ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗೆಸಿ’ ಚಿತ್ರದ ಟೀಸರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಪ್ರಚಾರದ ಲಿಂಕ್‌ಗಳನ್ನು ತಕ್ಷಣವೇ ತೆಗೆದು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಚಿತ್ರದ ಪ್ರಚಾರದಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಪರೋಕ್ಷವಾಗಿ ಸಲ್ಮಾನ್ ಖಾನ್ ಅವರೊಂದಿಗೆ ಜೋಡಿಸಿರುವುದು ಅವರ ಗೌರವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
‘ಗೌರವ ಒಮ್ಮೆ ಹೋದರೆ ಮರಳಿ ಸಿಗುವುದಿಲ್ಲ’
ಸಲ್ಮಾನ್ ಖಾನ್ ಸಲ್ಲಿಸಿದ್ದ ಮಧ್ಯಂತರ ತಡೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠ, ಚಿತ್ರದ ನಿರ್ಮಾಪಕ ಅಮಿತ್ ಜಾನಿ ನೀಡಿದ್ದ ಸಂದರ್ಶನಗಳ ವಿಡಿಯೋಗಳನ್ನು ಸಹ ಡಿಲೀಟ್ ಮಾಡುವಂತೆ ಸೂಚಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠ, “ಇದು ಇಲ್ಲಿಗೇ ನಿಲ್ಲಬೇಕು. ಒಮ್ಮೆ ಹೋದ ಗೌರವ ಮತ್ತೆ ಎಂದಿಗೂ ಮರಳಿ ಬರುವುದಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಲಾರೆನ್ಸ್ ಬಿಷ್ಣೋಯ್ ವಿವಾದಕ್ಕೂ ಕೋರ್ಟ್ ಕಳವಳ
ಚಿತ್ರದ ಪ್ರಚಾರ ಸಾಮಗ್ರಿಗಳು ಸಲ್ಮಾನ್ ಖಾನ್ ಹಾಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ವಿವಾದವನ್ನು ಮತ್ತೆ ಕೆರಳಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಈ ಸಿನಿಮಾದ ಪ್ರಚಾರ ಆರಂಭವಾದ ತಕ್ಷಣವೇ ಸಲ್ಮಾನ್ ಖಾನ್ ಚಿತ್ರತಂಡಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಸಲ್ಮಾನ್ ಖಾನ್ ಅರ್ಜಿಯಲ್ಲಿ ಏನಿತ್ತು?
ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರ ಹೆಸರನ್ನು ನೇರವಾಗಿ ಬಳಸದೇ ಇದ್ದರೂ, ಟೀಸರ್ ಮತ್ತು ಪೋಸ್ಟರ್‌ನಲ್ಲಿ ಅವರನ್ನೇ ಹೋಲುವ ಪಾತ್ರ, ಅವರ ಪ್ರಸಿದ್ಧ ನೀಲಿ ಬ್ರೇಸ್‌ಲೆಟ್, ಗನ್ ಹಿಡಿದ ದೃಶ್ಯಗಳನ್ನು ಬಳಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ತಮ್ಮ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಲ್ಮಾನ್ ಖಾನ್ ಆರೋಪಿಸಿದ್ದಾರೆ. ಜೊತೆಗೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ತಾವು ಈಗಾಗಲೇ ಖುಲಾಸೆಯಾಗಿದ್ದರೂ, ತಪ್ಪು ಸಂದೇಶ ನೀಡುವ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ವ್ಯಕ್ತಿತ್ವದ ಹಕ್ಕು ಉಲ್ಲಂಘನೆ ಆರೋಪ
ಸಲ್ಮಾನ್ ಖಾನ್ ಪರ ವಕೀಲರು, ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಸಂದರ್ಶನಗಳು ಹಾಗೂ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಳಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ನಟನ ಅನುಮತಿಯಿಲ್ಲದೆ ಅವರ ವ್ಯಕ್ತಿತ್ವ ಹಾಗೂ ಸಾರ್ವಜನಿಕ ಇಮೇಜ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
