ಶ್ರೀಮುತ್ತು ನಿವಾಸದ ಬಳಿ ಮಡೆನೂರು.. ಸಿಗ್ಲಿಲ್ಲ ಶಿವ ದರ್ಶನ

ಶಿವಣ್ಣನ ಪಾದ ಸ್ಪರ್ಶಕ್ಕಾಗಿ ಕಾಯ್ತಿರೋ ಮಡೆನೂರು ಮನು!

Untitled design (95)

ಶಿವಣ್ಣನಿಗೆ ಸಾವು ಬಯಸಿದ್ದಂತಹ ಮಡೆನೂರು ಮನುಗೆ ಇತ್ತೀಚೆಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿತ್ತು. ಆದ್ರೀಗ ತಮ್ಮ ಲೈಫ್‌‌ನಲ್ಲಿ ಹೊಸ ಇನ್ನಿಂಗ್ಸ್ ಕಟ್ಟಲು ಸಜ್ಜಾಗ್ತಿರೋ ಮನು, ಮೂರು ದಿನ ಕಾದರೂ ಶಿವ ದರ್ಶನ ಸಿಕ್ಕಿಲ್ಲ. ಶ್ರೀಮುತ್ತು ನಿವಾಸದ ಬಳಿ ಅಹಲ್ಯೆಯಂತೆ ಕಾಯ್ತಿರೋ ಮನುಗೆ ಶಾಪ ವಿಮೋಚನೆ ಆಗುತ್ತಾ ಅನ್ನೋದ್ರ ಎಮೋಷನಲ್ ಸ್ಟೋರಿ ಇಲ್ಲಿದೆ ನೋಡಿ.

ದೊಡ್ಮನೆ.. ಸ್ಯಾಂಡಲ್‌ವುಡ್ ಪಾಲಿಗೆ ಒಂಥರಾ ಗರ್ಭಗುಡಿ. ಅಲ್ಲಿ ಆಶೀರ್ವಾದ ಪಡೆದವರೆಲ್ಲಾ ಬದುಕು ಕಟ್ಟಿಕೊಂಡಿದ್ದಾರೆ. ಅಣ್ಣಾವ್ರ ನಂತರ ಆ ಪರಂಪರೆಗೆ ಶಿವಣ್ಣ ಕೂಡ ಸಾಕ್ಷಿ ಆಗಿದ್ದಾರೆ. ಗೀತಾ ಶಿವರಾಜ್‌ಕುಮಾರ್‌‌ರನ್ನ ಮದ್ವೆ ಆಗಿ, ನಾಗವಾರದ ಶ್ರೀಮುತ್ತು ನಿವಾಸಕ್ಕೆ ಶಿಫ್ಟ್ ಆದ ಶಿವಣ್ಣ, ಆ ಮನೆಯಲ್ಲಿದ್ದಾಗಲೇ ನೂರಾರು ಸಿನಿಮಾ ಮಾಡಿದ್ದಾರೆ. ಸಾಕಷ್ಟು ನಿರ್ಮಾಪಕರ ಜೋಳಿಗೆ ತುಂಬಿಸಿದ್ದಾರೆ.

ಅದೆಷ್ಟೋ ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಪಾಲಿಗೆ ಆಸರೆ ಆಗಿದ್ದಾರೆ. ಯಾರೇ ಬಿಗ್‌ಬಾಸ್ ಕಪ್ ಗೆಲ್ಲಲಿ, ಕಾಮಿಡಿ ಕಿಲಾಡಿಗಳು ಸೀಸನ್ ವಿನ್ ಆಗಲಿ, ಡಿಕೆಡಿ ವಿನ್ ಆದ್ರೂ ಸಹ ಲಿವಿಂಗ್ ಲೆಜೆಂಡ್, ಸನ್ ಆಫ್ ಬಂಗಾರದ ಮನುಷ್ಯ ಶಿವಣ್ಣನ ಆಶೀರ್ವಾದ ಪಡೆದೇ ಪಡೆಯುತ್ತಾರೆ. ಯಾಕಂದ್ರೆ ಅವ್ರ ಕೈ ಗುಣ ಅಂಥದ್ದು. ಅಂಥದ್ರಲ್ಲಿ ಮೊನ್ನೆಯಷ್ಟೇ ರೇಪ್ ಕೇಸ್‌ವೊಂದರಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುಗೂ ಶಿವಣ್ಣನ ಆಶೀರ್ವಾದ ಈ ಹಿಂದೆಯೇ ಸಿಕ್ಕಿತ್ತು.

ಆದ್ರೆ ಮನು ಜೈಲಲ್ಲಿ ಇದ್ದಾಗ ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮನುವಿನ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದ್ರಿಂದ ಆತನ ಮೇಲೆ ಮೂವರೂ ಸ್ಟಾರ್ ನಟರ ಫ್ಯಾನ್ಸ್ ಆಕ್ರೋಶಗೊಂಡಿದ್ದರು. ಅಭಿಮಾನಿ ಸಂಘಗಳಿಂದಲೇ ರಾಜ್ಯಾದ್ಯಂತ ನೂರಾರು ಕೇಸ್‌ಗಳು ಮನು ಮೇಲೆ ದಾಖಲಾಗಿದ್ದವು. ಜೈಲಿಂದ ಹೊರಬಂದ ಬಳಿಕ ಆ ಆಡಿಯೋ ತನ್ನದೇ ಎಂದು ತಪ್ಪು ಒಪ್ಪಿಕೊಂಡ ಮನು, ಎನ್‌ಆರ್ ರಮೇಶ್ ಅವರ ಜೊತೆಗೂಡಿ ಕ್ಷಮೆ ಕೋರುತ್ತಾ ವಿಡಿಯೋ ರಿವೀಲ್ ಮಾಡಿದ್ರು.

