ತ್ರಿಶೂರ್: ಮಲಯಾಳಂ ಚಿತ್ರರಂಗದ ಪ್ರತಿಭಾವಂತ ಹಾಗೂ ಯುವ ನಟ ಅಖಿಲ್ ವಿಶ್ವನಾಥ್ (Akhil Viswanath) ಅವರು ತ್ರಿಶೂರ್‌ನಲ್ಲಿರುವ ತಮ್ಮ ನಿವಾಸದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.. ಕೇವಲ 30 ವರ್ಷದ ಅಖಿಲ್ ಅವರ ಸಾವು ಅಸಹಜವಾಗಿದ್ದು, ಪ್ರಾಥಮಿಕವಾಗಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಘಟನೆಯ ವಿವರ
ಅಖಿಲ್ ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲೇ ನೆಲಕ್ಕುರುಳಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅಖಿಲ್ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾವಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಅಖಿಲ್ ಅವರು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. ಆದರೆ, ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಖಿಲ್ ವಿಶ್ವನಾಥ್ ಅವರ ತಂದೆ ವಿಶ್ವನಾಥ್ ಅವರು ಕೆಲವು ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಕೊಡಾಲಿ ವ್ಯಾಪಾರಿ ಏಕೋಪನ ಸಮಿತಿ ವ್ಯಾಪಾರಭವನದಲ್ಲಿ ಉದ್ಯೋಗ ಮಾಡುತ್ತಿರುವ ತಾಯಿ ಗೀತಾ ಅವರು ಕೆಲಸಕ್ಕೆ ಹೊರಡುವಾಗ, ಮನೆ ಒಳಗೆ ಮಗ ಅಖಿಲ್ ಮೃತದೇಹವಾಗಿ ಪತ್ತೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು.
ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ನಟರಾಗಿದ್ದ ಅಖಿಲ್ ವಿಶ್ವನಾಥ್ ಅವರು ತಮ್ಮ ಅಭಿನಯದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕಡಿಮೆ ಅವಧಿಯಲ್ಲೇ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ವಿಮರ್ಶಕರ ಮೆಚ್ಚುಗೆಗೂ ಪಾತ್ರರಾಗಿದ್ದರು.
ನಟನ ಅಕಾಲಿಕ ನಿಧನಕ್ಕೆ ಮಲಯಾಳಂ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ಖ್ಯಾತ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡು, ಅಖಿಲ್ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. “ಅಖಿಲ್ ಒಬ್ಬ ಅಪರೂಪದ ಪ್ರತಿಭೆ. ಅವರ ನಟನೆಯ ಆಳತೆ ಮತ್ತು ನಿಷ್ಠೆ ಸದಾ ನೆನಪಿನಲ್ಲಿ ಉಳಿಯುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅವರು ಬರೆದಿದ್ದಾರೆ.
ಅಖಿಲ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.





