ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?

ಬುಡಕಟ್ಟು ಸಮುದಾಯದ ಕೆಂಗಣ್ಣಿಗೆ ಗುರಿಯಾದ್ರಾ ಮೇಕರ್ಸ್?

Untitled design 2026 06 09T183641.373

ಲಾಜಿಕ್ ಇಲ್ಲದ ಸಿನಿಮಾದಿಂದ ಬಾಕ್ಸ್ ಆಫೀಸ್‌‌ನಲ್ಲಿ ಮ್ಯಾಜಿಕ್ ಮಾಡ್ತಿದ್ದಾರೆ ಪೆದ್ದಿ ಡೈರೆಕ್ಟರ್ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಲ್ಲದೆ, ನಾಯಕನಟಿಯನ್ನ ತುಂಬಾ ಕೆಟ್ಟದಾಗಿ ತೋರಿಸಿರೋದಕ್ಕೆ ಮೇಕರ್ಸ್ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ರು. ಆದ್ರೀಗ ಪೆದ್ದಿ ಚಿತ್ರತಂಡದ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗ್ತಿದೆ. ಅದ್ಯಾಕೆ..? ಇಷ್ಟೊಂದು ವಿಘ್ನಗಳೇಕೆ..? ಇಲ್ಲಿದೆ ಉತ್ತರ.

ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಾ, ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 248.92 ಕೋಟಿ ಬಾಚಿ ಸೂಪರ್ ಹಿಟ್ ಲಿಸ್ಟ್ ಸೇರಿರೋ ಪೆದ್ದಿ ಚಿತ್ರಕ್ಕೀಗ ಲೀಗಲ್ ಶಾಕ್ ತಗುಲಿದೆ. ಚಿತ್ರದಲ್ಲಿ ಬುಡಕಟ್ಟು ಸಮುದಾಯವನ್ನು ಅತ್ಯಂತ ಅವಮಾನಕರವಾಗಿ ಬಿಂಬಿಸಲಾಗಿದೆ ಎಂದು ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಗಿರಿಜನ ನಾಯಕರು ರೊಚ್ಚಿಗೆದ್ದಿದ್ದಾರೆ. ಸಿನಿಮಾದಲ್ಲಿ ಬುಡಕಟ್ಟು ಜನರ ಸಂಸ್ಕೃತಿಯನ್ನು ಕೀಳಾಗಿ ಕಾಣುವಂತಹ ಆಕ್ಷೇಪಾರ್ಹ ಡೈಲಾಗ್‌ಗಳನ್ನು ಬಳಸಲಾಗಿದ್ದು, ಇದು ಇಡೀ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡದ ವಿರುದ್ಧ SC/ST ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಾಗಿದ್ದು, ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಜೈಲು ಭೀತಿ ಶುರುವಾಗಿದೆ.

ಈ ವಿವಾದ ಕೇವಲ ಚಿತ್ರತಂಡಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಂತಹ ಆಕ್ಷೇಪಾರ್ಹ ಸಂಭಾಷಣೆಗಳಿಗೆ ಕಣ್ಣು ಮುಚ್ಚಿ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರ ಮೇಲೂ ಬುಡಕಟ್ಟು ಸಂಘಟನೆಗಳು ಕಾನೂನು ಸಮರ ಸಾರಿವೆ. ನಿರ್ದೇಶಕ ಬುಚ್ಚಿ ಬಾಬು ಸನಾ, ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ಹೌಸ್ ಜೊತೆಗೆ ಸೆನ್ಸಾರ್ ಬೋರ್ಡ್ ವಿರುದ್ಧವೂ ತಕ್ಷಣವೇ ಕಠಿಣ ಮೊಕದ್ದಮೆ ಹೂಡಬೇಕೆಂದು ಪಟ್ಟು ಹಿಡಿಯಲಾಗಿದೆ. ಸಿನಿಮಾ ಕಮರ್ಷಿಯಲ್ ಆಗಿ ಎಷ್ಟೇ ದೊಡ್ಡ ಸದ್ದು ಮಾಡುತ್ತಿದ್ದರೂ, ಈ ಅಟ್ರಾಸಿಟಿ ಕೇಸ್ ವಿವಾದ ಮಾತ್ರ ಚಿತ್ರದ ಸಕ್ಸಸ್ ಆಚರಣೆಗೆ ಸಂಪೂರ್ಣ ತಣ್ಣೀರು ಎರೆಚಿದೆ.

