ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದೀಗ ಡಬ್ಬಿಂಗ್ ಶುರುಮಾಡಿರೋ ವಿಜಯ್ ಹಾಗು ಮಗಳ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ..?ಬೆಳ್ಳಿ ತೆರೆಮೇಲೆ ಭೀಮ ಮಗಳ ಮೊದಲ ಸಿನಿಮಾ ಆರ್ಭಟಕ್ಕೆ ಹೇಗೆಲ್ಲ ಸಿದ್ಧತೆ ನಡಿತಿದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
- ಶೂಟಿಂಗ್ ಮುಗಿಸಿದ ‘ಲ್ಯಾಂಡ್ ಲಾರ್ಡ್’ ಟೀಂ
- ಮಗಳೊಂದಿಗೆ ಡಬ್ಬಿಂಗ್ ಆರಂಭಿಸಿದ ವಿಜಯ್
- ನವೆಂಬರ್‌ನಲ್ಲಿ ತೆರೆಗೆ ಬರುತ್ತಾ ‘ಲ್ಯಾಂಡ್‌ಲಾರ್ಡ್’..?
‘ಸಿಟಿ ಲೈಟ್ಸ್’ ಸಿನಿಮಾ ನಿರ್ದೇಶನದ ಜೊತೆ ಜೊತೆಗೆ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ರೈತರ ಸಮಸ್ಯೆಗಳು, ವ್ಯವಸ್ಥೆ ಜೊತೆಗಿನ ಸಂಘರ್ಷದ ಕಥೆ ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿದೆ. ಚಿತ್ರದಲ್ಲಿ ಕೂಲಿಕಾರನ ಪಾತ್ರದಲ್ಲಿ ವಿಜಯ್ ನಟಿಸಿದ್ದು ಜಡೇಶ್ ತಾವು ನೋಡಿದ ಕೇಳಿದ ಕಥೆಗಳನ್ನು ಸೇರಿಸಿ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ.
ಈಗಾಗಲೇ ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರದಲ್ಲಿ ವಿಜಯ್ ಮಗಳು ರಿತನ್ಯಾ ಕೂಡ ನಟಿಸಿದ್ದು,ಸದ್ಯ ತಂದೆ ಮಗಳು ಚಿತ್ರದ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವೊಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ ಕೂಡ ಇಬ್ಬರೂ ತಂದೆ, ಮಗಳಾಗಿಯೇ ನಟಿಸುತ್ತಿದ್ದಾರೆ. ರಿತನ್ಯಾ ಜೋಡಿಯಾಗಿ ನಟ ಶಿಶಿರ್ ಬೈಕಾಡಿ ಬಣ್ಣ ಹಚ್ಚಿದ್ದಾರೆ.
ಇನ್ನು ‘ಲ್ಯಾಂಡ್‌ಲಾರ್ಡ್’ ಚಿತ್ರದ ಟೈಟಲ್ ಜೊತೆಗೆ “ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ” ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಚಿತ್ರಕ್ಕೆ ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಇದೆ. ಇತ್ತೀಚೆಗೆ ‘ಕಾಟೇರ’ ಹಾಗೂ ‘ಎಕ್ಕ’ ಸೇರಿ ಹಲವು ಸಿನಿಮಾಗಳಲ್ಲಿ ಮಾಸ್ತಿ ಡೈಲಾಗ್ಸ್ ಸದ್ದು ಮಾಡಿದೆ. ಈ ಚಿತ್ರದಲ್ಲಿ ಕೂಡ ಅದು ಮುಂದುವರೆಯಲಿದೆ. ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ‘ಲ್ಯಾಂಡ್‌ಲಾರ್ಡ್’ ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ.
ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ. ವಿ ಸತ್ಯಪ್ರಕಾಶ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ನೆಲಮಂಗಲದ ಬಳಿ ಭಾರೀ ಸೆಟ್ ಹಾಕಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಬಿ. ಸುರೇಶ್ ಕೂಡ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಹಿರಿಯ ನಟಿ ಉಮಾಶ್ರೀ ಕೂಡ ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಸದ್ಯ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಆರಂಭಿಸಿರುವ ‘ಲ್ಯಾಂಡ್‌ಲಾರ್ಡ್’ ತಂಡ ಸಿನಿಮಾ ಬಿಡುಗಡೆ ದಿನಾಂಕದ ಚರ್ಚೆಯಲ್ಲಿದೆ. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ- 1’ ಹಾಗೂ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಗಳ ಬಿಡುಗಡೆ ನೋಡಿಕೊಂಡು ತಮ್ಮ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆಯಂತೆ. ನವೆಂಬರ್‌ನಲ್ಲಿ ‘ಲ್ಯಾಂಡ್‌ಲಾರ್ಡ್’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.