ಒಳ್ಳೆಯ ಹುಡುಗ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ, ಪ್ರಾಣ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು ಹಾಗೂ ಲೇಡಿ ಡಾನ್ ಯಶಸ್ವಿನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಷರತ್ತುಬದ್ಧ ಜಾಮೀನು ನೀಡಿದ್ದ ಕೋರ್ಟ್, ಷರತ್ತು ಉಲ್ಲಂಘನೆಗಾಗಿ ಬೇಲ್ ಕ್ಯಾನ್ಸಲ್ ಮಾಡಿ, ಬಂಧಿಸಿದ್ದಾರೆ. ಈ ಮೂಲಕ ನಟ ಪ್ರಥಮ್ ಹೋರಾಟಕ್ಕೆ ಬಹುದೊಡ್ಡ ಜಯ ಸಿಕ್ಕಿದೆ.
- ಡ್ಯಾಗರ್ ತೋರಿಸಿ ಬೆದರಿಸಿದವರು ಅಂದರ್.. ಪ್ರಥಮ್‌ಗೆ ಜಯ
- ಷರತ್ತುಗಳ ಉಲ್ಲಂಘನೆ.. ಬೇಕರಿ ರಘು-ಯಶಸ್ವಿನಿ ಇಬ್ರೂ ಅರೆಸ್ಟ್
- ದರ್ಶನ್ ವಿಚಾರ ಫ್ಯಾನ್ಸ್ನಿಂದ ಕಿರುಕುಳ ಎದುರಿಸಿದ್ದ ಪ್ರಥಮ್
- ಸಿಟಿ ಬಿಟ್ಟು ಊರು ಸೇರಿರುವ ಪ್ರಥಮ್‌ಗೆ ಇದು ಮೊದಲ ವಿಕ್ಟರಿ
ಒಳ್ಳೆಯ ಹುಡುಗ, ಕರ್ನಾಟಕದ ಅಳಿಯ, ಬಿಗ್‌ಬಾಸ್ ಲಾರ್ಡ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ನಟ, ನಿರ್ದೇಶಕ ಪ್ರಥಮ್ ಬೆಂಗಳೂರು ಬಿಟ್ಟು, ಹುಟ್ಟಿದ ಊರು ಸೇರಿದ್ದಾರೆ. ಬೆಂಗಳೂರು ಸಹವಾಸವೂ ಬೇಡ, ಚಿತ್ರರಂಗವೂ ಬೇಡ ಅಂತ ಹೆಂಡ್ತಿ ಸಮೇತ ಊರಲ್ಲಿರೋ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್ ಹಾಗೂ ಅವರ ಕೆಲ ಅಭಿಮಾನಿಗಳು.
ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂಣೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದ ನಟ ದರ್ಶನ್‌ನ ನೋಡಲು ಬರ್ತಿದ್ದ ಕೆಲ ಅಭಿಮಾನಿಗಳ ವಿರುದ್ಧವಾಗಿ ಪ್ರಥಮ್ ಮಾತನಾಡಿದ್ರು. ನನಗೊಂದು ಕಾನ್ಸ್‌ಟೇಬಲ್ ಹುದ್ದೆ ನೀಡಿದ್ರೆ ದೊಣ್ಣೆಯಿಂದ ಅಲ್ಲಿರೋರನ್ನ ಹೊಡೆದು ಓಡಿಸ್ತೀನಿ. ಅಲ್ಲಿರೋರಿಗೆ ಅಮ್ಮ-ಅಪ್ಪನಿಗೆ ಒಂದೊತ್ತು ಊಟ ಹಾಕೋಕೂ ಯೋಗ್ಯತೆ ಇಲ್ಲ ಅಂದಿದ್ರು. ಅದಾದ ಬಳಿಕ ಪ್ರಥಮ್‌ಗೆ ಮೆಸೇಜ್, ಕಾಲ್‌ಗಳ ಮೂಲಕ ಸಾಕಷ್ಟು ಬೆದರಿಕೆಗಳನ್ನ ಹಾಕಿದ್ರು ದರ್ಶನ್ ಅಭಿಮಾನಿಗಳು.
