ಬ್ಲಡ್ ಕ್ಯಾನ್ಸರ್‌ಗೆ ಬಹುಭಾಷಾ ನಟ ಪ್ರದೀಪ್ ರಾವತ್ ಬಲಿ!

ಕಿಚ್ಚ-ದಚ್ಚು ವಿಲನ್.. ಗಜಿನಿ ಪ್ರದೀಪ್ ರಾವತ್‌‌ಗೆ ಏನಾಗಿತ್ತು..?

ಈಶ್ವರ ಖಂಡ್ರೆ (13)

ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ ಪ್ರದೀಪ್ ರಾವತ್ ಇನ್ನು ನೆನಪು ಮಾತ್ರ.  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತೀಯ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ನಟರಾಗಿದ್ದ ಪ್ರದೀಪ್‌,‌ ಮುಂಬೈನ ಆಸ್ಪತ್ರೆಯಲ್ಲಿ ಇನ್ನಿಲ್ಲವಾಗಿದ್ದಾರೆ.

ಕಿಚ್ಚ-ದಚ್ಚು ವಿಲನ್.. ಗಜಿನಿ ಪ್ರದೀಪ್ ರಾವತ್‌‌ಗೆ ಏನಾಗಿತ್ತು..?

ಬ್ಲಡ್ ಕ್ಯಾನ್ಸರ್‌ಗೆ ಬಹುಭಾಷಾ ನಟ ಪ್ರದೀಪ್ ರಾವತ್ ಬಲಿ..!

ಪತ್ನಿ & ಇಬ್ಬರ ಮಕ್ಕಳನ್ನ ಅಗಲಿದ ಸೈ ಚಿತ್ರದ ಭಿಕ್ಷು ಯಾದವ್

ಮಹಾಭಾರತದ ಅಶ್ವತ್ಥಾಮ ಪಾತ್ರದಿಂದ ಬೆಳಕಿಗೆ ಬಂದ ಸ್ಟಾರ್

ಪ್ರದೀಪ್ ರಾವತ್.. ನಮ್ಮ ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ. 74 ವರ್ಷದ ಇವರು, ಕೆಲ ದಿನಗಳಿಂದ ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಆಗಸ್ಟ್ 4ರ ಸಂಜೆ 6 ಗಂಟೆಗೆ ಮುಂಬೈನ ಕೋಕಿಲಾ ಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಇಡೀ ಸಿನಿದುನಿಯಾ ಕಂಬನಿ ಮಿಡಿಯುವುದರ ಜೊತೆಗೆ ಸಂತಾಪ ಸೂಚಿಸಿದೆ.

80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆರ್. ಬಿ. ಚೋಪ್ರಾ ಅವ್ರ ಮಹಾಭಾರತ ಸೀರೀಸ್‌‌ನ ಅಶ್ವತ್ಥಾಮ ಪಾತ್ರದ ಮೂಲಕ ಎಲ್ಲರ ಮನಸ್ಸು ಗೆದ್ದಂತಹ ಪ್ರದೀಪ್ ರಾವತ್, ಅದಾದ ಬಳಿಕ ಮತ್ತೆ ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. ಹೌದು.. ಗಜಿನಿ, ಲಗಾನ್, ಸೈ, ನಾಯಕ್.. ಹೀಗೆ ನೂರಾರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಪ್ಯಾನ್ ಇಂಡಿಯಾ ಕಲಾವಿದ ಅನಿಸಿಕೊಂಡಿದ್ದಾರೆ.

