ಗಾಯಕ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (Palash Muchhal) ಮತ್ತೆ ಭಾರೀ ವಿವಾದದಲ್ಲಿ ಸಿಲುಕಿದ್ದಾರೆ. ನಟ-ನಿರ್ಮಾಪಕ ವಿಜ್ಞಾನ್ ಮಾನೆ (Vidnyan Mane) ಅವರು ಪಲಾಶ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಬಿಡುಗಡೆಯಾಗದ ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಸುಮಾರು ₹40 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿದ್ದಾರೆ ಎಂಬುದಾಗಿ ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜ್ಞಾನ್ ಮಾನೆ ತಮ್ಮ ದೂರಿನಲ್ಲಿ, “ನಾನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಅವರ ಬಾಲ್ಯದ ಸ್ನೇಹಿತ. ಮಂದಾನ ಕುಟುಂಬದ ಪರಿಚಯದ ಮೂಲಕ ಪಲಾಶ್ ಮುಚ್ಚಲ್ ಅವರನ್ನು ಭೇಟಿಯಾದೆ. ಅವರೊಂದಿಗೆ ಸಿನಿಮಾ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದೆ. ಆದರೆ ಈ ವ್ಯವಹಾರ ನನ್ನ ಜೀವನದ ಅತ್ಯಂತ ಕಹಿ ಅನುಭವವಾಗಿದೆ” ಎಂದು ಹೇಳಿದ್ದಾರೆ.
ಮಾನೆ ಅವರ ಹೇಳಿಕೆಯಂತೆ, ಪಲಾಶ್ ಮತ್ತು ಅವರ ಕುಟುಂಬ ಭಾಗಿಯಾಗಿದ್ದ ಚಿತ್ರಕ್ಕೆ ಮೊದಲ ಹಂತದಲ್ಲಿ ₹40 ಲಕ್ಷ ಹೂಡಿಕೆ ಮಾಡಲಾಗಿದೆ. ಬಳಿಕ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ನಿರಂತರ ಒತ್ತಡ ಹೇರಲಾಯಿತು. “ನನ್ನ ಹೂಡಿಕೆ ಹಿಂತಿರುಗಿಸಬೇಕು ಅಂದ್ರೆ ಇನ್ನೂ ₹10 ಲಕ್ಷ ನೀಡಬೇಕು ಎಂದು ಬೆದರಿಸಿದರು. ಇಲ್ಲದಿದ್ದರೆ ಚಿತ್ರದಿಂದ ನನ್ನನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದರು” ಎಂದು ಮಾನೆ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಪಲಾಶ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಅತ್ಯಂತ ಗಂಭೀರ ಆರೋಪವನ್ನೂ ಮಾನೆ ಮಾಡಿದ್ದಾರೆ. “2025ರ ನವೆಂಬರ್ 23ರಂದು ನಡೆದ ಮದುವೆ ಸಮಾರಂಭದಲ್ಲಿ ನಾನು ಹಾಜರಿದ್ದೆ. ಆ ದಿನ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಆ ದೃಶ್ಯ ಭಯಾನಕವಾಗಿತ್ತು. ಈ ಘಟನೆಯ ಬಳಿಕ ಭಾರತೀಯ ಮಹಿಳಾ ಕ್ರಿಕೆಟಿಗರು ಆತನ ಮೇಲೆ ಕೋಪ ವ್ಯಕ್ತಪಡಿಸಿದರು. ಅವರ ಇಡೀ ಕುಟುಂಬವೇ ವಂಚಕರು” ಎಂದು ಮಾನೆ ಕಿಡಿಕಾರಿದ್ದಾರೆ.
ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ಅವರ ವಿವಾಹವು 2025ರ ನವೆಂಬರ್ 23ಕ್ಕೆ ನಿಗದಿಯಾಗಿತ್ತು. ಆದರೆ ಮೊದಲಿಗೆ ಆರೋಗ್ಯ ಸಂಬಂಧಿತ ಕಾರಣ ನೀಡಿ ಮದುವೆಯನ್ನು ಮುಂದೂಡಲಾಗಿತ್ತು. ನಂತರ ಡಿಸೆಂಬರ್ 2025ರಲ್ಲಿ ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು.
“ಈ ಚಿತ್ರದಲ್ಲಿನ ಇತರ ಕಲಾವಿದರು ಕೂಡ ತಮ್ಮ ಸಂಭಾವನೆಯನ್ನು ಇನ್ನೂ ಪಡೆದಿಲ್ಲ. ಚಲನಚಿತ್ರೋದ್ಯಮದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರು ಒಟ್ಟಾಗಿ ವಂಚನೆ ನಡೆಸುತ್ತಿದ್ದಾರೆ. ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಚಿತ್ರ ಬಿಡುಗಡೆಗೆ ಸಿದ್ಧವಿದ್ದರೂ ಯಾವುದೇ ಪ್ರಗತಿ ಇಲ್ಲ. ಇದೊಂದು ಸಂಪೂರ್ಣ ಕಳ್ಳತನ” ಎಂದು ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳಿಗೆ ಪಲಾಶ್ ಮುಚ್ಚಲ್ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಸಾಂಗ್ಲಿಯ ವಿಜ್ಞಾನ್ ಮಾನೆ ಮಾಡಿರುವ ಹೇಳಿಕೆಗಳು ಸಂಪೂರ್ಣ ಸುಳ್ಳು. ನನ್ನ ಇಮೇಜ್‌ಗೆ ಧಕ್ಕೆ ತರಲು ದುರುದ್ದೇಶಪೂರಿತವಾಗಿ ಈ ಆರೋಪಗಳನ್ನು ಮಾಡಲಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.





