ಕಮಲ್ ಹಾಸನ್, ಸೋನು ನಿಗಮ್ ಆಯ್ತು.. ಈಗ ಮಲಯಾಳಿಗರ ಸರದಿ. ಸಿನಿಮಾಗಳ ಬ್ಯುಸಿನೆಸ್‌ಗೆ ಪರಭಾಷಿಗರಿಗೆಲ್ಲಾ ಕರ್ನಾಟಕ, ಬೆಂಗಳೂರು ಬೇಕು. ಆದ್ರೆ ಅನ್ನ ತಿಂದ ಅದೇ ಮನೆಗೆ ದ್ರೋಹ ಬಗೆಯೋ ಕಾರ್ಯ ಮಾಡ್ತಾರೆ ಇವರುಗಳು. ಸದ್ಯ ಲೋಕಾ ಚಿತ್ರದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದು, ನಮ್ಮ ಕನ್ನಡಿಗರನ್ನು ಕೆಣಕಿರೋ ಮಲ್ಲುಗಳ ಕುರಿತ ಡಿಟೈಲ್ಡ್ ರಿಪೋರ್ಟ್ ಇದೆ.
ಭಾರತೀಯ ಚಿತ್ರರಂಗದ ಪ್ರತಿಯೊಂದು ಫಿಲ್ಮ್ ಇಂಡಸ್ಟ್ರಿಗೂ ನಮ್ಮ ಕರ್ನಾಟಕದ ಮಾರ್ಕೆಟ್ ಮೇಲೆ ಕಣ್ಣು. ಯಾಕಂದ್ರೆ ನಮ್ಮ ಕರ್ನಾಟಕ, ಅದ್ರಲ್ಲೂ ಬೆಂಗಳೂರೇ ಅವರ ಪಾಲಿಗೆ ಬಿಗ್ಗೆಸ್ಟ್ ಮಾರ್ಕೆಟ್. ಇಲ್ಲಿ ಸಿನಿಮಾ ಗೆದ್ರೆ ಎಲ್ಲೆಡೆ ಗೆದ್ದಂತೆ ಅನ್ನೋದು ಓಪನ್ ಸೀಕ್ರೆಟ್. ಅದಕ್ಕೆ ಪೂರಕವಾಗಿ ‘ನಾವು ಕನ್ನಡಿಗರು ವಿಶಾಲ ಹೃದಯದವರು’. ಎಲ್ಲರ ಸಿನಿಮಾಗಳನ್ನ ಅಷ್ಟೇ ಪ್ರೀತಿಯಿಂದ ನೋಡ್ತೀವಿ, ಗೆಲ್ಲಿಸ್ತೀವಿ, ಅವ್ರ ಜೋಳಿಗೆ ತುಂಬಿ ಕಳಿಸ್ತೀವಿ. ಆದ್ರೆ ಅವರಲ್ಲಿ ಒಂದಷ್ಟು ಮಂದಿ, ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋ ಕಾರ್ಯ ಮಾಡ್ತಿದ್ದಾರೆ.
‘ಲೋಕಾ’ ಚಿತ್ರದಲ್ಲಿ ಬೆಂಗಳೂರು ಹುಡ್ಗಿಯರಿಗೆ ಅವಮಾನ
ಖಾಕಿಗೂ ಅಪಮಾನ..ಡ್ರಗ್ ಹಬ್ ಆಗಿದ್ಯಾ ಬೆಂಗಳೂರು..?
