ಭಯ ಹುಟ್ಟಿಸುವ ದೆವ್ವದ ಕಥಾನಕ “ಓಮೆನ್” ಚಿತ್ರದ ಟ್ರೈಲರ್ ರಿಲೀಸ್

Untitled design 2025 07 28t162542.799

ಚಂದನವನಕ್ಕೆ ಮತ್ತೊಂದು ಯುವ ಪಡೆಗಳ ತಂಡ ಕುತೂಹಲದೊಂದಿಗೆ ವಿಭಿನ್ನ ಕಂಟೆಂಟ್ ಇರುವ, ಭಯ ಹುಟ್ಟಿಸುವ ಕಥಾನಕ “ಓಮೆನ್” ಚಿತ್ರದ ಟೈಲರ್ ಬಿಡುಗಡೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್.ಆರ್.ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಯಿತು. ಮರವಂಜಿ ಪ್ರೊಡಕ್ಷನ್ಸ್‌ ಮತ್ತು ಶ್ರೀ ಅಂಗಾಳ ಪರಮೇಶ್ವರಿ ಮೂವಿ ಮೇಕರ್ಸ್‌ ಬ್ಯಾನರ್‌ನಡಿ ಅಜಯ್‌ ಕುಮಾರ್ & ವಿ ಮಿರುನಳಿನಿ ನಿರ್ಮಾಣದಲ್ಲಿ ಸಿದ್ದವಾಗಿರುವ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನ ಯೋಜನೆಯ ಮಾಡಿತ್ತು.

ಈ ಚಿತ್ರದ ನಿರ್ದೇಶಕ ವಿಬಿನ್. ಎಸ್ .ಸಂತೋಷ್ ಮಾತನಾಡುತ್ತಾ “ಓಮೆನ್” ಎಂದರೆ ಶಕುನ ಎಂಬ ಅರ್ಥ ಬರುತ್ತದೆ. ಇದು ನಮ್ಮ ಕಥೆಗೂ ಒಂದು ರೀತಿಯ ಬೇರೆ ಅರ್ಥವನ್ನು ನೀಡುತ್ತಿದೆ. ಇದೊಂದು ಫೌಂಡ್ ಫುಟೇಜ್ ನಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಒಂದು ಮನೆಯ ಸುತ್ತ ನಡೆಯುವಂತಹ ಘಟನೆ. ಭೂತ ಬಂಗಲೆಗೆ ಇಬ್ಬರು ಪ್ರವೇಶ ಮಾಡುತ್ತಾರೆ ಅದರಲ್ಲಿ ನಾಯಕ ಅಜಯ್ ಕುಮಾರ್ ಯೂಟ್ಯೂಬರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ನೀಶ್ಮ ಶೆಟ್ಟಿ ಪ್ಯಾರಾನಾರ್ಮಲ್‌ ರಿಸರ್ಚರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಬಂದಂತ ದೆವ್ವ , ಭೂತ , ಪ್ಯಾರಾ ನಾರ್ಮಲ್ ಆಕ್ಟಿವಿಟೀಸ್ ಚಿತ್ರಗಳಿಗಿಂತ ವಿಭಿನ್ನವಾಗಿ ಬಂದಿದೆ. ಸುಮಾರು 38 ದಿನಗಳ ಕಾಲ ಆನೇಕಲ್ ಸಮೀಪದಲ್ಲಿರುವ ಹಳೆಯ ಬಿಲ್ಡಿಂಗ್ ನಲ್ಲಿ ಚಿತ್ರೀಕರಣ ಮಾಡಿದ್ದು , ನಮಗೆ ಬೇಕಾದ ರೀತಿ ಸೆಟ್ ಗಳನ್ನ ಹಾಕಿಕೊಂಡು ಚಿತ್ರೀಕರಿಸಿದ್ದೇವೆ. ನನಗೆ vfx ತಂತ್ರಜ್ಞಾನ ಗೊತ್ತಿರುವುದರಿಂದ ಈ ಚಿತ್ರಕ್ಕೆ ಏನು ಬೇಕು ಅದನ್ನು ಸರಿಯಾದ ರೀತಿ ಬಳಸಿಕೊಳ್ಳಲು ಅನುಕೂಲವಾಯಿತು. ಸಂಕಲನ ಕೆಲಸವು ನಾನೇ ಮಾಡಿದ್ದೇನೆ. ನಮ್ಮ ಚಿತ್ರದ ಹಿನ್ನೆಲೆ ಸಂಗೀತ ಬಹಳ ಉತ್ತಮವಾಗಿ ಮೂಡಿಬಂದಿದೆ. ನಿರ್ಮಾಪಕರು , ಕಲಾವಿದರು , ತಂತ್ರಜ್ಞರು ತುಂಬು ಸಹಕಾರ ನೀಡಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ಇನ್ನೂ ಚಿತ್ರದ ನಿರ್ಮಾಪಕ ಹಾಗೂ ನಟ ಅಜಯ್ ಕುಮಾರ್ ಮಾತನಾಡುತ್ತಾ ನಾನು ರೈತ ಕುಟುಂಬದಿಂದ ಬಂದವನು, ನಮ್ಮದು ಲ್ಯಾಂಡ್ ಬಿಸಿನೆಸ್ ಇದೆ. ನಾನು ಚಿತ್ರರಂಗದಲ್ಲಿ ಸಿನಿಮಾ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಟ , ನಿರ್ದೇಶಕ ಕಾಶಿನಾಥ್ ಅವರ ಕೊನೆಯ ಚಿತ್ರದಲ್ಲಿ ಕೆಲಸ ಮಾಡುತ್ತಾ ಒಂದಷ್ಟು ಒಡನಾಟವನ್ನು ಇಟ್ಟುಕೊಂಡಿದ್ದೆ. ಅವರೇ ಹೇಳುವಂತೆ ಕಥೆಯೇ ಮೂಲ ಒಂದು ಚಿತ್ರದ ಗೆಲುವಿಗೆ ಕಾರಣ ಎಂದಿದ್ದರು. ಹಾಗಾಗಿ ನಾನು ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ಅಭಿನಯಿಸಿದ್ದೇನೆ. ಇಡೀ ತಂಡ ಬಹಳ ಅಚ್ಚುಕಟ್ಟಾಗಿ ಶ್ರಮಪಟ್ಟು ಮಾಡಿದ್ದಾರೆ.

