ಹಿರಿಯ ಮಲಯಾಳಂ ನಟ ಹಾಗೂ ನಿರ್ಮಾಪಕ ಮಣಿಯನ್‌ಪಿಳ್ಳ ರಾಜು ಅವರ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 5ರ ಗುರುವಾರ ರಾತ್ರಿ ತಿರುವನಂತಪುರದ ವಝುತಕಾಡ್‌ನಲ್ಲಿರುವ ‘ತ್ರಿವೇಂಡ್ರಮ್ ಕ್ಲಬ್’ ಬಳಿ ನಡೆದ ಅಪಘಾತದಲ್ಲಿ ರಾಜು ಚಾಲನೆ ಮಾಡುತ್ತಿದ್ದ ಕಾರು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಮಾರು ರಾತ್ರಿ 9:30ಕ್ಕೆ ಸಂಭವಿಸಿದ ಈ ಅಪಘಾತದಲ್ಲಿ ಕಾರು (KL-01-CJ-0004) ವೇಗವಾಗಿ ಬಂದು ಬೈಕ್ ಸವಾರರಾದ ಸೂರಜ್ ಮತ್ತು ನಿವೇದಿತ್ ಕೃಷ್ಣ (ಇಬ್ಬರೂ ಸುಮಾರು 20 ವರ್ಷ) ಅವರಿಗೆ ಢಿಕ್ಕಿ ಹೊಡೆದಿದೆ. ರಭಸದಿಂದಾಗಿ ಇಬ್ಬರು ರಸ್ತೆಗೆ ಬಿದ್ದು, ಒಬ್ಬರಿಗೆ ಕಾಲಿನ ಮೂಳೆ ಮುರಿದಿದ್ದರೆ, ಮತ್ತೊಬ್ಬರಿಗೆ ತಲೆ ಹಾಗೂ ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ನಂತರ ನಟ ಮಣಿಯನ್‌ಪಿಳ್ಳ ರಾಜು ಗಾಯಾಳುಗಳಿಗೆ ಯಾವುದೇ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಮ್ಯೂಸಿಯಂ ಪೊಲೀಸರು ತನಿಖೆ ಆರಂಭಿಸಿದ್ದರು. ಶುಕ್ರವಾರ ಬೆಳಿಗ್ಗೆ ನಟ ರಾಜು ತಾವಾಗಿಯೇ ಪೊಲೀಸ್ ಠಾಣೆಗೆ ಹಾಜರಾಗಿ ವಶಕ್ಕೆ ಒಪ್ಪಿಸಿಕೊಂಡರು. ಪೊಲೀಸರು ಅವರ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಮದ್ಯಪಾನದ ಅಂಶ ದೃಢವಾದರೆ ಹೆಚ್ಚುವರಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮುಂದೆ ಹೇಳಿಕೆ ನೀಡಿರುವ ರಾಜು, “ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಗಾಬರಿಯಿಂದ ಏನು ಮಾಡಬೇಕೆಂದು ತಿಳಿಯದೆ ಸ್ಥಳದಿಂದ ಹೊರಟುಹೋದೆ” ಎಂದು ಹೇಳಿದ್ದಾರೆ. ಅಲ್ಲದೆ ತಾನು ಕ್ಯಾನ್ಸರ್ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವುದಾಗಿ, ಚಿಕನ್‌ಗುನ್ಯಾ ಬಾಧೆ ಇರುವುದಾಗಿ, ಪತ್ನಿ ಒಬ್ಬರೇ ಮನೆಯಲ್ಲಿದ್ದುದರಿಂದ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ. “ಆದರೂ ಬೇರೊಬ್ಬರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡುವಂತೆ ಸೂಚಿಸಿದ್ದೆ” ಎಂದೂ ಹೇಳಿದ್ದಾರೆ.
ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮೋಟಾರು ವಾಹನ ಕಾಯ್ದೆಯಡಿ ನಿರ್ಲಕ್ಷ್ಯದ ಚಾಲನೆ, ಅಪಘಾತದ ಬಗ್ಗೆ ಮಾಹಿತಿ ನೀಡದೆ ಪರಾರಿಯಾದ ಆರೋಪಗಳ ಮೇಲೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದ್ದು, ಮದ್ಯಪಾನದ ವರದಿ ಬಂದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





