ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ರು. ಆದ್ರೆ ಇಂದು ಅವರಿಗಾಗಿ ಆರಡಿ ಮೂರಡಿಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದ್ದು ಈ ಕಾಲಘಟ್ಟದ ಅತ್ಯಂತ ಕೆಟ್ಟ ಗಳಿಗೆಗಳಲ್ಲೊಂದು. ಯಾವಾಗ ಅವ್ರ ಪುಣ್ಯಭೂಮಿಯನ್ನ ಕೆಡವಿದ್ರೋ, ಆಗಲೇ ಕಿಚ್ಚ ಸುದೀಪ್ ಕೆರಳಿದ್ರು. ಅಷ್ಟೇ ಅಲ್ಲ, ಕೊಟ್ಟ ಮಾತಿನಂತೆ ಈಗ ಸ್ಮಾರಕ ಪುನರ್‌ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಅರ್ಧ ಎಕರೆ ಜಮೀನು ಕೂಡ ಖರೀದಿಸಿದ್ದಾರೆ.
- ವಿಷ್ಣುದಾದಾಗಾಗಿ ಕಿಚ್ಚ ಖರ್ಚು ಮಾಡ್ತಿರೋದೆಷ್ಟು ಕೋಟಿ..?
- ವಿಷ್ಣು ಸ್ಮಾರಕ ಪುನರ್ ನಿರ್ಮಾಣಕ್ಕೆ ಮುಂದಾದ ಬಾದ್‌ಷಾ
- ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ಅರ್ಧ ಎಕರೆ ಖರೀದಿ..!
- ಸೆಪ್ಟೆಂಬರ್ 2ಕ್ಕೆ ಬ್ಲೂ ಪ್ರಿಂಟ್, ಸೆ- 18ಕ್ಕೆ ಭೂಮಿ ಪೂಜೆ ಫಿಕ್ಸ್
ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಹೇಗೋ ವಿಷ್ಣುದಾದಾ ಕೂಡ ಹಾಗೆಯೇ. ಚಂದನವನ ಸಮೃದ್ಧವಾಗಿ ಬೆಳೆಯೋಕೆ ನೀರೆರೆದಂತಹ ಮೇರು ಕಲಾವಿದರಲ್ಲಿ ವಿಷ್ಣುವರ್ಧನ್ ಅವರ ಕೊಡುಗೆ ಅಪಾರವಾದದ್ದು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನ ಆಗಲೇ ಇಂಟ್ರಡ್ಯೂಸ್ ಮಾಡಿ, ಪಂಚಭಾಷೆಗಳಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಗರಿಮೆ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್‌ಗಿದೆ.
ಕನ್ನಡ ನಾಡು, ನುಡಿ, ಜಲ ವಿಚಾರಕ್ಕೆ ಸದಾ ಮುಂದೆ ನಿಲ್ತಿದ್ದ, ಕನ್ನಡ ಹಾಗೂ ಕರ್ನಾಟಕ ಸಂಸ್ಕೃತಿಯ ರಾಯಭಾರಿ ವಿಷ್ಣುವರ್ಧನ್ ಅವರಿಗೆ ಅವ್ರು ಭೌತಿಕವಾಗಿ ನಮ್ಮನ್ನಗಲಿದ ಒಂದೂವರೆ ದಶಕವಾದ್ರೂ ಪುಣ್ಯಭೂಮಿ ವಿಚಾರ ಇತ್ಯರ್ಥವಾಗದೇ ಇರೋದು ದುರಂತ. ಆರಡಿ, ಮೂರಡಿ ಜಾಗಕ್ಕಾಗಿ ಅಭಿಮಾನಿಗಳು ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿರೋದು ಈ ಕಾಲಘಟ್ಟದ ಅತಿ ಕೆಟ್ಟ ಬೆಳವಣಿಗೆಯೇ ಸರಿ. ಅದ್ರಲ್ಲೂ ಒಬ್ಬ ಮೇರುನಟನ ಪುಣ್ಯ ಭೂಮಿ ಜೊತೆ ಸಮಾಧಿ ನೆಲಸಮ ಮಾಡಿ ವಿಕೃತ ಮೆರೆದವರಿಗೆ ಏನನ್ನಬೇಕೋ ಗೊತ್ತಿಲ್ಲ.