ಪ್ರದೀಪ್ ರಾವತ್ ಬರೀ ಹಿಂದಿಗಷ್ಟೇ ಸೀಮಿತ ಆಗದೆ, ಸೌತ್ ಸಿನಿದುನಿಯಾದಲ್ಲೂ ಬಹುದೊಡ್ಡ ನೇಮು, ಫೇಮು ಮಾಡಿದ ಸ್ಟಾರ್ ಆಗಿದ್ರು. ಖಳನಾಯನಟ, ಪೋಷಕ ನಟನಾಗಿ ಹೆಚ್ಚು ಗುರ್ತಿಸಿಕೊಂಡಿದ್ದರು. ತೆಲುಗು, ತಮಿಳು, ಮಲಯಾಳಂ ಹಾಗೂ ನಮ್ಮ ಕನ್ನಡ ಚಿತ್ರರಂಗಕ್ಕೂ ಅವರು ಚಿರಪರಿಚಿತರು. ಅಲ್ಲದೆ, ಇಂಗ್ಲಿಷ್, ಒಡಿಯಾ, ಬೆಂಗಾಳಿ, ಭೋಜ್‌ಪುರಿ, ನೇಪಾಳಿ, ಮರಾಠಿ.. ಹೀಗೆ ಹತ್ತಾರು ಭಾಷೆಗಳಲ್ಲಿ ನಟಿಸಿದ ಗರಿಮೆ ಇವರಿಗಿದೆ.

ತೆಲುಗಿನಲ್ಲಿ ನಿತಿನ್ ನಟನೆಯ ಸೈ, ರವಿತೇಜಾ ನಟನೆಯ ಭದ್ರ, ಪ್ರಭಾಸ್ ಛತ್ರಪತಿ, ಚಿರಂಜೀವಿ ಅವರ ಸ್ಟಾಲಿನ್, ಅಲ್ಲು ಅರ್ಜುನ್ ದೇಶಮುದುರು ಸೇರಿದಂತೆ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ನಟಿಸಿದ್ದಾರೆ ಪ್ರದೀಪ್ ರಾವತ್. ಅವ್ರ ಡೈಲಾಗ್ ಡೆಲಿವರಿ, ಆ ವಿಲನ್‌ಗಿರಿಯ ಗತ್ತು, ಗೈರತ್ತಿಗೆ ಫಿದಾ ಆಗದವರೇ ಇರಲಿಲ್ಲ. ಅಂದಹಾಗೆ ಸೈ ಚಿತ್ರದ ಭಿಕ್ಷು ಯಾದವ್‌ ಟಾಲಿವುಡ್ ಚಿತ್ರಪ್ರೇಮಿಗಳ ಆಲ್‌ಟೈಂ ಫೇವರಿಟ್ ರೋಲ್.

ನಮ್ಮ ಕನ್ನಡ ಚಿತ್ರರಂಗದಲ್ಲಿ ಸಹ ದರ್ಶನ್ ಜೊತೆ ಗಜ, ಅಭಯ್ ಸಿನಿಮಾಗಳಿಂದ ಗಮನ ಸೆಳೆದಿದ್ದ ಪ್ರದೀಪ್ ರಾವತ್, ಬಾದ್‌ಷಾ ಸುದೀಪ್ ಅವ್ರ ಬಚ್ಚನ್‌ನಲ್ಲಿ ಮಿನಿಸ್ಟರ್ ಮಧುಸೂಧನ್ ಪಾತ್ರಕ್ಕೆ ಬಣ್ಣ ಹಚ್ಚಿದ್ರು. ಅಲ್ಲದೆ, ಶಿವಣ್ಣ ನಟನೆಯ ಶಿವಲಿಂಗ ಸಿನಿಮಾದಲ್ಲೂ ಅಭಿನಯಿಸಿದ್ರು ರಾವತ್. ಉಪೇಂದ್ರ ಅವರ ತ್ರಿಶೂಲಂ ಚಿತ್ರದಲ್ಲಿ ನಟಿಸಿದ್ರು. ಬಹುಶಃ ಅದೇ ಅವರ ಕಟ್ಟ ಕಡೆಯ ಕನ್ನಡ ಸಿನಿಮಾ ಕೂಡ ಹೌದು ಎನ್ನಬಹುದು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ ಅವರಿಗೆ ಇಡೀ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿ, ಕುಟುಂಬಕ್ಕೆ ಶಕ್ತಿ ತುಂಬುತ್ತಿದೆ.

 

 

Exit mobile version