ಸೆಪ್ಟೆಂಬರ್ 2ರಂದು ಬಾದ್‌ಷಾ ಕಿಚ್ಚ ಸುದೀಪ್ ಬರ್ತ್ ಡೇ. ಕಿಚ್ಚನಿಗೆ ಅಮ್ಮನಿಲ್ಲದ ಮೊದಲ ವರ್ಷ ಇದಾಗಲಿದ್ದು, ಫ್ಯಾನ್ಸ್‌ಗೆ ಬರ್ತ್ ಡೇ ಕುರಿತು ವಿಶೇಷ ಪತ್ರ ಬರೆದಿದ್ದಾರೆ ಅಭಿನಯ ಚಕ್ರವರ್ತಿ. ಅದೇನು ಅನ್ನೋದನ್ನ ನೀವೇ ನೋಡಿ.
ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ ಸುದೀಪ್
ಪ್ರಿಯ ಸ್ನೇಹಿತರೇ.. ಸೆಪ್ಟೆಂಬರ್ 2ರ ಬೆಳಗಿನ ಜಾವ ಅಲ್ಲ, ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ..?
ಸೆಪ್ಟೆಂಬರ್ 2ರಂದು ನೀವು ನನ್ನನ್ನು ಭೇಟಿ ಆಗುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದುರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ..? ಆದ್ದರಿಂದಲೇ ಮನೆಯ ಬಳಿ ನಿಮ್ಮನ್ನು ದಶಕಗಳಿಂದ ಭೇಟಿ ಮಾಡುತ್ತಲೇ ನಾನು ಸಂಭ್ರಮಿಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ.
ಆದ್ರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗೆ ಇಷ್ಟವಿಲ್ಲ. ನಿಮ್ಮ ಮೂಲಕವೇ ನನ್ನ ಹುಟ್ದಬ್ಬ ಹುಟ್ಟಬೇಕು. ಗಡಿಯಾರ 12 ಗಂಟೆ ಅಂತ ಸದ್ದು ಮಾಡಿದಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ 1ರ ರಾತ್ರಿಯೇ ನಾವೆಲ್ಲಾ ಒಂದು ಕಡೆ ಸೇರೋಣ. ಎಲ್ಲಿ ಹೇಗೆ ಅನ್ನೋದನ್ನ ತಿಳಿಸುತ್ತೇನೆ. ಆದ್ರೆ ಮಾರನೇ ದಿನ, ಅಂದ್ರೆ ಸೆಪ್ಟೆಂಬರ್ 2ರ ಬೆಳಗ್ಗೆ ಮನೆಯ ಬಳಿ ದಯವಿಟ್ಟು ಯಾರೂ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲ ಅಂದಮೇಲೂ ನೀವು ಮನೆಯ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ. ಜೊತೆಗೆ ಈ ವರ್ಷ ಅಮ್ಮನಿಲ್ಲದ ಮೊದಲ ವರ್ಷ ಆಗಿರೋದ್ರಿಂದ ಮನೆಯ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುವಿರೆಂದು & ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾ ಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಸದಾ ಪ್ರೀತಿ ಇರಲಿ…ನಿಮ್ಮ..ಕಿಚ್ಚ.
To all my dearest Frnzzz,,,
Saw many videos posted about
the excitement shown to celebrate 2nd Sept.
Big big thanks for this unconditional luv.
Mch luv and Hugs
❤️🤗 pic.twitter.com/Q3fP0otsxQ— Kichcha Sudeepa (@KicchaSudeep) August 25, 2025
