ಹೆಸರಲ್ಲೇ ಇದೆ ‘ಕಲ್ಯಾಣ’.. ಈತ ಕಲ್ಯಾಣಗಳ ಸರದಾರ

Untitled design (18)

ಕಂಕಣಭಾಗ್ಯ.. ಅಂದ್ರೆ ಕಲ್ಯಾಣ ಅನ್ನೋದು ಪವನ್ ಹೆಸರಲ್ಲೇ ಇದೆ. ಹಾಗಾಗಿ ಚಿರಂಜೀವಿ ಸಹೋದರ ಒಂಥರಾ ಕಲ್ಯಾಣಗಳ ಸರದಾರ. ಒಂದಲ್ಲ ಎರಡಲ್ಲ ಮೂರು ಮದ್ವೆಗಳಾದ್ರೂ ಎಲ್ಲವೂ ಬ್ರೇಕಪ್.. ಡಿವೋರ್ಸ್. ಹಾಗಾದ್ರೆ ನಾಲ್ಕನೇ ಮದ್ವೆ ಆಗ್ತಾರಾ ಆಂಧ್ರ ಡಿಸಿಎಂ..? ಮೂರು ವರ್ಷಗಳ ಹಿಂದೆಯೇ ಸೆಲೆಬ್ರಿಟಿ ಜ್ಯೋತಿಷಿ ನುಡಿದಿದ್ದ ಭವಿಷ್ಯ ಆದ್ರೂ ಏನು..? ಇಲ್ಲಿದೆ ಕಂಪ್ಲೀಟ್ ಕಹಾನಿ.
ಪವನ್ ಕಲ್ಯಾಣ್ ಜಾತಕದಲ್ಲಿದೆ ಇನ್ನೊಂದು ಮದುವೆ

ಯೆಸ್.. ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅವರು ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಬಗ್ಗೆ ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು.. ಹೌದಲ್ವಾ ಅಂತ ಜನ ಹುಬ್ಬೇರಿಸಿ ನೋಡುವಂತಾಗಿದೆ. 2023ರಲ್ಲಿ ಅಂದ್ರೆ ಮೂರು ವರ್ಷಗಳ ಹಿಂದೆಯೇ ಪವನ್ ಕಲ್ಯಾಣ್ ಗುರುಬಲಗಳ ಬಗ್ಗೆ ಲೆಕ್ಕಾಚಾರ ಹಾಕಿದ್ರು ಈ ಜ್ಯೋತಿಷಿ.

ಅದರ ಪ್ರಕಾರ ಪವನ್ ಕಲ್ಯಾಣ್ ಮೂರರಿಂದ ನಾಲ್ಕು ಮದ್ವೆಗಳನ್ನ ಆಗ್ತಾರೆ ಅಂದಿದ್ರು. ಅಲ್ಲಿಗೆ ಇನ್ನೂ ಒಂದು ಮದ್ವೆ ಆಗೋದು ಬಾಕಿಯಿದೆ ಪವನ್. ವೇಣುಸ್ವಾಮಿ ಭವಿಷ್ಯ ಸಾಕಷ್ಟು ಸೆಲೆಬ್ರಿಟಿಗಳ ವಿಷಯದಲ್ಲಿ ನಿಜವಾಗಿದ್ದು, ಅವ್ರು ನುಡಿದ ಮಾತುಗಳನ್ನ ಅಷ್ಟು ಸುಲಭವಾಗಿ ಅಲ್ಲಗೆಳೆಯುವ ಹಾಗಿಲ್ಲ. ಈ ಹಿಂದೆ ಸಮಂತಾ-ನಾಗಚೈತನ್ಯ ಡಿವೋರ್ಸ್ ಹಾಗೂ ಮರು ಮದುವೆ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಇದೀಗ ಪವನ್ ವಿಷಯದಲ್ಲೂ ಅದೇ ಆಗ್ತಿರೋದು ಅಚ್ಚರಿ.

