೊನೆಯುಸಿರಿನ ಸಂದರ್ಭದಲ್ಲಿ ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳು ಸ್ಥಾಪನೆಯಾದವು. ಮಕ್ಕಳಿಗೆ ಅವರ ಹೆಸರನ್ನು ಇಟ್ಟರು. ಕತ್ತಲೆಗೆ ಹೋದ ಅಪ್ಪು ಈಗ ತಂತ್ರಜ್ಞಾನದ ಬೆಳಕಿಗೆ ಬಂದಿದ್ದಾರೆ ಎಂದು ಭಾವುಕರಾದರು.
ಡಿಸಿಎಂ ಶಿವಕುಮಾರ್ ಅವರು ತಮ್ಮ ಸ್ನೇಹಿತರ ಬಗ್ಗೆ ಹೇಳುತ್ತಾ, “ನನಗೆ ಹಲವು ರಾಜ್ಯಗಳ ಸಿನಿಮಾ ಸ್ನೇಹಿತರು ಇದ್ದಾರೆ. ಆದರೆ ಯಾರೂ ಇಂತಹ ಆಲೋಚನೆ ಮಾಡಿಲ್ಲ. ಪುನೀತ್ ಹೆಸರಿನಲ್ಲಿ ಈ ಆಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟಿಸುವುದು ನನ್ನ ಭಾಗ್ಯ” ಎಂದರು. ಅಪ್ಪು ಮನುಷ್ಯತ್ವದ ದೊಡ್ಡ ಉದಾಹರಣೆ ಎಂದು ಬಣ್ಣಿಸಿದ ಅವರು, ಸಮಾಜದಿಂದ ಪಡೆದು ಸಮಾಜಕ್ಕೆ ಕೊಟ್ಟಿದ್ದಾರೆ. ದೇವರು ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಸಾವು ಯಾರ ಕೈಯಲ್ಲೂ ಇಲ್ಲ. ನಾವು ನೆರೆಹೊರೆಯವರು. ಒಟ್ಟಿಗೆ ಜಿಮ್‌ಗೆ ಹೋಗುತ್ತಿದ್ದೆವು. ಅವರ ತರಬೇತುದಾರ ನನ್ನ ತರಬೇತುದಾರರೊಂದಿಗೆ ಕೊನೆಯ ಕ್ಷಣದಲ್ಲಿ ಇದ್ದರು. ಅದನ್ನು ನನಗೆ ತಿಳಿಸಿದರು ಎಂದು ನೆನಪಿಸಿಕೊಂಡರು.
ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡ ಶಿವಕುಮಾರ್, “ನಾನು ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಅತಿ ಹೆಚ್ಚು ಓಡಿದ ಸಿನಿಮಾ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸದರಲ್ಲಿ ಹೆಂಡತಿಯನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದೆ. ಒಂದು ಪ್ರದರ್ಶನ ಆರಂಭಿಸಿದರೆ 15 ದಿನ ಓಡುತ್ತಿತ್ತು. ರಾಜಕುಮಾರ್ ಅಭಿನಯ ಅದ್ಭುತವಾಗಿತ್ತು. ಈಗಲೂ 20ಕ್ಕೂ ಹೆಚ್ಚು ಚಿತ್ರಮಂದಿರಗಳು ನನ್ನದು. ಸಿನಿಮಾ ರಂಗ ನಮ್ಮನ್ನು ಬಿಡುತ್ತಿಲ್ಲ” ಎಂದರು.
ಪುನೀತ್ ಅವರ ಕೆಲಸದ ಬಗ್ಗೆ ಮಾತನಾಡುತ್ತಾ, “ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಮಹಾತ್ಮ ಗಾಂಧಿ ಹೇಳುವಂತೆ, ನಿಮ್ಮನ್ನು ನಿಯಂತ್ರಿಸಲು ಮೆದುಳು, ಇತರರನ್ನು ನಿಯಂತ್ರಿಸಲು ಹೃದಯ ಬಳಸಿ. ಪುನೀತ್ ಹೃದಯವಂತಿಕೆಯಿಂದ ಕೆಲಸ ಮಾಡಿದರು. ಈ ಆಪ್ ಮೂಲಕ ಅದನ್ನು ಮುಂದುವರೆಸಲಾಗಿದೆ” ಎಂದರು.
ಸರ್ಕಾರದ ಎಲ್‌ಇಡಿ ಬಲ್ಬ್ ಯೋಜನೆಗೆ ಪುನೀತ್ ಅವರನ್ನು ರಾಯಭಾರಿ ಮಾಡಿದ್ದು ನೆನಪಿಸಿದರು. ನಾನು ತಂತ್ರಜ್ಞಾನದಿಂದ ದೂರವಿದ್ದೇನೆ. ಟಿವಿ ಆನ್ ಮಾಡಲು ಮಕ್ಕಳ ಸಹಾಯ ಕೇಳುತ್ತೇನೆ. ಆದರೆ ಯುದ್ಧದಲ್ಲಿ ಒಂದು ಬಟನ್‌ನಿಂದ ಸ್ಪೋಟಗಳು ಸಂಭವಿಸುತ್ತವೆ ಎಂದು ಉದಾಹರಣೆ ನೀಡಿದರು. ರಾಮಾಯಣ, ಮಹಾಭಾರತದಂತೆ ಪುರಾಣಗಳು ಇಂದಿಗೂ ಜೀವಂತ. ಬಾಲ್ಯದಲ್ಲಿ ದೂರದರ್ಶನದಲ್ಲಿ ಮಹಾಭಾರತ ನೋಡುತ್ತಿದ್ದೆವು. ಈಗ ಎಐ ಮೂಲಕ ಹೊಸ ರೂಪದಲ್ಲಿ ಬರುತ್ತಿದೆ. ಆದರೆ ಸಂದೇಶ ಒಂದೇ ಎಂದರು.





