ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಒಂದ್ಕಡೆ ಐಪಿಎಲ್ ಅಬ್ಬರ. ಮತ್ತೊಂದ್ಕಡೆ ಒಳ್ಳೆಯ ಸಿನಿಮಾಗಳ ಬರ. ಈ ನಡುವೆ 25 ವರ್ಷಗಳ ನಂತ್ರ ರೀ-ರಿಲೀಸ್ ಆದ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್‌ರ ಕೋಟಿಗೊಬ್ಬ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಅಂದಹಾಗೆ ಕೋಟಿಗೊಬ್ಬ ಜೊತೆ ತೆರೆಕಂಡ ಕನ್ನಡದ 8 ಸಿನಿಮಾಗಳ ಥಿಯೇಟರ್‌ಗಳು ಬಿಕೋ ಅಂತಿವೆ. ಹಾಗಾದ್ರೆ ಬೆಳ್ಳಿತೆರೆ ಮೇಲೆ ಕೋಟಿಗೊಬ್ಬನ ಗತ್ತು ಹೇಗಿದೆ ಅನ್ನೊದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- 8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್
- 25 ವರ್ಷದ ನಂತರವೂ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ
- ಸಾಹಸಸಿಂಹನ ಸ್ಟೈಲ್‌ಗೆ ಇಂದಿನ ಗ್ಯಾಂಗ್‌ಸ್ಟರ್ಸ್ ಫೇಲ್
- ಪ್ರಸನ್ನದಲ್ಲಿ ವಿಷ್ಣುದಾದಾ ದರ್ಬಾರ್.. ಬಾಕ್ಸಾಫೀಸ್ ಶೇಕ್
ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಏಪ್ರಿಲ್ 10ರಂದು ಅಕ್ಷರಶಃ ಜಿದ್ದಾ ಜಿದ್ದಿನ ಕಾಳಗವೇ ಏರ್ಪಟ್ಟಿತ್ತು. ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಮೈನಡುಗಿಸುವ ಹಿಂಸೆ, ಟೆರರ್ ಸಿನಿಮಾದ ರಾಜಕೀಯ ಕೆಸರೆರಚಾಟ, ಪೀಟರ್, ಕ್ಯಾಲೆಂಡರ್ ನಂತಹ ವಿಭಿನ್ನ ಪ್ರಯೋಗದ ಚಿತ್ರಗಳು ಮತ್ತು ಕಾಡ ಚಿತ್ರದ ಸೈಕೋಲಾಜಿಕಲ್ ದರ್ಬಾರ್ ಸೇರಿದಂತೆ ಸರಿಸುಮಾರು ಎಂಟು ಹೊಸ ಸಿನಿಮಾಗಳು ಏಕಕಾಲಕ್ಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಭರ್ಜರಿ ಪ್ರಚಾರ, ಹೊಸ ತಲೆಮಾರಿನ ನಟರ ಆರ್ಭಟದ ನಡುವೆ ಈ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆ ಎಂದೇ ಭಾವಿಸಲಾಗಿತ್ತು. ಆದರೆ, ಸಿನಿವಲಯದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದು, ಪ್ರೇಕ್ಷಕರು ಹೊಸ ಚಿತ್ರಗಳಿಗಿಂತ ಹೆಚ್ಚಾಗಿ ಹಳೆಯ ನೆನಪಿನ ಅಲೆಗೆ ಮಾರುಹೋಗಿದ್ದಾರೆ.
ಹೌದು.. ಹೊಸಬರ ಸಿನಿಮಾಗಳು ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಲ್ಲದೆ ಸೊರಗುತ್ತಿವೆ. ಇತ್ತ 25 ವರ್ಷಗಳ ಹಿಂದೆ ಇತಿಹಾಸ ಬರೆದಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್‌ರ ‘ಕೋಟಿಗೊಬ್ಬ’ ಸಿನಿಮಾ ಮಾತ್ರ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಿರ್ಮಾಪಕ ಸೂರಪ್ಪ ಬಾಬು ಅಭಿಮಾನಿಗಳ ಆಸೆಯಂತೆ ಈ ಚಿತ್ರವನ್ನು ರೀ-ರಿಲೀಸ್ ಮಾಡಿದ್ದೇ ತಡ, ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಈಗ ಹೌಸ್ ಫುಲ್ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಹೊಸ ಚಿತ್ರಗಳ ಕಥೆ-ಕಿರಿಕ್ ನಡುವೆ ವಿಷ್ಣುದಾದಾ ಖದರ್ ಕಂಡ ಟ್ರೇಡ್ ಎಕ್ಸ್‌ಪರ್ಟ್‌ಗಳು ದಂಗಾಗಿದ್ದಾರೆ. ಸಾಹಸಸಿಂಹನ ಆ ಸ್ಟೈಲಿಶ್ ಎಂಟ್ರಿ, ಖಡಕ್ ಡೈಲಾಗ್, ಮಾಸ್ ಮ್ಯಾನರಿಸಂ ಮುಂದೆ ಇಂದಿನ ಯಾವ ‘ಗ್ಯಾಂಗ್‌ಸ್ಟರ್’ಗಳ ಅಬ್ಬರವೂ ಅಷ್ಟಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಕಟು ಸತ್ಯ.
ಇತ್ತ ಪ್ರಸನ್ನ ಥಿಯೇಟರ್‌ನಲ್ಲಿ ಮಾತ್ರ ಕೋಟಿಗೊಬ್ಬ ಸಿನಿಮಾ ಐದನೇ ದಿನವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ವಿಷ್ಣುವರ್ಧನ್ ಅವರ ಅಭಿಮಾನಿ ಬಳಗ ಬೆಂಗಳೂರಿನಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿದ್ದಾರೆ. ಸಾಹಸಸಿಂಹನ ಕ್ರೇಜ್ ಎಂತಹದ್ದು ಎಂಬುದಕ್ಕೆ ಈ ಬಾಕ್ಸಾಫೀಸ್ ವರದಿಯೇ ಸಾಕ್ಷಿ. ಒಟ್ಟಾರೆಯಾಗಿ ಹೇಳುವುದಾದರೆ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಟರು, ಹೊಸ ತಂತ್ರಜ್ಞಾನ ಎಷ್ಟೇ ಬಂದರೂ ಲೆಜೆಂಡ್ ಗಳ ಸ್ಥಾನ ಯಾವತ್ತೂ ಅಬಾಧಿತ. ನಾಗಣ್ಣ ನಿರ್ದೇಶನದ ಈ ಮಾಸ್ ಎಂಟರ್‌ಟೈನರ್ ಮುಂದೆ ಈಗಿನ ಎಂಟು ಹೊಸ ಸಿನಿಮಾಗಳ ಆರ್ಭಟ ತಣ್ಣಗಾಗಿದೆ. ಮಾರುಕಟ್ಟೆಯಲ್ಲಿ ಕೋಟಿಗೊಬ್ಬನೇ ಬಾಸ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ರೀ-ರಿಲೀಸ್ ಮೂಲಕ ಸೂರಪ್ಪ ಬಾಬು ಕೈಹಿಡಿದಿರುವ ಬಾಕ್ಸಾಫೀಸ್ ಸುನಾಮಿ, ಇಂದಿನ ಸಿನಿಮಾ ಮೇಕರ್‌ಗಳಿಗೆ ಪ್ರೇಕ್ಷಕರ ನಾಡಿಮಿಡಿತ ಅರಿಯಲು ಒಂದು ಪಾಠವಾಗಿದೆ.
