ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್ ಟಾಕ್ಸಿಕ್ ಟ್ರೈಲರ್ ಹಾಗೂ ನಟ ಯಶ್ ಬಗ್ಗೆ ಚಕಾರ ಎತ್ತಿದ್ದಾರೆ. ಕರ್ನಾಟಕದಿಂದ ಓಡಿಸ್ತೀವಿ ಕಂದ ಅಂತೆಲ್ಲಾ ಸ್ಟೇಟ್ಮೆಂಟ್ ನೀಡಿ, ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ಆಕೆ ಆ ಮಾತು ಹೇಳಿದ್ಯಾಕೆ..? ಫ್ಯಾನ್ಸ್ ಜೊತೆ ನೆಟ್ಟಿಗರು ಕೂಡ ಆಕೆಯನ್ನ ಸೋಶಿಯಲ್ ಮೀಡಿಯಾದಲ್ಲಿ ರೋಸ್ಟ್ ಮಾಡ್ತಿರೋದಾದ್ರೂ ಯಾಕೆ ಅನ್ನೋ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.
- ಯಶ್ ಟಾಕ್ಸಿಕ್ ಟ್ರೈಲರ್‌ಗೆ ನಟಿ ರಿಷಿಕಾ ಸಿಂಗ್ ಆಕ್ಷೇಪ
- ರಾಕಿಭಾಯ್ ಕಾಲೆಳೆದ ರಿಷಿಕಾಗೆ ಫ್ಯಾನ್ಸ್ ತಿರುಗೇಟು..!!
- 13 ವರ್ಷದ ಹಿಂದಿನ ಬೆತ್ತಲೆ ಫೋಟೋ.. ಏನಿದು ರಿಷಿಕಾ?
- ಫ್ಯಾನ್ಸ್ ಜೊತೆ ನೆಟ್ಟಿಗರಿಂದಲೂ ನಟಿಮಣಿಗೆ ಫುಲ್ ಕ್ಲಾಸ್
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆಯೇ ಸ್ಯಾಂಡಲ್‌ವುಡ್‌ನಲ್ಲಿ ಮಾತಿನ ಸಮರವೇ ಶುರುವಾಗಿದೆ. ಟ್ರೇಲರ್‌ನಲ್ಲಿ ಯಶ್ ಅವರ ಹಸಿಬಿಸಿ ಹಾಗೂ ನಗ್ನ ದೃಶ್ಯಗಳನ್ನು ಕಂಡು ಮಡಿವಂತರು ಹುಬ್ಬೇರಿಸಿದ್ದರೆ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್ ಮಾತ್ರ ಲೇವಡಿ ಮಾಡಿದ್ದಾರೆ. ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ, ಮನೆಯಲ್ಲಿ ಹೆಂಡ್ತಿ ಇದಾಳೆ, ಹೀರೋಯಿನ್ಗಳ ಜೊತೆ ಇದೇನು ಚಕ್ಕಂದ ಎಂದು ಯಶ್ ಕಾಲೆಳೆಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ವಿಡಿಯೋದಲ್ಲಿ ಐ ಆಮ್ ಟಾಕ್ಸಿಕ್ ಎನ್ನುತ್ತಾ ಪ್ರಾಸಬದ್ಧವಾಗಿ ಕೌಂಟರ್ ಕೊಟ್ಟಿರುವ ರಿಷಿಕಾ, ‘ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ ಕಂದ’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ‘ನಾನು ಟಾಕ್ಸಿಕ್‌ನೂ ಬಿಡಲ್ಲ, ಅವರ ಫ್ಯಾನ್ಸ್‌ನೂ ಬಿಡಲ್ಲ’ ಅಂತ ಇನ್ನೊಂದು ವಿಡಿಯೋ ಮಾಡಿದ್ದಾರೆ.
ರಿಷಿಕಾ ಸಿಂಗ್‌ರ ಈ ಬೋಲ್ಡ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರೊಚ್ಚಿಗೆದ್ದ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರು ಕೌಂಟರ್ ಅಟ್ಯಾಕ್ ಶುರು ಮಾಡಿದ್ದಾರೆ. 13 ವರ್ಷಗಳ ಹಿಂದೆ ‘ಬೆತ್ತಲೆ ದೇಹ ತೋರಿಸಿ ಯಾರಾದ್ರೆ ನನಗೇನು’ ಅಂತ ನೀವೇ ಬೋಲ್ಡ್ ಪೋಸ್ಟರ್‌ಗಳಿಗೆ ನಿಂತು, ಕಥೆಗೆ ತಕ್ಕಂತೆ ನಟಿಸಿದ್ದೇನೆ ಎಂದಿದ್ದಿರಿ. ಅಂದು ನೀವು ಪಾತ್ರಕ್ಕಾಗಿ ಬೆತ್ತಲಾದರೆ ತಪ್ಪಿಲ್ಲ, ಇಂದು ಯಶ್ ನಟಿಸಿದರೆ ಹೆಣ್ಣುಕುಲಕ್ಕೆ ಅವಮಾನವೇ? ಎಂದು ಹಳೆಯ ಇತಿಹಾಸ ಕೆದಕಿ ರಿಷಿಕಾ ಅವರ ಸಭ್ಯತೆಯನ್ನೇ ಪ್ರಶ್ನಿಸಿ ಸರಿಯಾಗಿಯೇ ಟ್ರೋಲ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ, ಟಾಕ್ಸಿಕ್ ಟ್ರೇಲರ್‌ನ ಬೋಲ್ಡ್ ದೃಶ್ಯಗಳಿಂದ ಶುರುವಾದ ಈ ರಾದ್ಧಾಂತ, ಈಗ ರಿಷಿಕಾ ಸಿಂಗ್ ಮತ್ತು ಯಶ್ ಅಭಿಮಾನಿಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು,ಮುಂದೆ ಯಾವ ಹಂತಕ್ಕೆ ತಲುಪಲಿದೆ ಕಾದು ನೋಡಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
