ಭೂತಾನ್‌ನಿಂದ ಲ್ಯುಕ್ಸರಿ ವಾಹನಗಳನ್ನು ಅಕ್ರಮವಾಗಿ ಆಮದು ಮಾಡಿ ತೆರಿಗೆ ವಂಚನೆ ನಡೆಸಿರುವ ಪ್ರಕರಣದ ತನಿಖೆಯ ಭಾಗವಾಗಿ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟರು ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಕೊಚ್ಚಿ ನಿವಾಸಗಳ ಮೇಲೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ ಓಪರೇಶನ್ ನುಮ್‌ಕೂರ್ ಎಂದು ನಾಮಕರಣ ಮಾಡಲಾಗಿದೆ.ಇದರರ್ಥ ಭೂತಾನೀ ಭಾಷೆಯಲ್ಲಿ ‘ವಾಹನ’ ಎಂದು ಹೇಳಲಾಗುತ್ತದೆ.
ದಾಳಿಯ ವಿವರಗಳು
ಕೊಚ್ಚಿಯ ಪನಂಪಿಲ್ಲಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಅವರ ನಿವಾಸ ಮತ್ತು ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೆ ಇಂದು (ಸೆ.23.2025) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೃಥ್ವಿರಾಜ್ ಅವರ ತಿರುವನಂತಪುರಂನ ಮನೆಯಲ್ಲೂ ದಾಳಿ ನಡೆಸಲಾಗಿದ್ದು, ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದ ವಾಹನಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಈ ದಾಳಿಯು ಕೇರಳ ಮತ್ತು ಲಕ್ಷದ್ವೀಪಗಳ ಕಸ್ಟಮ್ಸ್ ಕಮಿಶನರ್ ಅಧೀನದಲ್ಲಿ ನಡೆಸಲಾಗುತ್ತಿರುವ ರಾಷ್ಟ್ರವ್ಯಾಪಿ ತನಿಖೆಯ ಒಂದು ಭಾಗವಾಗಿದೆ. ಈ ಕ್ರಮವು ಕೇವಲ ನಟರ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲದೆ ರಾಜ್ಯದಾದ್ಯಂತ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ತನಿಖೆಯ ಹಿನ್ನೆಲೆ
ಭೂತಾನ್ ಸೇನೆಯಿಂದ ನಿವೃತ್ತಿ ಹೊಂದಿದ ಲ್ಯುಕ್ಸರಿ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಅವುಗಳ ಮೇಲೆ ಸಂಪೂರ್ಣ ಸುಂಕ ಮತ್ತು ತೆರಿಗೆಗಳನ್ನು ಪಾವತಿಸದೆ ಅಕ್ರಮವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವಾಗಿದೆ. ಈ ವಾಹನಗಳನ್ನು ಮೊದಲು ಹಿಮಾಚಲ ಪ್ರದೇಶಕ್ಕೆ ತರಲಾಗುತ್ತದೆ. ಅಲ್ಲಿ ನಕಲಿ ವಿಳಾಸ ಮತ್ತು ವ್ಯಕ್ತಿಗಳ ಹೆಸರನ್ನು ಬಳಸಿ ನೋಂದಣಿ ಮಾಡಲಾಗುತ್ತದೆ. ನಂತರ, ಈ ವಾಹನಗಳನ್ನು ಸಿನಿಮಾ ತಾರೆಗಳು ಮತ್ತು ಉದ್ಯಮಿಗಳಂತಹ ಹೆಸರಾಂತ ವ್ಯಕ್ತಿಗಳಿಗೆ ಅತ್ಯಧಿಕ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ವಾಹನಗಳ ಭದ್ರತೆ ಮತ್ತು ಗುಣಮಟ್ಟದ ಬಗ್ಗೆ ಖಾತರಿ ನೀಡಿ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ.
ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಇಬ್ಬರೂ ತಮ್ಮ ವಾಹನಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಬಳಿ 40 ಕ್ಕೂ ಹೆಚ್ಚು ಕಾರುಗಳಿದ್ದು, ಕೇವಲ ಬಿಎಂಡಬ್ಲ್ಯು ಬ್ರಾಂಡ್‌ನ 10 ಕ್ಕೂ ಹೆಚ್ಚು ಕಾರುಗಳು, ಎಸ್ಯುವಿ ವಾಹನಗಳು, ಪಿಕಪ್ ಟ್ರಕ್‌ಗಳು ಮತ್ತು ಸೂಪರ್ ಕಾರುಗಳು ಸೇರಿವೆ ಎಂದು ಅಂದಾಜಿಸಲಾಗಿದೆ. ಪೃಥ್ವಿರಾಜ್ ಸುಕುಮಾರನ್ ಅವರ ಸಂಗ್ರಹದಲ್ಲಿ ಆಸ್ಟಿನ್ ಮಾರ್ಟಿನ್ ಸೇರಿದಂತೆ ಹಲವಾರು ಸ್ಪೋರ್ಟ್ಸ್ ಕಾರುಗಳಿವೆ. ತನಿಖೆಯ ಸಮಯದಲ್ಲಿ ಅಧಿಕಾರಿಗಳು ಈ ವಾಹನಗಳ ನೋಂದಣಿ, ತೆರಿಗೆ ಪಾವತಿ ಮತ್ತು ಆಮದು ದಾಖಲೆಗಳನ್ನು ಪರಿಶೀಲಿಸಿದರು. ಇಬ್ಬರು ನಟರೂ ಪ್ರಸ್ತುತ ಈ ತನಿಖೆಯಲ್ಲಿ ನೇರವಾಗಿ ಸಿಲುಕಿಕೊಂಡಿದ್ದಾರೆಂದು ಹೇಳಲಾಗಿಲ್ಲ, ಆದರೆ ಅವರು ಖರೀದಿಸಿರಬಹುದಾದ ವಾಹನಗಳು ಈ ಅಕ್ರಮ ಜಾಲದೊಂದಿಗೆ ಸಂಬಂಧ ಹೊಂದಿವೆಯೇ ಎಂದು ಪರಿಶೀಲಿಸಲಾಗುತ್ತಿದೆ.