ಕಮಲ್ ಹಾಸನ್, ಸೋನು ನಿಗಮ್ ನಮ್ಮ ಕನ್ನಡ ಭಾಷೆ ವಿಚಾರದಲ್ಲಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾಯ್ತು. ಇದೀಗ ಮಲಯಾಳಿಗರ ಸರದಿ. ಇತ್ತೀಚೆಗೆ ರಿಲೀಸ್ ಆಗಿರೋ ಮಲಯಾಳಂನ ಲೋಕಾ ಅನ್ನೋ ಸೂಪರ್ ಹೀರೋ ಮೂವಿಯಲ್ಲಿ ನಮ್ಮ ಬೆಂಗಳೂರು ಹುಡ್ಗಿಯರನ್ನು ಡಗಾರ್ ಅಂತ ಕರೆದಿದ್ದಾರೆ. ಯಾವಾಗ ಇದು ಕನ್ನಡಿಗರ ಕೆಂಗಣ್ಣಿಗೆ ಗುರಿ ಆಯ್ತೋ, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗಳು ವ್ಯಕ್ತವಾದವು.
ನಮ್ಮ ಗ್ಯಾರಂಟಿ ನ್ಯೂಸ್ ಈ ಕುರಿತು ವಿಸ್ತೃತ ವರದಿ ಮಾಡಿ, ಚಿತ್ರತಂಡ ಕ್ಷಮೆ ಯಾಚಿಸುವಂತೆ ಮಾಡಿತು. ಉದ್ದೇಶಪೂರ್ವಕವಾಗಿ ಆಗಿರೋ ತಪ್ಪಲ್ಲ. ಕರ್ನಾಟಕದ ಜನತೆಗೆ ಈ ಮೂಲಕ ಕ್ಷಮೆ ಯಾಚಿಸುತ್ತಾ, ಆದಷ್ಟು ಬೇಗ ಆ ಡಗಾರ್ ಅನ್ನೋ ಪದವನ್ನು ತೆಗೆಯಲಾಗುತ್ತದೆ ಅಂತ ನಿರ್ಮಾಣ ಸಂಸ್ಥೆ ಕ್ಷಮೆ ಕೋರಿದ ಪತ್ರವನ್ನು ಪೋಸ್ಟ್ ಮಾಡಿತು.
ಆವೇಶಂ, ಆಫೀಸರ್ ಆನ್ ಡ್ಯೂಟಿ ಬಳಿಕ ಲೋಕಾ ಸಿನಿಮಾ
ಮಲ್ಲುಗಳಿಗೆ ಪಾಠ ಕಲಿಸಿದ ಕನ್ನಡಿಗರು.. ಇನ್ಮೇಲೆ ಹುಷಾರ್
ಅಂದಹಾಗೆ ಲೋಕಾ ಚಿತ್ರದ ನಿರ್ಮಾಣ ಸಂಸ್ಥೆ ವೇ ಫೇರರ್ ಫಿಲಂಸ್ ಖ್ಯಾತ ನಟ ದುಲ್ಕರ್ ಸಲ್ಮಾನ್ ಒಡೆತನದ್ದು. ಈತನಿಗೆ ಬಿಗ್ ಹಿಟ್ ನೀಡಿದ ಬೆಂಗಳೂರು ಡೇಸ್ ಸಿನಿಮಾ ಇದೇ ಬೆಂಗಳೂರಲ್ಲಿ ಚಿತ್ರಿತವಾಗಿದೆ. ಹಾಗಿದ್ದುಕೊಂಡು ಹೇಗೆ ಇಂತಹ ತಪ್ಪು ನಡೀತು ಅನ್ನೋದು ಯಕ್ಷ ಪ್ರಶ್ನೆ. ಅಷ್ಟೇ ಅಲ್ಲ, ಮಲಯಾಳಂನ ಸಾಕಷ್ಟು ಚಿತ್ರಗಳಿಗೆ ಕರ್ನಾಟಕ ಫೇವರಿಟ್ ಸ್ಪಾಟ್. ಇಲ್ಲಿನ ಲೊಕೇಷನ್ಸ್, ಭಾಷೆ, ಬೆಂಗಳೂರು ಸಿಟಿ ಅವ್ರ ನೂರಾರು ಚಿತ್ರಗಳಲ್ಲಿ ಕಾಣಬಹುದು. ಅದ್ರಲ್ಲೂ ಆವೇಶಂ, ಆಫೀಸರ್ ಆನ್ ಡ್ಯೂಟಿ ಚಿತ್ರಗಳ ಬಳಿಕ ಈಗ ಲೋಕಾ ಚಿತ್ರದಲ್ಲಿ ಬೆಂಗಳೂರನ್ನ ಡ್ರಗ್ಸ್ ಹಬ್ ಅನ್ನೋ ತರಹ ಬಿಂಬಿಸಲಾಗಿದೆ.
