ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ, ಇತ್ತೀಚೆಗೆ ಮದುವೆ ಆಗಿದ್ದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಮದ್ವೆ ನಂತ್ರ ತಮ್ಮ ಖಾಸಗಿ ಬದುಕಿನ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿರೋ ಆ್ಯಂಕರ್ ಅನುಶ್ರೀ, ಸಾಕಷ್ಟು ಅಚ್ಚರಿಯ ವಿಷಯಗಳನ್ನ ತೆರೆದಿಟ್ಟಿದ್ದಾರೆ. ರೋಷನ್ ಕೈ ಹಿಡಿಯೋಕೆ ದೊಡ್ಮನೆ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಕಾರಣ ಎಂದಿರೋ ಅನು, ತಮ್ಮ ತಂದೆ, ಡಿ ಪದ ಸೇರಿದಂತೆ ಎಲ್ಲಕ್ಕೂ ಡೇರಿಂಗ್ ಆನ್ಸರ್ಸ್ ನೀಡಿದ್ದಾರೆ.
ದೊಡ್ಮನೆ ಯುವ ಪತ್ನಿಗೂ ಅನುಶ್ರೀ ಲವ್ ಸ್ಟೋರಿಗೂ ಲಿಂಕ್..!
ಅಪ್ಪು ಫೇವರಿಟ್ ಹೊಸಪೇಟೆ.. ಕಾಫಿ ಡೇಟ್ ಸೀಕ್ರೆಟ್ ರಿವೀಲ್
ಆ್ಯಂಕರ್ ಅನುಶ್ರೀ.. ಈಕೆ ನಟಿಯೂ ಹೌದು. ಇತ್ತೀಚೆಗೆ ರೋಷನ್ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಅನುಶ್ರೀ. ಕರ್ನಾಟಕದ ನಂಬರ್ ಒನ್ ನಿರೂಪಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರೋ ಅನುಶ್ರೀ, ಮದ್ವೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಖಾಸಗಿ ಬದುಕಿನ ಪುಟಗಳನ್ನ ಸಂದರ್ಶನವೊಂದರಲ್ಲಿ ಮುಕ್ತವಾಗಿ ತೆರೆದಿಟ್ಟಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿರೋ ಸಂದರ್ಶನದಲ್ಲಿ ಆರ್‌ಜೆ ಮಯೂರ ಜೊತೆ ಸಾಕಷ್ಟು ಟಾಪ್ ಸೀಕ್ರೆಟ್‌ಗಳನ್ನ ಹಂಚಿಕೊಂಡಿದ್ದಾರೆ.
ಮೊದಲಿಗೆ ರೋಷನ್ ಪರಿಚಯ ಹೇಗಾಯ್ತು..? ಎಲ್ಲಿ..? ಡೇಟ್ ಶುರು ಆಗಿದ್ದು ಹೇಗೆ ಅನ್ನೋದನ್ನ ಬಿಚ್ಚಿಟ್ಟಿರೋ ಅನುಶ್ರೀ, ಅದಕ್ಕೆ ದೊಡ್ಮನೆಯ ಸೊಸೆ, ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಕಾರಣ ಎಂದಿದ್ದಾರೆ. ಶ್ರೀದೇವಿ ಬೈರಪ್ಪ ಹಾಗೂ ರೋಷನ್ ಕ್ಲಾಸ್‌ಮೇಟ್ಸ್ ಅಂತೆ. ಹಾಗಾಗಿಯೇ ಶ್ರೀದೇವಿ ಅವ್ರ ಕಡೆಯಿಂದಲೇ ಅನುಗೆ ರೋಷನ್‌ನ ಪರಿಚಯ ಆಗಿದೆ.
ಕಾಫಿಗೆ ಅಂತ ಡೇಟ್‌ಗೆ ಕರೆದ ರೋಷನ್ ಬಗ್ಗೆ ರಾಜ್ ಬಿ ಶೆಟ್ಟಿ ಹಾಗೂ ಜೈತ್ರಾ ಆಚಾರ್ ಬಳಿ ಡಿಸ್ಕಸ್ ಕೂಡ ಮಾಡಿದ್ರಂತೆ ಅನುಶ್ರೀ. ನನ್ನನ್ನ ಅಲ್ಲಿಯ ತನಕ ಯಾರೂ ಸಹ ಕಾಫಿಗೆ ಕರೆದಿರಲಿಲ್ಲ. ಬೇಡವಾದವರೆಲ್ಲಾ ಕರೆದಿದ್ರು. ಆಗ ಕಾಫಿಗೆ ವಿಷ ಹಾಕಿ ಕೊಟ್ಬಿಡೋಣ ಅನಿಸಿತ್ತು. ಆದ್ರೆ ರೋಷನ್ ಕರೆದಾಗ ಹೋಗೋಕೆ ಆತನೇ ಜ್ಯೂಸ್‌ಗೆ ಏನಾದ್ರೂ ಹಾಕಿ ಕೊಟ್ಟರೆ ಏನು ಗತಿ ಅಂತ ಯೋಚಿಸಿದ್ದೆ ಎಂದಿದ್ದಾರೆ.