90ರ ದಶಕದಲ್ಲಿ ನಟ ಪವನ್ ಕಲ್ಯಾಣ್.. ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಹಾಗೂ ಗೋಕುಲಂಲೋ ಸೀತಾ ಚಿತ್ರಗಳಿಂದ ಹೀರೋ ಆಗಿ ಲಾಂಚ್ ಆದ್ರು. ಆದ್ರೆ ಅದಕ್ಕೂ ಮುನ್ನ ಆತ ಫಿಲ್ಮ್ ಕೋರ್ಸ್ ಕಲಿಕೆಗಾಗಿ ವಿಶಾಖಪಟ್ಟಣಂಗೆ ತೆರಳಿದ್ದರು. ಆಗ ವೈಜಾಗ್‌‌ನ ದೊಡ್ಡ ಬ್ಯುಸಿನೆಸ್‌‌ಮ್ಯಾನ್ ಮಗಳು ನಂದಿನಿಯೊಂದಿಗೆ ಪ್ರೀತಿಯಲ್ಲಿ ಬೀಳ್ತಾರೆ ಪವನ್ ಕಲ್ಯಾಣ್. ಸಿನಿಮಾ ಕರಿಯರ್‌‌ನ ಕಟ್ಟಿಕೊಳ್ಳೋದು ಬಿಟ್ಟು ಹದಿಹರೆಯದ ಆ ವಯಸ್ಸಿನಲ್ಲಿ ನಂದಿನಿಯನ್ನ ಪತ್ನಿಯನ್ನಾಗಿಸಿಕೊಂಡು, ಹೊಸ ಬಾಳಿಗೆ ಕಾಲಿಡ್ತಾರೆ ಪವರ್ ಸ್ಟಾರ್.

1997ರಿಂದ 1999ರ ವೇಳೆಗೆ.. ಅಂದ್ರೆ ಎರಡೇ ವರ್ಷದಲ್ಲಿ ಇವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳುತ್ತದೆ. ನಂತ್ರ ಪರಸ್ಪರ ದೂರ ಉಳಿದಿದ್ದ ಈ ಜೋಡಿ 2008ರಲ್ಲಿ ವಿಚ್ಚೇದನ ಪಡೆಯುತ್ತೆ. ಅಲ್ಲಿಗೆ ಹೆಚ್ಚು ಕಡಿಮೆ ದಶಕದ ಕಾಲ ಡಿವೋರ್ಸ್‌‌ಗಾಗಿ ಕಾಯ್ತಾರೆ. ಸುಮಾರು 5 ಕೋಟಿ ರೂಪಾಯಿ ಜೀವನಾಂಶ ನೀಡುವ ಮೂಲಕ ಒನ್ ಟೈಂ ಸೆಟಲ್‌ಮೆಂಟ್ ಮಾಡಿಕೊಳ್ತಾರೆ ಪವನ್ ಕಲ್ಯಾಣ್.

ಪವನ್‌ಗೆ ನಂದಿನಿ ತನ್ನ ಲೈಫ್‌‌ನಿಂದ ಎಕ್ಸಿಟ್ ಆಗ್ತಿದ್ದಂತೆ ರೇಣು ದೇಸಾಯಿ ಎಂಟ್ರಿ ಕೊಟ್ರು ಅಂತ ಜನ ಅಂದುಕೊಳ್ತಾರೆಎ. ಆದ್ರೆ ನಟಿ ರೇಣು ದೇಸಾಯಿಗಾಗಿಯೇ ನಂದಿನಿಯನ್ನ ಕಳೆದುಕೊಳ್ತಾರೆ ಪವನ್ ಅನ್ನೋದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಹೌದು.. ಮೊದಲ ಪತ್ನಿ ನಂದಿನಿಗೆ ಮಕ್ಕಳಾಗಲಿಲ್ಲ ಅನ್ನೋದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡ ಪವನ್, ಆಕೆಗೆ ಡಿವೋರ್ಸ್ ಕೊಡೋಕೆ ಮೊದಲೇ ರೇಣು ದೇಸಾಯಿ ಜೊತೆ ರಿಲೇಷನ್‌ಶಿಪ್ ಬೆಳೆಸುತ್ತಾರೆ.