ನಮ್ಮ ಚಿತ್ರದಲ್ಲಿ ನಾಯಕಿಯಾಗಿ ನೀಶ್ಮ ಶೆಟ್ಟಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮುಂದಿನ ತಿಂಗಳು ತೆರೆಯ ಮೇಲೆ ತರುವ ಪ್ಲಾನ್ ಇದೆ. ವಿತರಕ ವಿಜಯ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಇನ್ನು ಚಿತದ ನಿರ್ಮಾಣದ ಕೊನೆ ಹಂತದಲ್ಲಿ ಸಾತ್ ನೀಡಿದಂತಹ ನಿರ್ಮಾಪಕಿ ಮಿರುನಳಿನಿ ಮಾತನಾಡುತ್ತಾ ನಮ್ಮ ಚಿತ್ರ ನೈಜ ಘಟನೆಗಳನ್ನು ನೋಡಿದಂತಹ ಅನುಭವ ಪ್ರೇಕ್ಷಕರಿಗೆ ಸಿಗುತ್ತದೆ. ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್ ನಿಂದ ಚಿತ್ರ ಚೆನ್ನಾಗಿ ಬಂದಿದೆ. ಈಗ ಚಿತ್ರ ಬಿಡುಗಡೆಯ ಎಲ್ಲಾ ಜವಾಬ್ದಾರಿ ನಾನೇ ತೆಗೆದುಕೊಂಡಿದ್ದೇನೆ ಎಂದರು.

ಈಗಾಗಲೇ ಐದು ಚಿತ್ರಗಳಿಗೆ ಸಂಗೀತ ನೀಡಿರುವ ಭುವನ್‌ ಶಂಕರ್‌ ಹಾಗೂ ಸನ್‌ಸ್ಕಾರ್‌ ಮಾತನಾಡುತ್ತಾ ನಮ್ಮ ಚಿತ್ರದಲ್ಲಿ ಯಾವುದೇ ಹಾಡಿಲ್ಲ ಆದರೆ ಹಿನ್ನೆಲೆ ಸಂಗೀತ ಬಹಳ ಚಾಲೆಂಜಿಂಗ್ ಆಗಿದ್ದು , 15 ದಿನಗಳಲ್ಲಿ ಕಂಪ್ಲೀಟ್ ಮಾಡಿದ್ದೇವೆ ಎಂದರು. ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವ ರಘು ಕಲಾವಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉಳಿದಂತೆ ಈ ಚಿತ್ರದಲ್ಲಿ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ಆಕಾಶ್ ಕುಲಕರ್ಣಿ ಅಭಿನಯಿಸಿದ್ದಾರೆ. ಆನ್ಶೋ. ಎಸ್‌. ಸೈಮನ್ ಎಸ್ಎಫ್ಎಕ್ಸ್ ಕೆಲಸ ಮಾಡಿದ್ದಾರೆ. ನಿರ್ದೇಶಕರು ಈ ಚಿತ್ರದ ಸಂಕಲನವನ್ನು ಮಾಡಿದ್ದಾರೆ. ಬಹಳಷ್ಟು ಶ್ರಮವಹಿಸಿ ಸಿದ್ಧಪಡಿಸಿರುವ ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿ ಎಲ್ಲೆಡೆ ವೈರಲ್ ಆಗಿದ್ದು , ಮುಂದಿನ ತಿಂಗಳು ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲಿದ್ದಾರೆ.

Exit mobile version