25 ವರ್ಷಗಳ ನಂತ್ರ ತಂದೆ ಬಂದ್ರೆ ಹೇಗೆ ಒಪ್ಕೊಳ್ಳೋದು..?
ಹುಟ್ಟಿಸಿದ ಮಾತ್ರಕ್ಕೆ ತಂದೆ-ತಾಯಿ ಜವಾಬ್ದಾರಿ ಮುಗಿಯಲ್ಲ
25 ವರ್ಷಗಳ ಹಿಂದೆ ಅನುಶ್ರೀ ತಾಯಿಗೆ ಸ್ಟಾಂಡರ್ಡ್ಸ್ ಇಲ್ಲ ಅಂತ ಬಿಟ್ಟು ಹೋಗಿದ್ದ ಅವ್ರ ತಂದೆ 25 ವರ್ಷಗಳ ನಂತ್ರ ದಿಢೀರ್ ಅಂತ ಬಂದು ನನ್ನ ನೋಡಿಕೊಳ್ಳಿ ಅಂದಿದ್ರು. ಸಾಲ ಮಾಡಿ ಬಿಟ್ಟು ಹೋಗಿದ್ದ ತಂದೆಗಾಗಿ ಕಾದು ಕಾದು ಸುಸ್ತಾಗಿದ್ದ ಅನುಶ್ರೀ ಕುಟುಂಬ. ಅಷ್ಟೇ ಅಲ್ಲ, ತೆಂಗಿನ ಕಾಯಿ ಚಿಪ್ಪು ಮಾರಿ ದಿನಸಿ ತಂದು ಅಡುಗೆ ಮಾಡಿದ್ದ ನಿದರ್ಶನಗಳೂ ಇವೆಯಂತೆ. ತಮ್ಮನನ್ನ ದುಡ್ಡು ಉಳಿಸೋಕೆ ಅಂತ ಇಂಗ್ಲಿಷ್ ಮೀಡಿಯಂನಿಂದ ಕನ್ನಡ ಮೀಡಿಯಂಗೆ ಹಾಕಿದ್ರಂತೆ. ಆದ್ರೆ ವಾಪಸ್ ಬಂದ ತಂದೆ ನೇರವಾಗಿ ನಮ್ಮ ಬಳಿ ಬಾರದೆ, ಟಿವಿಗಳ ಮುಂದೆ ಯಾಕೆ ಹೋದ್ರು..? ನಾನು ಅವರನ್ನ ಎಂದೂ ಸಹ ತಂದೆ ಅಲ್ಲವೇ ಅಲ್ಲ ಅಂತ ಹೇಳಿಲ್ಲ. ಆದ್ರೆ ಮಕ್ಕಳನ್ನ ತಂದೆ-ತಾಯಿ ಹುಟ್ಟಿಸಿಬಿಟ್ರೆ ಸಾಕೇ..? ಅಷ್ಟೇನಾ ಅವರ ಜವಾಬ್ದಾರಿ ಅಂತ ತಮ್ಮ ಮನದ ಆ ಭಾರವನ್ನೆಲ್ಲಾ ಹೊರಹಾಕಿದ್ದಾರೆ ಅನುಶ್ರೀ. ಹೆಂಡ್ತಿ, ಮಕ್ಕಳನ್ನ ಬಿಟ್ಟು ಹೋದ ಗಂಡನನ್ನ ಹೇಗೆ ಒಪ್ಕೊಳ್ಳೋದು ಅಂತ ಜವಾಬ್ದಾರಿ, ಬದ್ಧತೆ ಇಲ್ಲದ ವ್ಯಕ್ತಿಯ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ಅನುಶ್ರೀ ಹೆಸರು.. ಕೊಟ್ರು ಸ್ಪಷ್ಟನೆ..!
ಕೆ ಮಂಜು ಪರ ಮಾತಾಡಿದ್ರು.. BMW ಇಲ್ವೇ ಇಲ್ಲ
ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಅನುಶ್ರೀ ಹೆಸರು ಕೇಳಿಬಂದಿತ್ತು. ನಾನು ಏನೂ ತಪ್ಪು ಮಾಡಿರಲಿಲ್ಲ. ಆದ್ರೂ ನನ್ನ ಮೇಲೆ ಅಪವಾದ ಬಂದಿದ್ದು ಬೇಸರ ಇದೆ. ರಿಂಗ್ ಮಾಸ್ಟರ್ ಚಿತ್ರದ ಸ್ಮೋಕ್ ವಿಡಿಯೋಗಳನ್ನೆಲ್ಲಾ ಡ್ರಗ್ಸ್ ಕೇಸ್‌ಗೆ ಬಳಸಿಕೊಂಡ್ರು. ಆದ್ರೆ ಅಂದು ನನ್ನ ಪರ ಕೆ ಮಂಜು ಬಿಟ್ಟು ಬೇರಾರೂ ಮಾತನಾಡಲಿಲ್ಲ. ಬೆಂಗಳೂರು ಬಿಟ್ಟು ಊರು ಸೇರಿ, ಅಂಗಡಿ ಇಡುವ ಯೋಚನೆ ಮಾಡಿದ್ದೆ. ಅಮ್ಮ ತಡೆದರು. ತಪ್ಪೇ ಮಾಡಿಲ್ಲ ಅಂದ್ರೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದರು ಅಂತ ಅನುಶ್ರೀ ತಮ್ಮ ಮನದ ಕಿಚ್ಚನ ಹೊರಹಾಕಿದ್ದಾರೆ.
