ಗೇಮ್ ಚೇಂಜರ್ ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ರಿಲೀಸ್ ಆದ ಮೊಟ್ಟ ಮೊದಲ ಸಿನಿಮಾ ಹರಿಹರ ವೀರಮಲ್ಲು. ಇದೇ ಮೊದಲ ಬಾರಿಗೆ ಐತಿಹಾಸಿಕ ಕಥೆಗೆ ಬಣ್ಣ ಹಚ್ಚಿದ್ದ ಪವರ್ ಸ್ಟಾರ್‌ಗೆ ಪ್ರೇಕ್ಷಕರು ಶಾಕ್ ನೀಡಿದ್ದಾರೆ. ಸಿನಿಮಾ ಅಟ್ಟರ್ ಫ್ಲಾಪ್ ಆಗಿದ್ದು, ಸೋಲೋಕೆ ಪ್ರೇಕ್ಷಕರು ಕೊಟ್ಟ ಕಾರಣಗಳೇನು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- DCMಗೆ ಭಾರೀ ಮುಖಭಂಗ.. ವೀರಮಲ್ಲು ಅಟ್ಟರ್ ಫ್ಲಾಪ್
- ಡೈರೆಕ್ಟರ್ ಇಲ್ಲದೆ ಚಿತ್ರ ರೆಡಿ.. ಕ್ವಾಲಿಟಿ ಬರೋಕೆ ಸಾಧ್ಯವೇ..?
- ಕಳಪೆ ಗ್ರಾಫಿಕ್ಸ್.. ಪವನ್ ಕಲ್ಯಾಣ್ ಎಫರ್ಟ್ ಎಲ್ಲಾ ವ್ಯರ್ಥ
- 2 ದೋಣಿ ಮೇಲೆ ಪವನ್ ಪಯಣ.. ಪ್ರಮೋಷನ್ಸ್ ಕೊರತೆ
ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆದ ಬಳಿಕ ರಿಲೀಸ್ ಆದ ಮೊದಲ ಸಿನಿಮಾ ಹರಿಹರ ವೀರಮಲ್ಲು. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸಿದ್ದು, ಪ್ರೇಕ್ಷಕರು ನೀರಸ ಪ್ರತಿಕ್ರಿಯೆ ನೀಡ್ತಿದ್ದಾರೆ. ವಿಮರ್ಶಕರು ಏನಂತ ರಿವ್ಯೂ ಕೊಡೋದು ಅಂತ ತಡಬಡಾಯಿಸ್ತಿದ್ದಾರೆ. ಹೌದು.. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಹರಿಹರ ವೀರಮಲ್ಲು ಸಿನಿಮಾ ಬಾಕ್ಸ್ ಆಫೀಸ್ ಜೊತೆ ಚಿತ್ರಪ್ರೇಮಿಗಳಿಂದ ಬಹುಪರಾಕ್ ಅನಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಇದೇ ಮೊದಲ ಬಾರಿಗೆ ಐತಿಹಾಸಿಕ ಕಥೆಯೊಂದಕ್ಕೆ ಬಣ್ಣ ಹಚ್ಚಿದ್ದ ಪವನ್ ಕಲ್ಯಾಣ್, ಮೊಘಲ್ ಸಾಮ್ರಾಜ್ಯದ ಬ್ಯಾಕ್‌ಡ್ರಾಪ್ ಕಥೆಯಲ್ಲಿ ಧರ್ಮಕ್ಕಾಗಿ ಯುದ್ಧಕ್ಕೆ ನಿಂತಿದ್ದರು. ಖಳನಾಯಕನಾಗಿ ಬಾಲಿವುಡ್‌ನಿಂದ ಔರಂಗಾಜೇಬ್ ಪಾತ್ರಕ್ಕೆ ಬಾಬಿ ಡಿಯೋಲ್ ಕೂಡ ಬಂದಿದ್ರು. ಆದ್ರೆ ಸಿನಿಮಾ ಹತ್ತು ಹಲವು ಕಾರಣಗಳಿಂದ ರುಚಿಸುತ್ತಿಲ್ಲ. ಅದಕ್ಕೆ ಚಿತ್ರಪ್ರೇಮಿಗಳೇ ನೀಡಿರೋ ಒಂದಷ್ಟು ಕಾರಣಗಳನ್ನ ನಿಮ್ಮ ಮುಂದೆ ಇಡ್ತೀವಿ ನೋಡಿ.
