ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ. ಅಪ್ಪು ಅವರು ಬಹಳ ಬೇಗ ನಮ್ಮನ್ನು ಬಿಟ್ಟು ಹೋದರೂ, ಅವರ ನಗು, ಅಭಿಮಾನ ಮತ್ತು ನೆನಪುಗಳು ಜೀವಂತವಾಗಿವೆ. ಇದೀಗ, ಅಪ್ಪು ಅಭಿಮಾನಿಗಳಿಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.
ಪಿಆರ್‌ಕೆ ಆಪ್ (PRK App) ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್ಪುವನ್ನು ಸದಾ ಕನೆಕ್ಟ್ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಇದೇ ಅಕ್ಟೋಬರ್ 25ರಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಆಪ್ ಅನ್ನು ಲಾಂಚ್ ಮಾಡಲಿದ್ದಾರೆ. ಅಕ್ಟೋಬರ್ 18ರಂದು ಆಪ್‌ನ ಟ್ರೈಲರ್ ರಿಲೀಸ್ ಆಗಲಿದ್ದು, ಸದ್ಯಕ್ಕೆ ಟೀಸರ್ ಗಮನ ಸೆಳೆದಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ ಈ ಆಪ್ ಅನ್ನು ತಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಕುರಿತು ಸಂಪೂರ್ಣ ಮಾಹಿತಿ, ಅವರ ನಗು, ಅಭಿಮಾನ ಮತ್ತು ನೆನಪುಗಳನ್ನು ಒಂದೇ ಕಡೆ ಹಿಡಿದಿಡುವ ಈ ಆಪ್, ಅಭಿಮಾನಿಗಳಿಗೆ ಸ್ಪೂರ್ತಿ ಮತ್ತು ಸಂತೋಷದ ಮೂಲವಾಗಲಿದೆ. ಟೀಸರ್ ಅನ್ನು ಅಶ್ವಿನಿ ಅವರೇ ಲಾಂಚ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ. “ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ” ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಆಪ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
ಈ ಆಪ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?
1. ‘ಅಪ್ಪು’ ಎಂಬ ವಿಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಅಶ್ವಿನಿ ಅವರ ಪಾಡ್‌ಕಾಸ್ಟ್, ಅಪರೂಪದ ಫೋಟೋಗಳು, ಸಿನಿಮಾ ತುಣುಕುಗಳು, ಆಟಗಳು ಮತ್ತು ಸ್ಪೂರ್ತಿದಾಯಕ ಕೆಲಸಗಳನ್ನು ಇಲ್ಲಿ ನೋಡಬಹುದು. ಅಪ್ಪು ಅವರ ಜೀವನದ ವಿವಿಧ ಅಂಶಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು, ಅಭಿಮಾನಿಗಳು ಅವರ ನೆನಪುಗಳನ್ನು ಮತ್ತೆ ಮತ್ತೆ ಅನುಭವಿಸಬಹುದು.
2. ‘ಸ್ಯಾಂಡಲ್‌ವುಡ್’ ವಿಭಾಗ. ಇದರಲ್ಲಿ ಕನ್ನಡ ಸಿನಿಮಾ ರಂಗದ ಬಗ್ಗೆ ಸಂಪೂರ್ಣ ಅಪ್‌ಡೇಟ್ ಸಿಗುತ್ತದೆ. ಯಾವ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ, ಯಾರೆಲ್ಲಾ ನಟಿಸಿದ್ದಾರೆ, ಟ್ರೈಲರ್, ಸಾಂಗ್ಸ್ ಮತ್ತು ನ್ಯೂಸ್ ಎಲ್ಲವೂ ಒಂದೇ ಕಡೆ ಸಿಗಲಿದೆ. ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಇದು ಉತ್ತಮ ಪ್ಲಾಟ್‌ಫಾರ್ಮ್ ಆಗಲಿದೆ.
3. ‘ಕನೆಕ್ಟ್’ ವಿಭಾಗ. ಇದರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುವವರಿಗೆ ನೆಟ್‌ವರ್ಕಿಂಗ್ ಅವಕಾಶ ದೊರಕಲಿದೆ. ಸಬ್‌ಸ್ಕ್ರಿಪ್ಷನ್ ಮೂಲಕ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ನಿರ್ಮಾಪಕರು, ನಿರ್ದೇಶಕರು, ನಟರು ಮತ್ತು ತಾಂತ್ರಿಕ ಸಿಬ್ಬಂದಿ ಇಲ್ಲಿ ಕನೆಕ್ಟ್ ಆಗಬಹುದು.