2000ನೇ ಇಸವಿಯಲ್ಲಿ ಪವನ್ ಕಲ್ಯಾಣ್ ನಟನೆಯ ಭದ್ರಿ ಸಿನಿಮಾ ತೆರೆ ಕಾಣುತ್ತೆ. ಆ ಚಿತ್ರದಲ್ಲಿ ಅಮಿಶಾ ಪಟೇಲ್ ಜೊತೆ ರೇಣು ದೇಸಾಯಿ ಕೂಡ ಒನ್ ಆಫ್ ದಿ ಹೀರೋಯಿನ್. ಅಂದ್ರೆ ನಂದಿನಿಯಿಂದ ಅಫಿಶಿಯಲಿ ಡಿವೋರ್ಸ್ ಪಡೆಯದೇನೇ ರೇಣು ಜೊತೆ ಅಕ್ರಮ ಸಂಬಂಧದಲ್ಲಿರ್ತಾರೆ ಪವನ್. ಇನ್‌‌ಫ್ಯಾಕ್ಟ್ ಬದ್ರಿ ಚಿತ್ರದಲ್ಲಿ ರೇಣುಗೆ ಮಕ್ಕಳಾಗದ ಕಾರಣ.. ಆಕೆ ಆಮಿಶಾ ಪಟೇಲ್‌ಗೆ ತನ್ನ ಪ್ರೇಮಿಯನ್ನ ಬಿಟ್ಟುಕೊಡೋ ಒಂದು ಸೀನ್ ಕೂಡ ಇದೆ. ಆ ನಂತ್ರ ರೇಣುಗಾಗಿ ತಾವೇ ಜಾನಿ ಅನ್ನೋ ಮತ್ತೊಂದು ಸಿನಿಮಾ ಕೂಡ ಡೈರೆಕ್ಟ್ ಮಾಡ್ತಾರೆ. ಜಾನಿಯಲ್ಲಿ ಅಗೈನ್ ಪವನ್‌ಗೆ ರೇಣು ದೇಸಾಯಿ ಜೋಡಿ. ಇಂಟರೆಸ್ಟಿಂಗ್ ಅಂದ್ರೆ ನಂದಿನಿಗೆ ಡಿವೋರ್ಸ್ ನೀಡೋಕೆ ಮೊದಲೇ ರೇಣು ಜೊತೆಗಿನ ಅಕ್ರಮ ಸಂಬಂಧಕ್ಕೆ ಅಕಿರಾ ನಂದನ್ ಅನ್ನೋ ಗಂಡು ಮಗು ಸಾಕ್ಷಿ ಆಗ್ತಾನೆ.

2008ರಲ್ಲಿ ಕೋರ್ಟ್‌ನಿಂದ ನಂದಿನಿ-ಪವನ್‌ಗೆ ಡಿವೋರ್ಸ್ ಸಿಗ್ತಿದ್ದಂತೆ ರೇಣು ದೇಸಾಯಿಯನ್ನ 2009ರಲ್ಲಿ ಅಫಿಶಿಯಲಿ ಎರಡನೇ ಮದ್ವೆ ಆಗ್ತಾರೆ ಪವನ್ ಕಲ್ಯಾಣ್. ಮಗುವಿನ ತಾಯಿಗೆ ತಾಳಿ ಕಟ್ಟಿ ಅಗ್ನಿಸಾಕ್ಷಿಯಾಗಿ ಪತ್ನಿ ಅಂತ ಸಮಾಜಕ್ಕೆ ಸಾರುತ್ತಾರೆ. ಆದ್ರೆ ರೇಣು ಜೊತೆಗೂ ಸಹ ಈತ ಹೊಂದಿಕೊಂಡು ಜೀವನ ನಡೆಸಲ್ಲ. 2012ರ ವೇಳೆಗೆ.. ಅಂದ್ರೆ ತಾಳಿ ಕಟ್ಟಿದ ಮೂರೇ ವರ್ಷದಲ್ಲಿ ಆಕೆಗೂ ವಿಚ್ಚೇದನ ಕೊಟ್ಟು ಬಿಡ್ತಾರೆ.

ಎರಡನೇ ಪತ್ನಿ ರೇಣು ದೇಸಾಯಿ ಜೊತೆ ಪವನ್ ತಮ್ಮ ವೈವಾಹಿಕ ಸಂಬಂಧ ಕಡಿದುಕೊಳ್ಳೋಕೆ ಕಾರಣ ಆಗೋದು ಒನ್ಸ್ ಅಗೈನ್ ಪವನ್ ಬಣ್ಣದ ಲೋಕವೇ ಅನ್ನೋದು ದುರಂತ. ಯೆಸ್.. ಎರಡು ಮಕ್ಕಳ ದಾಂಪತ್ಯಕ್ಕೆ ಸಾಕ್ಷಿಯಾದ ಇವರುಗಳ ರಿಲೇಷನ್‌ಶಿಪ್ ನಟಿ ಅನ್ನಾ ಲೆಜ್ನೆವಾರಿಂದ ಮುರಿದು ಬೀಳುತ್ತೆ. ತೀನ್‌ಮಾರ್ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರ್ತಿಸಿಕೊಂಡ ರಷ್ಯನ್ ಚೆಲುವೆ.. ಮಾಡಿದ್ದು ಸಣ್ಣ ಪಾತ್ರವೇ ಆದ್ರೂ.. ಪವನ್ ಲೈಫ್‌‌‌ನಲ್ಲಿ ದೊಡ್ಡ ಪರಿಣಾಮ ಬೀರುತ್ತಾರೆ.