ಸಿನಿಮಾಗಳು ಪ್ರೇಕ್ಷಕರ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲಿವೆ. ಹೀಗಿರುವಾಗ ಬಹುದೊಡ್ಡ ಇತಿಹಾಸ ಇರೋ ನಮ್ಮ ಬೆಂಗಳೂರು ಸಿಟಿಯನ್ನ ಚಿತ್ರಗಳಲ್ಲಿ ಹಣ ಮಾಡೋಕ್ಕೆ ಅಂತ ಕೆಟ್ಟ ರೀತಿಯಲ್ಲಿ ಬಿಂಬಿಸಿದ್ರೆ ಹೇಗೆ..? ಕರ್ನಾಟಕಕ್ಕೆ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದ್ರಲ್ಲೂ ಬೆಂಗಳೂರು ಬಂದವರೆಲ್ಲರಿಗೂ ತುತ್ತು ಅನ್ನ, ಗೇಣು ಬಟ್ಟೆ ಕೊಡ್ತಿದೆ. ಹಾಗಂತ ಎಲ್ಲೆಲ್ಲಿಂದಲೋ ಬಂದವ್ರು ನಮ್ಮೂರನ್ನು ಕಲುಷಿತಗೊಳಿಸೋದು ಎಷ್ಟು ಸರಿ..? ಈ ಬಗ್ಗೆ ಕಾನೂನು ಬೇಗ ಎಚ್ಚೆತ್ತುಕೊಳ್ಳಬೇಕು. ನಮ್ಮ ನಾಡು, ನುಡಿ, ಜಲ, ಭಾಷೆಯನ್ನ ಕಲುಷಿತಗೊಳಿಸೋರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಪರಮ ಸುಂದರಿ ಚಿತ್ರದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಮಲಯಾಳಂಗೆ ಅಪಮಾನ ಮಾಡಿದ್ದಾರೆ ಅಂತ ದೊಡ್ಡ ಮಟ್ಟದಲ್ಲಿ ಅಭಿಯಾನ ಮಾಡಿದ ಮಲ್ಲುಗಳಿಗೆ ನೆರೆ ರಾಜ್ಯದ ಕನ್ನಡಿಗರ ಭಾವನೆಗಳಿಗೂ ಧಕ್ಕೆ ತರಬಾರದು ಅನ್ನೋ ಕನಿಷ್ಟ ಜ್ಞಾನ ಇಲ್ಲದಿರೋದು ದುರಂತ. ಕ್ಷಮೆ ಯಾಚಿಸಿದ್ರೆ ಸಾಲಲ್ಲ. ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಇನ್ಮೇಲೆ ಯಾವುದೇ ಮಲಯಾಳಂ ಡೈರೆಕ್ಟರ್, ನಿರ್ಮಾಣ ಸಂಸ್ಥೆ ಅಥ್ವಾ ಹೀರೋ ಬಂದು, ಇಲ್ಲಿ ಚಿತ್ರಗಳನ್ನ ಮಾಡ್ಬೇಕು ಅಂದ್ರೆ ಇಲ್ಲಿನ ಪೂರ್ವಾಪರಗಳನ್ನು ತಿಳಿದುಕೊಂಡು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿನಿಮಾಗಳನ್ನ ಚಿತ್ರಿಸಲಿ. ಹಣ ಮಾಡೋಕೆ ಸಾಕಷ್ಟು ಮಾರ್ಗಗಳಿವೆ. ಇಂತಹ ವಾಮಮಾರ್ಗಗಳು ಅನುಸರಿಸೋರಿಗೆ ಬಿಸಿ ಮುಟ್ಟಿಸಲೇಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.