ನಾಡಹಬ್ಬ ದಸರಾದಷ್ಟೇ ಕರಾವಳಿ ದಸರಾ ಮಾರ್ನಮಿ ಕೂಡ ಫೇಮಸ್. ಹುಲಿವೇಷ, ಹುಲಿ ಕುಣಿತದ ಮೇಲೆ ಕೇಂದ್ರೀಕೃತವಾಗಿರೋ ಮಾರ್ನಮಿ ಇಂದು ಎಲ್ಲೆಡೆ ತೆರೆಗಪ್ಪಳಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ ಸಿನಿಮಾ ಹೇಗಿದೆ..? ಕಿರುತೆರೆಯಿಂದ ಬಂದ ರಿತ್ವಿಕ್ ನಟನೆ ಜೊತೆ ಚೈತ್ರಾ ಆಚಾರ್ ಅಭಿನಯದ ಬಗ್ಗೆ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ..
- ಕರಾವಳಿ ವೈಬ್.. ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ
- ಹುಲಿ ಕುಣಿತ, ಲವ್ ಸ್ಟೋರಿ, ಆ್ಯಕ್ಷನ್ ಪ್ಯಾಕ್ಡ್ ಫೆಸ್ಟ್..!
- ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
- ಮಂಗಳೂರಲ್ಲೂ ಮಾರ್ನಮಿಗೆ ಬೊಂಬಾಟ್ ರೆಸ್ಪಾನ್ಸ್
ಹೊಸಬರ, ಹೊಸತನದ ಸಿನಿಮಾಗಳು ಇತ್ತೀಚೆಗೆ ಹೆಚ್ಚೆಚ್ಚು ಗಮನಸೆಳೆಯುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಮಾರ್ನಮಿ ಚಿತ್ರ. ಕರಾವಳಿಯ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳನ್ನು ಕಥಾವಸ್ತುವಾಗಿ ಮಾಡಿಕೊಂಡು ಹಲವು ಸಿನಿಮಾಗಳು ಬಂದಿದ್ದರೂ, ಮಾರ್ನಮಿ ಹುಲಿವೇಷದ ಹಿನ್ನೆಲೆಯಲ್ಲೊಂದು ಮುಗ್ಧ ಪ್ರೇಮಕಥೆಯನ್ನು ತೆರೆಗೆ ತಂದಿದೆ. ಪ್ರಾರಂಭದಿಂದಲೇ ಮಣ್ಣಿನ ಸುವಾಸನೆ, ಜಾತ್ರೆಯ ಜೋಷ್ ಮತ್ತು ಪ್ರೀತಿಯ ತಾಜಾತನ ಸೇರಿ ಪ್ರೇಕ್ಷಕರನ್ನು ಸೆಳೆಯುತ್ತದೆ. ಕರಾವಳಿ ಭಾಗದ ಜನಜೀವನವನ್ನು ಕಣ್ಣಿಗೆ ಹಬ್ಬವಾಗುವಂತೆ ಮೂಡಿಸಿರುವುದು ಚಿತ್ರದ ದೊಡ್ಡ ಬಲವಾಗಿದೆ.
ರಿತ್ವಿಕ್ ಮಠದ್ ಹಾಗು ಚೈತ್ರಾ ಆಚಾರ್ ಅಭಿನಯಿಸಿರುವ ಮಾರ್ನಮಿ ಸಿನಿಮಾ ಇಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಸಖತ್ ಸದ್ದು ಮಾಡುತ್ತಿದೆ. ರಿತೀಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಸಮಾಜದಲ್ಲಿ ನಡೆಯುವ ಘಟನೆ ಆಧಾರಿಸಿ ಕಥೆ ಕಟ್ಟಿದ್ದಾರೆ. ಕರಾವಳಿಯ ಸಂಸ್ಕೃತಿ, ಆಚರಣೆಗಳು ಮತ್ತು ಭಾವನಾತ್ಮಕ ಪ್ರೇಮಕಥೆಯನ್ನು ಸಿನೆಮಾಟಿಕ್ ಟಚ್ ಜೊತೆ ತೆರೆಗೆ ತಂದಿದ್ದಾರೆ.
ಬೆಂಗಳೂರಿನ ನರ್ತಕಿ, ವೀರೇಶ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಹ ಭರ್ಜರಿ ಓಪನಿಂಗ್ ಸಿಕ್ಕಿದೆ. ಥಿಯೇಟರ್‌ಗೆ ಭೇಟಿ ನೀಡಿದ ರಿತ್ವಿಕ್ ಮಠದ್ ಮತ್ತು ಚೈತ್ರಾ ಜೆ. ಆಚಾರ್ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಚೇತು ಮತ್ತು ದೀಕ್ಷಾ ಪಾತ್ರಗಳ ಮೂಲಕ ಚೈತ್ರಾ ಹಾಗು ರಿತ್ವಿಕ್ ಮೋಡಿ ಮಾಡಿದ್ದು ಎಮೋಷನ್, ರೊಮ್ಯಾನ್ಸ್ ಮತ್ತು ಭಾವನೆಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಮೊದಲ ಶೋ ಬಳಿಕವೇ ಮಂಗಳೂರಿನಲ್ಲಿ ಈ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೊದಲಾರ್ಧದಲ್ಲಿ ಕಥೆ ಗಟ್ಟಿ ಹಿಡಿತ ಹೊಂದಿದೆ. ‘ಗರುಡ ಗಮನ’ ಚಿತ್ರದ ಒಂದು ಅಂಶವನ್ನು ಆಧಾರವಾಗಿಟ್ಟುಕೊಂಡು ಸಾಗುವ ಕಥೆ ಕುತೂಹಲ ಹುಟ್ಟಿಸುತ್ತೆ. ಹುಲಿವೇಷದ ಆಚರಣೆ, ಅದರ ಸಿದ್ಧತೆ, ತಂಡಗಳ ನಡುವಿನ ಸ್ಪರ್ಧೆ ಮತ್ತು ಜಿದ್ದಿನ ದೃಶ್ಯಗಳು ಮಾಸ್ ಫೀಲ್ ಕೊಡುತ್ತವೆ. ಮುಗ್ಧ ಪ್ರೀತಿ ಟ್ರ್ಯಾಕ್ ಹೃದಯಕ್ಕೆ ಹತ್ತಿರವಾಗುತ್ತದೆ. ಕೊಂಚ ಎಳೆದಂತೆ ಭಾಸವಾದರೂ ಸಂಭಾಷಣೆಗಳ ಸೊಗಸು ಮತ್ತು ಚಿತ್ರಕಥೆಯ ತೀವ್ರತೆ ಮೊದಲಾರ್ಧವನ್ನು ಪಕ್ಕಾ ಎಂಟರ್ಟೈನ್‌ಮೆಂಟ್ ಆಗಿ ಕಟ್ಟಿಕೊಡುತ್ತದೆ.
ಒಟ್ಟಾರೆ ಮಾರ್ನಮಿ ಮೊದಲಾರ್ಧದ ಗಟ್ಟಿತನ, ಭಾವನಾತ್ಮಕ ಪ್ರೇಮಕಥೆ ಮತ್ತು ಕರಾವಳಿ ಸಂಸ್ಕೃತಿಯ ರಂಗಿನ ಪ್ರದರ್ಶನದಿಂದ ಮೂಡಿ ಬಂದಿದೆ. ಚಿತ್ರವನ್ನು ನಿಶಾಂತ್, ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ್ದು ಥಿಯೇಟರ್ ವಿಸಿಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್