ಕೊನೆಗೆ ಅದು ರೇಣು ದೇಸಾಯಿಗೆ ಪವನ್ ಡಿವೋರ್ಸ್ ನೀಡಿ.. ಅನ್ನಾ ಲೆಜ್ನೆವಾರನ್ನೇ ಮೂರನೇ ಮದ್ವೆ ಆಗೋ ಮಟ್ಟಕ್ಕೆ ಕೊಂಡೊಯ್ಯುತ್ತೆ. ಇಲ್ಲಿಯೂ ಕಹಾನಿಯಲ್ಲಿ ಒಂದು ಟ್ವಿಸ್ಟ್ ಇದೆ. ರೇಣುಗೆ ಅಫಿಶಿಯಲಿ ಡಿವೋರ್ಸ್ ಕೊಡೋಕೆ ಮೊದಲೇ ಅನ್ನಾ ಜೊತೆ ಸಂಬಂಧ ಬೆಳೆಸ್ತಾರೆ ಪವನ್. ಅವರಿಗೆ ಒಂದು ಹೆಣ್ಣು ಹಾಗು ಗಂಡು ಮಗು ಇದ್ದು, ಆ ಪೈಕಿ ಮಾರ್ಕ್ ಶಂಕರ್ ಇತ್ತೀಚೆಗೆ ಶಾಲೆಯಲ್ಲಿ ನಡೆದ ಬೆಂಕಿ ದುರಂತದಿಂದ ಪಾರಾಗಿದ್ದು ಎಲ್ಲರಿಗೂ ಗೊತ್ತೇಯಿದೆ.

2013ರಲ್ಲಿ ಮೂರನೇ ಪತ್ನಿಯನ್ನಾಗಿ ಅನ್ನಾ ಲೆಜ್ನೆವಾನ ಘೋಷಿಸಿಕೊಂಡ ಪವನ್.. ಇದೀಗ ದೀಪಾವಳಿ ಹಬ್ಬದಂತೇ ತಮ್ಮ 13 ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ಮಕ್ಕಳ ಜವಾಬ್ದಾರಿ ಇಬ್ಬರೂ ತೆಗೆದುಕೊಳ್ತಿದ್ದೀವಿ. ಆದ್ರೆ ಒಟ್ಟಿಗೆ ಇರಲ್ಲ. ವಿಚ್ಚೇದನ ಪಡೆಯುತ್ತಿದ್ದೇವೆ ಅಂತ ಸಮಾಜದ ಮುಂದೆ ಮತ್ತೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಸನ್ಮಾನ್ಯ ಆಂಧ್ರ ಡಿಸಿಎಂ ಪವನ್ ಕಲ್ಯಾಣ್.

ಇನ್ನೂ ಈ ಸಾಲು ಸಾಲು ಮದ್ವೆಗಳು ಹಾಗೂ ಡಿವೋರ್ಸ್‌‌ಗಳನ್ನೇ ಇಟ್ಟುಕೊಂಡು ಸದಾ ಟ್ರೋಲ್ ಮಾಡ್ತಿದ್ದ ವಿರೋಧ ಪಕ್ಷದ ಜಗನ್ & ಟೀಂಗೆ ಒಮ್ಮೆ ಪವನ್ ಬಹಿರಂಗವಾಗಿ ಮುಖಕ್ಕೆ ಹೊಡೆದಂತೆ ಹೀಗಂದಿದ್ರು. ನೀವೂ ಮೂರು ಮದ್ವೆ ಆಗಿ. ಮೊದಲ ಪತ್ನಿ ಜೊತೆ ಅನ್ಯೋನ್ಯವಾಗಿ ಬದುಕಲಾಗಲಿಲ್ಲ ಅಂದ್ರೆ.. ಆಕೆಗೆ ಐದು ಕೋಟಿ ಕೊಟ್ಟು ಆಗಿ ಅಂತ ಕಿಚಾಯಿಸಿದ್ರು.

ಒಟ್ಟಾರೆ ಪವನ್ ಹಾಗೂ ಅನ್ನಾ ದಾಂಪತ್ಯ ಮುರಿದು ಬೀಳಲು ಅಸಲಿ ಕಾರಣ ಏನು ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಕುರಿತು ಪವನ್ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ ತನ್ನನ್ನ ನಂಬಿರೋ ಆಂಧ್ರದ ಜನತೆ ಹಾಗೂ ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ. ಅಲ್ಲಿಯ ತನಕ ಇವ್ರ ಡಿವೋರ್ಸ್‌ಗೆ ಕಾರಣ ಮಾತ್ರ ಸಸ್ಪೆನ್ಸ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version