ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಕಕ್ಕರ್ (Neha Kakkar) ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹಬ್ಬಿದ್ದ ವಿಚ್ಛೇದನದ ಗಾಸಿಪ್‌ಗಳಿಗೆ ಈಗ ಸ್ವತಃ ಗಾಯಕಿಯೇ ಸ್ಪಷ್ಟನೆ ನೀಡಿದ್ದಾರೆ.
ಗೊಂದಲಕ್ಕೆ ಕಾರಣವಾದ ಆ ಒಂದು ಪೋಸ್ಟ್
ಕಳೆದ ಸೋಮವಾರ ನೇಹಾ ಕಕ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಾನು, ಜವಾಬ್ದಾರಿ, ಕೆಲಸ ಮತ್ತು ಸಂಬಂಧಗಳಿಂದ ವಿರಾಮ ಪಡೆಯುತ್ತಿದ್ದೇನೆ. ಮತ್ತೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮದವರು ಮತ್ತು ಅಭಿಮಾನಿಗಳು ತಮ್ಮ ಫೋಟೋ ತೆಗೆಯಬಾರದು ಎಂದು ವಿನಂತಿಸಿದ್ದರು.
ಈ ಪೋಸ್ಟ್ ನೋಡಿದ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ವಿಶೇಷವಾಗಿ ಸಂಬಂಧಗಳಿಂದ ವಿರಾಮ ಎಂಬ ಪದ ಬಳಕೆಯಾಗಿದ್ದರಿಂದ, ನೇಹಾ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ನಡುವೆ ಬಿರುಕು ಮೂಡಿದೆ ಮತ್ತು ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಪ್ ಕೂಡ ಹರಡಿತ್ತು.
ವದಂತಿಗೆ ನೇಹಾ ಖಡಕ್ ಉತ್ತರ
ವಿಚ್ಛೇದನದ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ನೇಹಾ ಕಕ್ಕರ್ ಅವರು ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ನನ್ನ ಮುಗ್ಧ ಪತಿ ಅಥವಾ ನನ್ನ ಪ್ರೀತಿಯ ಕುಟುಂಬವನ್ನು ಈ ವಿವಾದಕ್ಕೆ ಎಳೆದು ತರಬೇಡಿ. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು. ಇಂದು ನಾನು ಏನಾಗಿದ್ದೇನೋ ಅದಕ್ಕೆ ಅವರ ಬೆಂಬಲವೇ ಕಾರಣ ಎಂದು ಟ್ರೋಲರ್ಸ್ ವಿರುದ್ದ ಕಿಡಿಕಾರಿದ್ದಾರೆ.
ನಾನು ಅಸಮಾಧಾನಗೊಂಡಿರುವುದು ಸಮಾಜದ ಕೆಲವು ವ್ಯಕ್ತಿಗಳು ಮತ್ತು ಸಿಸ್ಟಮ್ ಮೇಲೆ ಹೊರತು ನನ್ನ ಕುಟುಂಬದ ಮೇಲಲ್ಲ. ವಿಷಯ ಸಣ್ಣದಿದ್ದರೂ ನೀವು ಅದನ್ನು ಎಷ್ಟು ದೊಡ್ಡದು ಮಾ (ರೈ ಕೆ ಪಹಾಡ್ ಬನಾನಾ) ಎಂಬುದು ಈಗ ನನಗೆ ಅರ್ಥವಾಗಿದೆ. ಇದೊಂದು ದೊಡ್ಡ ಪಾಠ” ಎಂದು ಹೇಳುವ ಮೂಲಕ ವಿಚ್ಛೇದನದ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಟ್ರೋಲಿಂಗ್ ,ಕ್ಯಾಂಡಿ ಶಾಪ್ ವಿವಾದ
ನೇಹಾ ಅವರ ಈ ಹಠಾತ್ ಮಾನಸಿಕ ಆತಂಕಕ್ಕೆ ಇತ್ತೀಚೆಗೆ ಅವರು ಎದುರಿಸಿದ ಟ್ರೋಲಿಂಗ್ ಕಾರಣ ಎಂದು ಹೇಳಲಾಗುತ್ತಿದೆ. ತಮ್ಮ ಸಹೋದರ ಟೋನಿ ಕಕ್ಕರ್ ಅವರೊಂದಿಗೆ ನಡೆಸಿಕೊಟ್ಟ ಕ್ಯಾಂಡಿ ಶಾಪ್ (Candy Shop) ಎಂಬ ಮ್ಯೂಸಿಕ್ ವಿಡಿಯೋ ಭಾರೀ ಟೀಕೆಗೆ ಗುರಿಯಾಗಿತ್ತು. ಈ ಹಾಡಿನ ಸಾಹಿತ್ಯ ಮತ್ತು ನೃತ್ಯದ ಬಗ್ಗೆ ನೆಟ್ಟಿಗರು ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದರಿಂದ ಬೇಸತ್ತ ನೇಹಾ, ಸ್ವಲ್ಪ ದಿನಗಳ ಕಾಲ ಸಾರ್ವಜನಿಕ ಜೀವನದಿಂದ ವಿರಾಮ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಭರವಸೆ ನೀಡಿರುವ ಅವರು, ಭಾವನಾತ್ಮಕವಾಗಿ ನಾನು ಸ್ವಲ್ಪ ಮೃದು ಸ್ವಭಾವದವಳು. ಶೀಘ್ರದಲ್ಲೇ ಹೊಸ ಹುರುಪಿನೊಂದಿಗೆ ಮರಳಿ ಬರುತ್ತೇನೆ ಎಂದು ತಿಳಿಸಿದ್ದಾರೆ.
