ಮುಂಬೈ, ಮಾರ್ಚ್ 26: ಕುಂಭಮೇಳದಲ್ಲಿ ಸೌಂದರ್ಯದ ಪ್ರತೀಕವಾಗಿ ಗಮನ ಸೆಳೆದ ನಟಿ ಮೊನಾಲಿಸಾ ಭೋಂಸ್ಲೆ ಅವರು ಖ್ಯಾತ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
ಕುಂಭಮೇಳದಲ್ಲಿ ಜನಪ್ರಿಯತೆ ಪಡೆದ ನಂತರ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟ ಮೊನಾಲಿಸಾ, ಇತ್ತೀಚೆಗೆ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೂ ಸುದ್ದಿಯಾಗಿದ್ದರು. ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ಮದುವೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದರು. ಈ ನಡುವೆ ಇದೀಗ ಅವರು ತಮ್ಮ ಬದುಕಿನ ಅತಿ ನೋವಿನ ಘಟನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಮೊನಾಲಿಸಾ ಹೇಳುವ ಪ್ರಕಾರ, ಅವರು ಅಪ್ರಾಪ್ತ ವಯಸ್ಸಿನಲ್ಲಿ ‘ದಿ ಡೈರಿ ಆಫ್ ಮಣಿಪುರ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಈ ಘಟನೆಗಳು ನಡೆದಿವೆ. ನೇಪಾಳ ಮತ್ತು ಡೆಹ್ರಾಡೂನ್‌ನಲ್ಲಿ ನಡೆದ ಶೂಟಿಂಗ್ ವೇಳೆ ನಿರ್ದೇಶಕ ಸನೋಜ್ ಮಿಶ್ರಾ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದು, ತಮ್ಮ ಅನುಮತಿಯಿಲ್ಲದೆ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ ಘಟನೆಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
“ಅಂದು ನಾನು ಅಪ್ರಾಪ್ತಳಾಗಿದ್ದೆ. ಏನಾಗುತ್ತಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ವಯಸ್ಸೂ ಆಗಿರಲಿಲ್ಲ. ಆದರೆ ಅದು ತಪ್ಪು ಎನ್ನುವುದು ನನಗೆ ತಿಳಿದಿತ್ತು,” ಎಂದು ಮೊನಾಲಿಸಾ ಕಣ್ಣೀರಿನಿಂದ ಹೇಳಿದ್ದಾರೆ. ಈ ವಿಷಯವನ್ನು ಅವರು ತಮ್ಮ ಕುಟುಂಬದವರಿಗೆ ತಿಳಿಸಿದರೂ, ಮೊದಲ ಸಿನಿಮಾದ ಅವಕಾಶ ಕಳೆದುಕೊಳ್ಳಬಾರದು ಎಂಬ ಕಾರಣದಿಂದಾಗಿ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪ್ರಕರಣವು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಗಂಭೀರ ಕಾನೂನುಗಳಡಿ ಬರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. “ನನಗೆ ನ್ಯಾಯ ಬೇಕು. ನನಗೆ ಆಗಿದ್ದ ಅನ್ಯಾಯಕ್ಕೆ ಉತ್ತರ ಸಿಗಬೇಕು,” ಎಂದು ಹೇಳಿದ್ದಾರೆ.
ಮೊನಾಲಿಸಾ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಒತ್ತಡ ಎದುರಿಸುತ್ತಿದ್ದಾರೆ. ಪತಿ ಫರ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ತಮ್ಮ ಮದುವೆ ಬಗ್ಗೆ ತಪ್ಪು ಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. “ನಮ್ಮ ವೈಯಕ್ತಿಕ ಬದುಕಿನಲ್ಲಿ ಅನಾವಶ್ಯಕ ಹಸ್ತಕ್ಷೇಪ ನಡೆಯುತ್ತಿದೆ,” ಎಂದು ಅವರು ಹೇಳಿದ್ದಾರೆ.