ಮೊದಲಿಗೆ ಹರಿಹರ ವೀರಮಲ್ಲು ಸಿನಿಮಾಗೆ ಸರಿಯಾದ ಸಾರಥಿಯೇ ಇಲ್ಲ. ಹೌದು.. ಇಂತಹ ವಾರ್ ಬೇಸ್ಡ್ ಹಿಸ್ಟಾರಿಕ್ ಮೂವಿಗಳನ್ನ ಮಾಡೋಕೆ ನುರಿತ, ಪರಿಣಿತ ನಿರ್ದೇಶಕರು ಬೇಕು. ಆದ್ರೆ ಈ ಸಿನಿಮಾನ ಶುರು ಮಾಡಿದ ಡೈರೆಕ್ಟರ್ ಕ್ರಿಶ್ ಕಾರಣಾಂತರಗಳಿಂದ ಹೊರಬಂದರು. ನಂತ್ರ ನಿರ್ಮಾಪಕ ಜ್ಯೋತಿ ಕೃಷ್ಣ ಅವರೇ ಆ್ಯಕ್ಷನ್ ಕಟ್ ಹೇಳಲು ಮುಂದಾದ್ರು. ನಿರ್ದೇಶನ ಅನುಭವದ ಕೊರತೆ ಇರೋ ಅವರಿಂದ ಈ ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿಲ್ಲ.
ಸೋಲಿಗೆ ಎರಡನೇ ಕಾರಣ ಏನಪ್ಪಾ ಅಂದ್ರೆ ಕಳಪೆ ಗ್ರಾಫಿಕ್ಸ್. ಈ ಹಿಂದೆ ಆದಿಪುರುಷ್ ಸಿನಿಮಾಗೆ ಮಾಡಿದಂತೆ ಕೆಟ್ಟದಾಗಿ ಗ್ರಾಫಿಕ್ಸ್ ಮಾಡಿರೋದು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣ್ತಿದೆ. ಅತಿಯಾದ ಗ್ರಾಫಿಕಲ್ ಹಾಗೂ ವಿಎಫ್‌ಎಕ್ಸ್ ಸಿನಿಮಾಗೆ ಅವಶ್ಯಕತೆ ಇದ್ದು, ಅದನ್ನ ಸಮರ್ಪಕವಾಗಿ ನಿಭಾಯಿಸಿಲ್ಲ ಪ್ರೊಡಕ್ಷನ್ ಹೌಸ್. ಅದು ಕೂಡ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ತೀವ್ರ ನಿರಾಸೆ ತಂದಿದೆ.
ಮೂರನೇ ಕಾರಣ ಸಿನಿಮಾಗೆ ಬೇಕಾಗುವಷ್ಟು ಪ್ರಚಾರ ಕಾರ್ಯಗಳನ್ನ ಮಾಡದಿರೋದು. ಎರಡೆರಡು ದೋಣಿಗಳ ಮೇಲೆ ಕಾಲಿಟ್ಟಿರೋ ಪವನ್ ರಾಜಕೀಯ ಹಾಗೂ ಸಿನಿಮಾ ಎರಡೂ ಕಡೆ ಗಮನ ಕೊಡೋಕೆ ಕಷ್ಟವಾಗಿದೆ. ಹಾಗಾಗಿಯೇ ಸಿನಿಮಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ಗಜಿಬಿಜಿಯಾಗಿದೆ. ಸಾಮಾನ್ಯವಾಗಿ ಪವನ್ ಚಿತ್ರಗಳು ಸಿಕ್ಕಾಪಟ್ಟೆ ಹೈಪ್ ಪಡೆಯುತ್ತವೆ. ಆದ್ರೆ ಈ ಸಿನಿಮಾ ರಿಲೀಸ್ ಅಂಚಿನಲ್ಲಿ ಎರಡು ದಿನ ಪವನ್ ಪ್ರಚಾರಕ್ಕೆ ಬಂದ ಹಿನ್ನೆಲೆ ತಕ್ಕ ಮಟ್ಟಿಗೆ ಪ್ರಮೋಷನ್ಸ್ ಆಯಿತಷ್ಟೇ.
ಕರ್ನಾಟಕದಲ್ಲಿ ಥಿಯೇಟರ್ ಮ್ಯಾನೇಜರ್‌ಗಳು ಗ್ಯಾರಂಟಿ ಪಿಚ್ಚರ್‌ಗೆ ನೀಡಿದ ಮಾಹಿತಿ ಪ್ರಕಾರ ಸಿನಿಮಾದ ಮಧ್ಯೆಯೇ ಜನ ಎದ್ದು ಹೋಗ್ತಿದ್ದಾರೆ. ಇಂತಹ ಕೆಟ್ಟ ಸಿನಿಮಾ ನೋಡೋಕೆ ಸಮಯ ಮತ್ತು ಹಣ ವ್ಯರ್ಥ ಮಾಡಿದ್ವಾ ಅಂತ ಪಶ್ಚಾತ್ತಾಪ ಪಡ್ತಿದ್ದಾರಂತೆ. ಅಲ್ಲದೆ, ಆನ್‌ಲೈನ್ ಟಿಕೆಟ್ಸ್ ಬುಕಿಂಗ್ ಮಾಡಿದ್ದವರಲ್ಲಿ ಬಹುತೇಕ ಮಂದಿ ಟಿಕೆಟ್ಸ್‌ನ ಕ್ಯಾನ್ಸಲ್ ಮಾಡಿಕೊಳ್ತಿದ್ದಾರಂತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್