4. ಪಾಡ್‌ಕಾಸ್ಟ್ ವಿಭಾಗ. ನಿರೂಪಕಿ ಅನುಶ್ರೀ ಅವರ ನೇತೃತ್ವದಲ್ಲಿ ‘ಪವರ್ ಸ್ಟಾರ್ ಪಾಡ್‌ಕಾಸ್ಟ್. ನಾ ಕಂಡ ಅಪ್ಪು’ ಎಂಬ ಕಾರ್ಯಕ್ರಮ ನೋಡಬಹುದು. ಇದರಲ್ಲಿ ಅಶ್ವಿನಿ ಅವರು ಅಪ್ಪು ಜೊತೆಗಿನ ಪ್ರೀತಿ ಮತ್ತು ಬದುಕಿನ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಸಿನಿಮಾ ರಂಗದ ಕಲಾವಿದರು, ಹಿತೈಷಿಗಳು ಅಪ್ಪು ಬಗ್ಗೆ ಸ್ಮರಣೀಯ ವಿಚಾರಗಳನ್ನು ಹೇಳುತ್ತಾರೆ. ಇದನ್ನು ಸಂಚಿಕೆಗಳ ರೂಪದಲ್ಲಿ ಪ್ರಸಾರ ಮಾಡಲಾಗುತ್ತದೆ.
5. ಫಿಟ್ನೆಸ್ ವಿಭಾಗ. ಅಪ್ಪು ಅವರಿಗೆ ಫಿಟ್ನೆಸ್ ಬಹಳ ಇಷ್ಟ. ಎಐ ತಂತ್ರಜ್ಞಾನ ಬಳಸಿ ಅಪ್ಪು ಜೊತೆ ಫಿಟ್ನೆಸ್ ಚಾಲೆಂಜ್‌ಗಳನ್ನು ತೆಗೆದುಕೊಳ್ಳಬಹುದು. ಪುಶ್‌ಅಪ್, ಸೋಮರ್ ಸಾಲ್ಟ್, ಬ್ಯಾಕ್‌ಫ್ಲಿಪ್, ಪ್ಲಾಂಕ್, ಯೋಗ ಹೀಗೆ ವಿವಿಧ ಚಾಲೆಂಜ್‌ಗಳ ಮೂಲಕ ಆರೋಗ್ಯದ ಬಗ್ಗೆ ಸಲಹೆ ನೀಡಲಾಗುತ್ತದೆ. ಅಭಿಮಾನಿಗಳು ತಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಲು ಇದು ಸಹಾಯಕವಾಗಲಿದೆ.
6. ಕ್ವಿಜ್ ವಿಭಾಗ. ‘ಜಾಣೆಗೊಂದು ಸವಾಲು’. ಕನ್ನಡದ ಕೋಟ್ಯಾಧಿಪತಿ ರೀತಿಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಆಡಬಹುದು. ಇದರಿಂದ ಜ್ಞಾನ ಹೆಚ್ಚಾಗುತ್ತದೆ ಮತ್ತು ಮನರಂಜನೆ ಸಿಗುತ್ತದೆ.
7. ‘ಕಿಡ್ಸ್ ಜೋನ್’. ಚೋಟಾ ಅಪ್ಪು ಎಐ ಮೂಲಕ ಪದ್ಯಗಳು, ನೀತಿ ಕಥೆಗಳು ಹೇಳುತ್ತಾರೆ. ಮಕ್ಕಳನ್ನು ರಂಜಿಸುವ ಮತ್ತು ಶಿಕ್ಷಣ ನೀಡುವ ಅಂಶಗಳು ಇದರಲ್ಲಿ ಇರಲಿವೆ.
8. ಗ್ಯಾಲರಿ ಮತ್ತು ಗೇಮ್‌ಗಳು. ಅಪ್ಪು ಅವರ ವಿಶೇಷ ಫೋಟೋಗಳು, ಅಭಿಮಾನಿಗಳು ತಮ್ಮ ನೆನಪುಗಳನ್ನು ಹಂಚಿಕೊಳ್ಳುವ ಅವಕಾಶ. ಆಟಗಳ ಮೂಲಕ ಅಪ್ಪುವನ್ನು ನೆನಪಿಸಿಕೊಳ್ಳಬಹುದು.
ಈ ಆಪ್‌ನ ಟ್ರೈಲರ್ ಅಕ್ಟೋಬರ್ 18ರ ಶನಿವಾರ ಬೆಳಗ್ಗೆ 11:55ಕ್ಕೆ ರಿಲೀಸ್ ಆಗಲಿದೆ. ಅಶ್ವಿನಿ ಅವರು ಸೋಷಿಯಲ್ ಮೀಡಿಯಾದಲ್ಲಿ “ಬರ್ತಿದೆ ಒಂದು ಪವರ್‌ಫುಲ್ ಟ್ರೈಲರ್… ಮತ್ತೆ ಅಪ್ಪುವನ್ನು PRK App ಮೂಲಕ ಕಣ್ಣುಂಬಿಕೊಳ್ಳಲು ರೆಡಿಯಾಗಿ” ಎಂದು ಪೋಸ್ಟ್ ಮಾಡಿದ್ದಾರೆ.