ಶಿವಮೊಗ್ಗ, ಮಾರ್ಚ್ 26: ಶಿವಮೊಗ್ಗ ನಗರದಲ್ಲಿ ಖಾಸಗಿ ಆಸ್ಪತ್ರೆಯ ವಿರುದ್ಧ ಗಂಭೀರ ವೈದ್ಯಕೀಯ ಲೋಪದ ಆರೋಪ ಕೇಳಿಬಂದಿದ್ದು, ಹರ್ನಿಯಾ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ಕೋಮಾಗೆ ಜಾರಿರುವ ಘಟನೆ ನಡೆದಿದೆ. ಈ ಘಟನೆ ನಗರದ ನೆಹರು ಕ್ರೀಡಾಂಗಣದ ಸಮೀಪದಲ್ಲಿರುವ ಅಮೃತ್ ಲೈಫ್ ಕೇರ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಆಯನೂರು ನಿವಾಸಿಯಾದ 48 ವರ್ಷದ ದೇವಿಬಾಯಿ ಅವರು ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಮಾರ್ಚ್ 11ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಾರ್ಚ್ 12ರ ರಾತ್ರಿ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್ ಮುನ್ನ ದೇವಿಬಾಯಿ ಆರೋಗ್ಯವಾಗಿಯೇ ಇದ್ದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಿತಿ ಹದಗೆಟ್ಟು, ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಅವರು ಕೋಮಾಗೆ ಜಾರಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ‘ಹೈಡೋಸ್’ ಔಷಧಿ ನೀಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ರೋಗಿಯ ಅಳಿಯ ಕಾಂತರಾಜ್ ಹಾಗೂ ಸಂಬಂಧಿ ಉಷಾ ನಾಯ್ಕ್ ಸೇರಿದಂತೆ ಇತರರು, “ಮೂರ್ನಾಲ್ಕು ವೈದ್ಯರ ಅಜಾಗರೂಕತೆ ಮತ್ತು ತಪ್ಪು ಚಿಕಿತ್ಸೆಯಿಂದ ದೇವಿಬಾಯಿ ಈ ಸ್ಥಿತಿಗೆ ತಲುಪಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ನಡೆದ ಬಳಿಕ 12 ದಿನಗಳು ಕಳೆದರೂ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿರುವ ಆಸ್ಪತ್ರೆಯ ಸರ್ಜನ್ ಡಾ. ಧನಂಜಯ ನಾಯ್ಕ್ ಹಾಗೂ ಜನರಲ್ ಫಿಸಿಷಿಯನ್ ಡಾ. ಮಧುಸೂಧನ್, “ಶಸ್ತ್ರಚಿಕಿತ್ಸೆಗೂ ರೋಗಿ ಕೋಮಾಗೆ ಜಾರಿರುವುದಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ರೋಗಿಯ ಮೆದುಳಿನಲ್ಲಿ ಉಂಟಾದ ರಕ್ತಸ್ರಾವವು ಸ್ವತಂತ್ರವಾದ ಆರೋಗ್ಯ ಸಮಸ್ಯೆಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಅದು ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇವಿಬಾಯಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
