ಮುಂಬೈ: ಬಹುಭಾಷಾ ನಟಿ ಮೃಣಾಲ್ ಠಾಕೂರ್ (Mrunal Thakur) ಮತ್ತು ತಮಿಳು ನಟ ಧನುಷ್ (Dhanush) ನಡುವೆ ಪ್ರೇಮವಿದೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದವು. ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ನಟಿ ಮೃಣಾಲ್ ಠಾಕೂರ್ ಈ ಎಲ್ಲಾ ಊಹಾಪೋಹಗಳಿಗೆ ಪಂಚ್ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ತಮ್ಮ ಮುಂಬರುವ ಹಿಂದಿ ಚಿತ್ರ ‘ದೋ ದೀವಾನೆ ಸೆಹೆರ್ ಮೇ’ (Do Deewane Shehar Mein) ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಮೃಣಾಲ್, ಸಂದರ್ಶನವೊಂದರಲ್ಲಿ ಮದುವೆಯ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಧನುಷ್ ಅವರನ್ನು ಮದುವೆಯಾಗುತ್ತಿದ್ದೇನೆಯೇ ? ಖಂಡಿತ ಇಲ್ಲ. ಫೆಬ್ರವರಿ 14 ನನಗೆ ಏಪ್ರಿಲ್ 1 ಅಂದರೆ ‘ಮೂರ್ಖರ ದಿನ’ (April Fool’s Day) ಆದಂತೆ ಕಾಣುತ್ತಿದೆ. ಈ ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲೂ ಏನನ್ನೂ ಹೇಳಿರಲಿಲ್ಲ, ಆದರೂ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿದೆ ಎಂದು ನಗುತ್ತಲೇ ಸ್ಪಷ್ಟಪಡಿಸಿದ್ದಾರೆ.
2025 ರಿಂದ ಮೃಣಾಲ್ ಮತ್ತು ಧನುಷ್ ಹೆಸರು ಒಟ್ಟಾಗಿ ಕೇಳಿಬರಲು ಶುರುವಾಗಿತ್ತು. ಧನುಷ್ ನಟನೆಯ ‘ತೇರೆ ಇಷ್ಕ್ ಮೇ’ ಚಿತ್ರದ ಮುಕ್ತಾಯದ ಪಾರ್ಟಿಯಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದು ಮೊದಲ ಸುಳಿವಾಗಿತ್ತು. ನಂತರ ‘ಸನ್ ಆಫ್ ಸರ್ದಾರ್ 2’ ರ ಪ್ರಥಮ ಪ್ರದರ್ಶನದ ವೇಳೆ ಮೃಣಾಲ್ ಅವರು ಧನುಷ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಪ್ಪಿಕೊಂಡ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದು ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಬಳಿಕ ಈ ವರ್ಷ ಫೆಬ್ರವರಿ 14 ರಂದು ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳೂ ಕೇಳಿಬಂದಿತ್ತು.
ವದಂತಿಗಳನ್ನು ಬದಿಗಿಟ್ಟರೆ, ಇಬ್ಬರೂ ನಟರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೃಣಾಲ್ ಠಾಕೂರ್ ನಟನೆಯ ‘ದೋ ದೀವಾನೆ ಸೆಹೆರ್ ಮೇ’ ಫೆಬ್ರವರಿ 20 ರಂದು ತೆರೆಗೆ ಬರಲಿದೆ. ಇದರ ಜೊತೆಗೆ ಹಿಂದಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಮತ್ತು ‘ಪೂಜಾ ಮೇರಿ ಜಾನ್’ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ‘ಡಕೋಯಿಟ್: ಎ ಲವ್ ಸ್ಟೋರಿ’ ಮತ್ತು ಅಟ್ಲೀ ನಿರ್ದೇಶನದ ಅಲ್ಲು ಅರ್ಜುನ್-ದೀಪಿಕಾ ಪಡುಕೋಣೆ ಚಿತ್ರದಲ್ಲೂ ಅವರು ನಟಿಸಲಿದ್ದಾರೆ ಎಂಬ ವದಂತಿಗಳಿವೆ.
ಇತ್ತ ಧನುಷ್ ಅವರು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಕಾರಾ’ ಎಂಬ ತಮಿಳು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಕೂಡ ನಟಿಸುತ್ತಿರುವುದು ವಿಶೇಷ. ಒಟ್ಟಿನಲ್ಲಿ ಮೃಣಾಲ್ ಅವರ ಈ ಸ್ಪಷ್ಟನೆ , ವದಂತಿಗಳಿಗರ ಫುಲ್‌ಸ್ಟಾಪ್ ಇಟ್ಟಂತಿದೆ.