ಎನ್‌.ಆರ್. ರಮೇಶ್ ಅವರು ಕೂಡ ಇದನ್ನ ಷಡ್ಯಂತ್ರ ರೂಪಿಸುವ ನಿಟ್ಟಿನಲ್ಲೇ ಮಾಡಿದ್ದಾರೆ ಕ್ಷಮಿಸೋಣ ಅಂದಿದ್ರು.

ಆದ್ರೀಗ ಶಿವಣ್ಣ, ಧ್ರುವ ಸರ್ಜಾ ಹಾಗೂ ದರ್ಶನ್‌ಗೆ ಕ್ಷಮೆ ಕೇಳಲು ಒದ್ದಾಡ್ತಿದ್ದಾರೆ ಮನು. ಅದಕ್ಕೆ ಈಗಾಗ್ಲೇ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದು, ನನ್ನದೇನಿಲ್ಲ. ಶಿವಣ್ಣ ಹಾಗೂ ದರ್ಶನ್ ಸೀನಿಯರ್‌‌ಗಳು ಇದ್ದಾರೆ ಅವರ ಬಳಿ ಮಾತಾಡಿ. ನನ್ನ ಬಗ್ಗೆ ಯೋಚಿಸಬೇಡಿ, ಮನೆಯವರನ್ನ ಚೆನ್ನಾಗಿ ನೋಡ್ಕೊಳಿ ಅಂದಿದ್ರು.

ಶಿವಣ್ಣನ ದರ್ಶನಕ್ಕಾಗಿ ನಾಗವಾರದ ಶ್ರೀಮುತ್ತು ನಿವಾಸದ ಬಳಿ ಸುಮಾರು ಮೂರು ದಿನಗಳು ಕಾದರೂ ಮಡೆನೂರಿಗೆ ಮಾತ್ರ ಶಿವ ದರ್ಶನ ಸಿಕ್ಕಿಲ್ಲ. ಪತ್ನಿ, ಮಗು ಸಮೇತ ಶಿವಣ್ಣನ ಗೇಟ್ ಬಳಿ ಮೂರು ದಿನ ಬಿಸಿಲು, ಮಳೆ, ಗಾಳಿ ಅನ್ನದೆ ಕಾದಿದ್ದಾರೆ. ಕಾರ್‌‌ನಲ್ಲೇ ಮಲಗಿದ್ದಾರೆ. ಶಾಪ ವಿಮೋಚನೆಗೆ ಶ್ರೀರಾಮನಿಗಾಗಿ ಅಹಲ್ಯೆ ಕಾದಂತೆ ಮನು ಕೂಡ ಶಿವಣ್ಣನಿಗಾಗಿ ಕಾಯ್ತಾನೇ ಇದ್ದಾರೆ. ಅದ್ಯಾವಾಗ ದರ್ಶನ ಕೊಡ್ತಾರೋ ಕ್ಷಮಿಸ್ತಾರೋ ಗೊತ್ತಿಲ್ಲ.

ಶಿವಣ್ಣನ ನಿವಾಸಕ್ಕೆ ಮನು ಪತ್ರ ಕೂಡ ಬರೆದಿದ್ದು, ಬದುಕೋಕೆ ಒಂದು ಚಾನ್ಸ್ ಕೇಳಿದ್ದಾರೆ. ತಪ್ಪು ಎಲ್ಲರೂ ಮಾಡ್ತಾರೆ. ಅದನ್ನ ತಿದ್ದಿಕೊಳ್ಳೋಕೆ ಒಂದು ಅವಕಾಶ ಕೊಟ್ಟರೆ ಬಹುಶಃ ಮನು ಲೈಫ್ ಸುಗಮವಾಗಬಹುದು. ಇಲ್ಲವಾದಲ್ಲಿ ಆತ ಚಿತ್ರರಂಗದಲ್ಲಿ ಇದ್ದರೂ ಇರದಿದ್ದರೂ ಒಂದೇ ಆಗುತ್ತೆ. ಹೊಸ ಲೈಫ್ ಶುರು ಮಾಡುವ ಧಾವಂತದಲ್ಲಿರೋ ಮನುಗೆ ಶಿವಣ್ಣ ಕ್ಷಮಿಸುವುದರಿಂದ ಇಡೀ ಮನು ಕುಟುಂಬ ಅವರ ಹೆಸರಲ್ಲಿ ಜೀವನ ಸಾಗಿಸಲಿದೆ. ಇದು ಆದಷ್ಟು ಬೇಗ ಶಿವಣ್ಣನಿಗೆ ತಲುಪಲಿ ಅನ್ನೋದು ಹಲವರ ಆಶಯ.

Exit mobile version