ಇದೇ ವೇಳೆ ನನ್ನ ಬಳಿ ಇಂದಿಗೂ ಬಿಎಂಡಬ್ಲ್ಯೂ ಕಾರ್ ಇಲ್ಲವೇ ಇಲ್ಲ. ಆದ್ರೂ ಕೂಡ ಆ ಕಾರ್ ಇದೆ ಈ ಕಾರ್ ಇದೆ ಅಂತೆಲ್ಲಾ ಹೇಳಿದ್ರು. 16 ಕೋಟಿ ಆಸ್ತಿ ಇದೆ ಅಂದಿದ್ರು ಪ್ರಶಾಂತ್ ಸಂಬರಗಿ. ಆದ್ರೆ ಆ ವ್ಯಕ್ತಿಯನ್ನ ನಾನು ಭೇಟಿಯೇ ಮಾಡಿಲ್ಲ. ಅದ್ಹೇಗೆ ಅವರು ಅದೆಲ್ಲಾ ಹೇಳ್ತಾರೆ..? ಎಂದಿದ್ದಾರೆ. ಒಂದು ವೇಳೆ ಡ್ರಗ್ಸ್ ಕೇಸ್ ನಿಜ ಆಗಿದ್ದಿದ್ರೆ, ರಾಜಕಾರಣಿಗಳ ನಂಟು ಇದ್ದಿದ್ರೆ ನಾನು ಬಿಎಂಡಬ್ಲ್ಯೂನೂ ತಗೋತಿದ್ದೆ. ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಯಲ್ಲಿ ಇರ್ತಿದ್ದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಡಗಾರ್ ಪದ ಬಳಕೆ..!
ನಾವೇನು ಪಾಪ ಮಾಡಿದ್ದೀವಿ..? ಆ ಪದ ಕೇಳೋಕೆ ಕಷ್ಟ
ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್‌ಗಳ ಬಗ್ಗೆ ಅನುಶ್ರೀ ನೇರವಾಗಿ ಮಾತನಾಡಿದ್ದು, ಅದ್ರಲ್ಲೂ ಡಿ ಅಥ್ವಾ ಡಗಾರ್ ಅಂತ ಮತನಾಡೋರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅವರದ್ದು ವಿಕೃತ ಮನಸ್ಥಿತಿ. ರಶ್ಮಿಕಾ ಮಂದಣ್ಣನನ್ನೂ ಬಿಟ್ಟಿಲ್ಲ ಅವರು. ಸುಮ್ನೆ ನಡ್ಕೊಂಡ್ ಹೋಗ್ತೀನಿ. ಕೆಟ್ಟ ಪದಗಳಿಂದ ನಿಂದಿಸ್ತಾರೆ. ರಾಜ್ಯ, ದೇಶ ಅಥ್ವಾ ಭಾಷೆಗೆ ಏನಾದ್ರೂ ಅವಮಾನ ಮಾಡಿದ್ದೀನಾ ಅಂತ ಬೇಸರದಿಂದ ಆ ನೋವಿನ ಮಾತುಗಳನ್ನ ಆಡಿದ್ದಾರೆ ಅನುಶ್ರೀ.
ಒಟ್ಟಾರೆ ಹೆಣ್ಣು ಒಂದು ಕುಟುಂಬದ ಕಣ್ಣು. ಆಕೆಗೂ ಭಾವನೆಗಳಿವೆ.. ಕನಸುಗಳಿವೆ. ಮಿಗಿಲಾಗಿ ತಾನು ಇಷ್ಟ ಬಂದಂತೆ ಬದುಕುವ ಸ್ವತಂತ್ರವಿದೆ. ಆದ್ರೆ ಸಮಾಜ ಆಕೆಯನ್ನ ಹೇಗೆಲ್ಲಾ ನೋಡುತ್ತೆ ಅನ್ನೋದಕ್ಕೆ ಅನುಶ್ರೀ ಮಾತುಗಳೇ ಸಾಕ್ಷಿ. ಇದು ನಿಜಕ್ಕೂ ಇತರೇ ಹೆಣ್ಣು ಮಕ್ಕಳಿಗೆ ಪಾಠವೂ ಹೌದು. ಹೆಣ್ಣು ಮಕ್ಕಳು ಸಬಲರಾಗಬೇಕು. ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ, ಆರ್ಥಿಕವಾಗಿ ಪ್ರಬಲರಾಗಬೇಕು.