ಅದ್ರಿಂದ ಬೇಸತ್ತ ಪ್ರಥಮ್ ಪೊಲೀಸ್ ಠಾಣೆಯಲ್ಲಿ ಕೆಲವರ ವಿರುದ್ಧ ದೂರು ಕೂಡ ದಾಖಲಿಸಿದ್ರು. ಆ ಪುಂಡ ಅಭಿಮಾನಿಗಳಿಗೆ ಖಾಕಿ ಲಾಠಿ ರುಚಿ ಕೂಡ ತೋರಿಸಿತ್ತು. ಅಷ್ಟಕ್ಕೇ ನಿಲ್ಲದ ಆ ಕಿಚ್ಚು, ಇತ್ತೀಚೆಗೆ ದೊಡ್ಡಬಳ್ಳಾಪುರದ ಬಳಿ ದೇವರ ಕಾರ್ಯಕ್ಕೆಂದು ಹೋಗಿದ್ದ ಪ್ರಥಮ್‌ಗೆ ರೌಡಿಶೀಟರ್‌ಗಳಿಂದ ಡ್ರ್ಯಾಗರ್ ತೋರಿಸಿ, ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು. ಅದರಲ್ಲಿ ರೌಡಿ ಶೀಟರ್ ಬೇಕರಿ ರಘು ಹಾಗೂ ಲೇಡಿ ಡಾನ್ ಅಂತಲೇ ಕರೆಯಲ್ಪಡುವ ಯಶಸ್ವಿನಿ ಕೂಡ ಇದ್ದರು. ಹಾಗಾಗಿ ಕೂಡಲೇ ಪ್ರಥಮ್ ಅವರಿಬ್ಬರ ವಿರುದ್ಧ ದೂರು ದಾಖಲಿಸಿದ್ರು.
ಪೊಲೀಸರು ಬೇಕರಿ ರಘು ಹಾಗೂ ಯಶಸ್ವಿನಿಯನ್ನ ಅರೆಸ್ಟ್ ಮಾಡಿದ್ರು. ಆದ್ರೆ ಕೋರ್ಟ್‌ನಿಂದ ಷರತ್ತುಬದ್ಧ ಬೇಲ್ ಪಡೆದು ಹೊರಬಂದಿದ್ರು ರೌಡಿಶೀಟರ್‌ಗಳು. ಹೊರಗೆ ಬಂದ ಬಳಿಕ ಷರತ್ತುಗಳನ್ನ ಉಲ್ಲಂಘಿಸಿದ್ದು, ಅದೇ ಪ್ರಕರಣದಲ್ಲಿ ಬೇಲ್ ಕ್ಯಾನ್ಸಲ್ ಮಾಡಿ, ಅರೆಸ್ಟ್ ಮಾಡಿದ್ದಾರೆ ದೊಡ್ಡಬಳ್ಳಾಪುರ ಪೊಲೀಸರು. ಅಂದಹಾಗೆ ಪ್ರತೀ ಭಾನುವಾರ ಸ್ಟೇಷನ್‌ಗೆ ತೆರಳಿ ಸಹಿ ಹಾಕಬೇಕಿತ್ತು. ಹೊರ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ ಪ್ರಕರಣದ ಬಗ್ಗೆ ಮಾತನಾಡುವಂತಿರಲಿಲ್ಲ. ಆದಾಗ್ಯೂ ಕೂಡ ಪ್ರಥಮ್ ವಿರುದ್ಧ ಮಾತನಾಡಿದ್ರು ಆರೋಪಿಗಳು. ಇವೆರಡೂ ಕಾರಣಗಳಿಂದಾಗಿ ಬೇಕರಿ ರಘು, ಯಶಸ್ವಿನಿಯನ್ನ ಬಂಧಿಸಲಾಗಿದೆ. ಸದ್ಯ ಇಬ್ಬರೂ ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದಾರೆ.
ರೌಡಿಶೀಟರ್‌ಗಳು ಬೇಲ್ ಪಡೆದು ಹೊರಗೆ ಬಂದಿರೋದನ್ನ ಹಾಗೂ ಷರತ್ತುಗಳ ಉಲ್ಲಂಘನೆಯನ್ನ ಪ್ರಶ್ನಿಸಿ ಪ್ರಥಮ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ರು. ಹಾಗಾಗಿ ರೌಡಿಶೀಟರ್‌ಗಳು ಮತ್ತೆ ಅಂದರ್ ಆಗಿದ್ದಾರೆ. ಅಂದಹಾಗೆ ಪ್ರಥಮ್ ಯಾರ ತಂಟೆಗೂ ಹೋಗಲ್ಲ. ಹಾಗಂತ ಯಾರಾದ್ರೂ ತನ್ನ ತಂಟೆಗೆ ಬಂದ್ರೆ ಮಾತ್ರ ಬಿಡಲ್ಲ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಸದ್ಯ ಒಂದೆರಡು ಸಿನಿಮಾಗಳ ರಿಲೀಸ್, ಪ್ರಮೋಷನ್ಸ್ ಇದ್ದು, ಸ್ನೇಹಿತರು ಹಾಗೂ ಅಭಿಮಾನಿಗಳು ಪ್ರಥಮ್‌ನ ಚಿತ್ರರಂಗ ತೊರೆಯದಂತೆ ಮನವಿ ಮಾಡ್ತಿದ್ದಾರೆ. ಈ ಗೆಲುವು, ಪ್ರಥಮ್‌ನ ಮತ್ತೆ ವಾಪಸ್ ಬರುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