ಒಂದೆಡೆ ಕಾನೂನು ಸಂಕಷ್ಟ ಚಿತ್ರತಂಡದ ನಿದ್ದೆ ಗೆಡಿಸಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರದ ಸುತ್ತ ಸಿಕ್ಕಾಪಟ್ಟೆ ಟ್ರೋಲ್ ಮತ್ತು ವಿವಾದಗಳು ಸೃಷ್ಟಿಯಾಗಿವೆ. ಹಳ್ಳಿ ಹಿನ್ನೆಲೆಯ ಕಥೆಯಲ್ಲಿ ಜಾನ್ವಿ ಅವರಿಗೆ ಧರಿಸಿರುವ ಗ್ಲಾಮರಸ್ ಉಡುಪುಗಳು ಹಾಗೂ ಅವರ ಪಾತ್ರವನ್ನು ಹೈಪರ್‌ಸೆಕ್ಷುಅಲೈಸ್  ಮಾಡಿರುವ ರೀತಿ ಕಂಡು ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಒಂದು ಗ್ರಾಮೀಣ ಕಥೆಯಲ್ಲಿ ಮಹಿಳಾ ಪಾತ್ರವನ್ನು ಇಷ್ಟು ಆಕ್ಷೇಪಾರ್ಹವಾಗಿ, ಕೇವಲ ಗ್ಲಾಮರ್ ಗೊಂಬೆಯಂತೆ ಬಿಂಬಿಸುವ ಅಗತ್ಯವಿರಲಿಲ್ಲ ಎಂದು ಚಿತ್ರತಂಡದ ಕಮರ್ಷಿಯಲ್ ಬುದ್ಧಿಗೆ ಸೋಷಿಯಲ್ ಮೀಡಿಯಾದಲ್ಲಿ ಜನ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ.

ವಿಚಿತ್ರ ಅಂದ್ರೆ, ಈ ಎಲ್ಲಾ ವಿವಾದಗಳ ನಡುವೆಯೂ ಪೆದ್ದಿ ಬಾಕ್ಸ್ ಆಫೀಸ್‌ನಲ್ಲಿ  ಅಬ್ಬರಿಸುತ್ತಿದೆ. ಭಾರತದಲ್ಲೇ 169.70 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಪೆದ್ದಿ ಸಿನಿಮಾದ ರಾಮ್ ಚರಣ್ ಕ್ರೇಜ್‌ಗೆ ಸಾಕ್ಷಿಯಾಗಿದೆ. ಆದರೆ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವಷ್ಟರಲ್ಲೇ ಇಷ್ಟೊಂದು ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿರುವುದು ಚಿತ್ರದ ಲಾಂಗ್ ರನ್ ಕಲೆಕ್ಷನ್‌ಗೆ ಪೆಟ್ಟು ನೀಡುವ ಭೀತಿ ಮೂಡಿಸಿದೆ. ಯಶಸ್ಸಿನ ಸಿಹಿ ಉಣ್ಣಬೇಕಾದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈಗ ಕೋರ್ಟ್, ಕಚೇರಿ ಹಾಗೂ ಸಾರ್ವಜನಿಕರ ಆಕ್ರೋಶವನ್ನು ತಣಿಸಲು ಬ್ಯಾಕ್-ಸ್ಟೇಜ್ ಪ್ಲಾನ್ ಮಾಡಲು ಬ್ಯುಸಿಯಾಗಿದೆ.

ಒಟ್ಟಿನಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದರೂ ಪೆದ್ದಿ ಚಿತ್ರಕ್ಕೆ ಸದ್ಯಕ್ಕೆ ನೆಮ್ಮದಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಬುಡಕಟ್ಟು ಜನಾಂಗದ ಆಕ್ರೋಶ ಅಟ್ರಾಸಿಟಿ ಕೇಸ್ ರೂಪದಲ್ಲಿ ಚಿತ್ರತಂಡದ ಕುತ್ತಿಗೆಗೆ ಬಂದು ಕೂತಿದ್ದರೆ, ಇನ್ನೊಂದೆಡೆ ಜಾನ್ವಿ ಕಪೂರ್ ಪಾತ್ರದ ಗ್ಲಾಮರ್ ಅತಿರೇಕ ಸೋಷಿಯಲ್ ಮೀಡಿಯಾದಲ್ಲಿ ಇಮೇಜ್‌ಗೆ ಧಕ್ಕೆ ತರುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ರಾಮ್ ಚರಣ್ ಸಕ್ಸಸ್ ಲೈನ್ ಮುಂದುವರಿಸಿದ್ದರೂ, ಈ ವಿಘ್ನಗಳ ಸರಮಾಲೆಯನ್ನು ಚಿತ್ರತಂಡ ಹೇಗೆ ದಾಟಲಿದೆ ಮತ್ತು ಸೆನ್ಸಾರ್ ಮಂಡಳಿ ಈ ಗಂಡಾಂತರದಿಂದ ಹೇಗೆ ಪಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಿವಾದಗಳೇ ಸಿನಿಮಾಗೆ ಮತ್ತಷ್ಟು ಹೈಪ್ ತಂದುಕೊಡುತ್ತವೋ ಅಥವಾ ಕಲೆಕ್ಷನ್‌ಗೆ ಬ್ರೇಕ್ ಹಾಕುತ್ತವೋ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version