ಅಮೆರಿಕದಲ್ಲಿ ಡಾ. ರಾಜ್‌ಕುಮಾರ್ ಸೂಪರ್ ಹಿಟ್ ಹಾಡು ಹಾಡಿದ ಮೋಹನ್‌ಲಾಲ್: ವಿಡಿಯೋ ವೈರಲ್

Untitled design 2026 04 23T224842.751

ಮುಂಬೈ/ಕೊಚ್ಚಿ: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅದೂ ಅಪ್ಪಟ ಕನ್ನಡಿಗನ ರೀತಿಯಲ್ಲಿ ಡಾ. ರಾಜ್‌ಕುಮಾರ್ ಅವರ ಗೀತೆಯೊಂದನ್ನು ಹಾಡಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿ ಅಭಿಮಾನಿಗಳು ‘ಅಚ್ಚರಿಯಾಯಿತು’ ಎಂದು ಬಾಯಿ ಬಿಟ್ಟಿದ್ದಾರೆ.

ಅಮೆರಿಕದ ವೇದಿಕೆಯಲ್ಲಿ ಕನ್ನಡದ ಸವಿ
ಅಮೆರಿಕದಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೋಹನ್‌ಲಾಲ್ ಭಾಗವಹಿಸಿದ್ದರು. ಅವರು ವೇದಿಕೆಯ ಮೇಲೆ ಲೈವ್ ಆಗಿ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ…’ ಗೀತೆಯನ್ನು ಹಾಡಿದರು. ಈ ಹಾಡು 1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ್ದಾಗಿದ್ದು, ಡಾ. ರಾಜ್‌ಕುಮಾರ್ ಮತ್ತು ಮಂಜುಳಾ ನಟನೆಯ ಈ ಚಿತ್ರದ ಹಾಡು ಇಂದಿಗೂ ಎವರ್ಗ್ರೀನ್ ಆಗಿದೆ. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಧ್ವನಿ ನೀಡಿರುವ ಈ ಗೀತೆಯನ್ನು ಮೋಹನ್‌ಲಾಲ್ ತಮ್ಮದೇ ಆದ ಸುಮಧುರ ಕಂಠದಿಂದ ಹಾಡಿದ್ದಾರೆ. ಸಾಹಿತ್ಯವನ್ನು ನೋಡದೆಯೇ, ಯಾವುದೇ ತಡಮಾಡದೆ ಅಪ್ಪಟ ಕನ್ನಡಿಗನಂತೆ ಹಾಡಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.

‘ಎಂದೆಂದೂ’ ಪ್ರೀತಿಯ ಹಾಡು
ಮೋಹನ್‌ಲಾಲ್ ಅವರಿಗೆ ಡಾ. ರಾಜ್‌ಕುಮಾರ್ ಎಂದರೆ ಅಪಾರ ಅಭಿಮಾನ. ಅವರ ಹಾಡುಗಳನ್ನು ಕೇಳಲು ಅವರು ಎಂದಿಗೂ ಹಿಂದೇಟು ಹಾಕುವುದಿಲ್ಲ. ಈ ಮೊದಲು ಈ ಹಾಡನ್ನು ನೋಡುತ್ತಾ ಅವರು ಆನಂದಿಸಿದ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು ಆಗಲೇ ‘ಮೋಹನ್‌ಲಾಲ್ ಅವರಿಗೆ ಕನ್ನಡದ ಬಗ್ಗೆ ಎಷ್ಟು ಪ್ರೀತಿ’ ಎಂದು ಚರ್ಚಿಸಿದ್ದರು. ಈ ಬಾರಿಯಂತೂ ಅವರು ಸಾಹಿತ್ಯವನ್ನು ಗುನುಗುವುದನ್ನು ಮೀರಿ, ವೇದಿಕೆಯ ಮೇಲೆ ಲೈವ್ ಆಗಿಯೇ ಹಾಡಿದ್ದಾರೆ. 

ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ವಿಶೇಷ
ಏಪ್ರಿಲ್ 24 ರಂದು ಡಾ. ರಾಜ್‌ಕುಮಾರ್ ಅವರ ಜನ್ಮದಿನ. ಅಣ್ಣಾವ್ರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಮೋಹನ್‌ಲಾಲ್ ಅವರ ಈ ವಿಡಿಯೋ ವೈರಲ್ ಆಗುತ್ತಿರುವುದು ಇನ್ನಷ್ಟು ವಿಶೇಷವಾಗಿದೆ. ರಾಜ್‌ಕುಮಾರ್ ಅವರ ಮೇಲಿನ ಪ್ರೀತಿಗೆ ಮೋಹನ್‌ಲಾಲ್ ಸಲ್ಲಿಸಿದ ಈ ಗೌರವ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ‘ಮೋಹನ್‌ಲಾಲ್ ಸಲಾಮ್’ ಎಂದೂ, ‘ನಿಜಕ್ಕೂ ಕನ್ನಡದ ಮಗ’ ಎಂದೂ ಕಮೆಂಟುಗಳು ಮೂಡಿಬರುತ್ತಿವೆ.

Exit mobile version