ವಿಷ್ಣು ಅವರ ನಟನೆಯನ್ನಷ್ಟೇ ಅಲ್ಲ, ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಬಂದ ಅವ್ರ ಅಸಂಖ್ಯಾತ ಅಭಿಮಾನಿಗಳಲ್ಲಿ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಒಬ್ರು. ಅಲ್ಲದೆ ಮಾತಾಡ್ ಮಾತಾಡು ಮಲ್ಲಿಗೆ ಅನ್ನೋ ಸಿನಿಮಾದಲ್ಲಿ ಅವರೊಟ್ಟಿಗೆ ಸ್ಕ್ರೀನ್ ಕೂಡ ಶೇರ್ ಮಾಡಿದ ಕಲಾವಿದ. ಸದಾ ವಿಷ್ಣುದಾದಾರ ಕಟ್ಟಾಭಿಮಾನಿಯಾಗಿ ಗುರ್ತಿಸಿಕೊಂಡಿದ್ದ ಕಿಚ್ಚ, ವಿಷ್ಣು ಸಮಾಧಿ ಕೆಡವಿದ ವಿಚಾರ ತಿಳಿದು ಕುಪಿತಗೊಂಡಿದ್ರು. ಅವ್ರ ಆ ಆಕ್ರೋಶದ ಮಾತುಗಳನ್ನ ವಿಡಿಯೋ ಮೂಲಕ ಹಾಗೂ ಪೋಸ್ಟ್ ಮೂಲಕ ಹೊರಹಾಕಿದ್ರು. ಸ್ಮಾರಕ ಪುನರ್ ನಿರ್ಮಾಣಕ್ಕೆ ಪಣ ಕೂಡ ತೊಟ್ಟಿದ್ದರು.
ಇದೀಗ ನುಡಿದಂತೆ ನಡೆಯುತ್ತಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಹೌದು.. ಅಭಿಮಾನ್ ಸ್ಟುಡಿಯೋದಿಂದ ಕೂಗಳತೆ ದೂರದಲ್ಲಿ ಎರಡ್ಮೂರು ಕಿಲೋ ಮೀಟರ್ ಅಂತರದಲ್ಲೇ ಸುಮಾರು ಅರ್ಧ ಎಕರೆ ಜಮೀನನ್ನು ತಮ್ಮ ಸ್ವಂತ ದುಡ್ಡಿನಲ್ಲಿ ಖರೀದಿ ಮಾಡಿದ್ದಾರೆ. ಅದೂ ವಿಷ್ಣು ಸ್ಮಾರಕವನ್ನು ಪುನರ್ ನಿರ್ಮಿಸಲು ಅನ್ನೋದು ಸಂತಸದ ವಿಷಯ. ಈ ವಿಚಾರವನ್ನು ಸ್ವತಃ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ, ಸುದೀಪ್ ಅವರಿಗೂ ಆತ್ಮೀಯರಾದ ವೀರಕಪುತ್ರ ಶ್ರೀನಿವಾಸ್ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ಒಂದು ವೇಳೆ ಮನವಿಯಂತೆ ಜಾಗ ಕೊಟ್ಟರೆ ಅಲ್ಲೊಂದು ಲೈಬ್ರರಿ ನಿರ್ಮಸಲು ಯೋಚಿಸಿದ್ದು, ಸುದೀಪ್ ಖರೀದಿ ಮಾಡಿರೋ ಅರ್ಧ ಎಕರೆಯಲ್ಲಿ ವಿಷ್ಣು ದರ್ಶನಕ್ಕೆ ಬ್ಲೂ ಪ್ರಿಂಟ್ ಸಿದ್ಧಗೊಳಿಸ್ತಿದ್ದಾರಂತೆ. ಅದರಲ್ಲಿ 25 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆ ತಲೆ ಎತ್ತಲಿದ್ದು, ಇದೇ ಸೆಪ್ಟೆಂಬರ್ 2ಕ್ಕೆ ಅದರ ಕಂಪ್ಲೀಟ್ ಬ್ಲೂ ಪ್ರಿಂಟ್ ರಿಲೀಸ್ ಆಗಲಿದೆ. ಸೆಪ್ಟೆಂಬರ್ 18ರ ಶುಭದಿನದಂದು ಅದರ ಭೂಮಿ ಪೂಜೆ ಕೂಡ ನೆರವೇರಲಿದ್ದು, 2026ರ ಸೆಪ್ಟೆಂಬರ್ 18 ವಿಷ್ಣು ದರ್ಶನವನ್ನು ಉದ್ಘಾಟಿಸೋ ಯೋಜನೆಯಿದೆ.
ಸರ್ಕಾರ ನೀಡಿದಂತಹ 20 ಎಕರೆ ಜಮೀನು, ತಂದೆಯ ಸಮಾಧಿಗಿಂತ ಹೆಚ್ಚು ಅಂತ ದುಡ್ಡಿದ ದಾಹಕ್ಕೆ ಒಳಗಾದ ಬಾಲಣ್ಣನವರ ಕುಟುಂಬಕ್ಕೇನೇ ಅಂದು ಸುದೀಪ್ ಹಾಗೂ ಅವ್ರ ತಂದೆ ಸೇರಿ ಸ್ಮಾರಕ ಕಟ್ಟಿಸಿದ್ರು. ಇನ್ನು ಈಗ ವಿಷ್ಣುದಾದಾ ಸ್ಮಾರಕ ನಿರ್ಮಿಸದೆ ಇರ್ತಾರೆಯೇ..? ಇದು ನಿಜಕ್ಕೂ ಸುದೀಪ್‌ಗೆ ವಿಷ್ಣುದಾದಾ ಮೇಲೆ ಇರೋ ಅಭಿಮಾನದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ. ಇಂತಹ ಹೃದಯವಂತರು ಕೋಟಿ ಮಂದಿಯಲ್ಲಿ ಒಬ್ಬರೇ ಅನ್ನೋದು ಚಿಂತನಾರ್ಹವಾದುದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್