ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಮಹಾನ್”. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ನಟಿಸುತ್ತಿದ್ದಾರೆ. ರೈತರ ಕುರಿತಾದ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ರೈತನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಅನ್ನು ” ಮಹಾನ್ ” ಚಿತ್ರತಂಡ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನನ್ನ ವೃತ್ತಿ ಜೀವನದಲ್ಲೇ “ಮಹಾನ್” ಒಂದು “ಮಹಾನ್” ಚಿತ್ರವಾಗಲಿದೆ ಎಂದು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ನಮ್ಮ ಚಿತ್ರದಲ್ಲಿ “ಮಹಾನ್” ಎಂದರೆ ರೈತ. ಇದೊಂದು ರೈತರ ಬದುಕಿನ ಬವಣೆಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರ. ನಮಗ ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೊ, ಅದೇ ರೀತಿ ರೈತರು ಕೂಡ ಬಹುಮುಖ್ಯ. ಇಂತಹ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಅವರ ಪರ ಧ್ವನಿ ಎತ್ತುವ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಕೂಡ “ಮಹಾನ್” ರೈತನಾಗಿ ತೆರೆಯ ಕಾಣಿಸಿಕೊಳ್ಳಲಿದ್ದಾರೆ. ಸಂಕ್ರಾಂತಿ ರೈತರಿಗೆ ಪ್ರಿಯವಾದ ಹಬ್ಬ. ಹಾಗಾಗಿ ಈ ಹಬ್ಬದ ಸಂದರ್ಭದಲ್ಲೇ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಅನಾವರಣ ಮಾಡಿದ್ದೇವೆ.
ನಾನು ಈ ಕಥೆ ಬರೆಯಬೇಕಾದರೆ ವಿಜಯ ರಾಘವೇಂದ್ರ ಅವರೆ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಅಂದು ಕೊಂಡೆ ಬರೆದೆ. ನಂತರ ಅವರ ಹತ್ತಿರ ಕಥೆ ಹೇಳಿದಾಗ ಅವರು ಸಂತೋಷದಿಂದ ನಟಿಸಲು ಒಪ್ಪಿಕೊಂಡರು. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ನೋಡಿ ಹೊರಬಂದ ಮೇಲೂ ಈ ಪಾತ್ರ ಎಲ್ಲರ ಮನದಲ್ಲೂ ಉಳಿಯುತ್ತದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಪ್ರಕಾಶ್ ಬುದ್ದೂರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುತ್ತಾರೆ.
