ವಂಚನೆ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡಿಸ್

Web Photo Editor (62)

200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಜಾಕ್ವೆಲಿನ್ ಫರ್ನಾಂಡಿಸ್ ಹಿಂಪಡೆದಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜಾಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿ ಹಿಂಪಡೆಯಲು ಅನುಮತಿ ನೀಡಿದೆ. ಇದರೊಂದಿಗೆ, ಜಾಕ್ವೆಲಿನ್ ವಿರುದ್ಧದ ಕಾನೂನು ಪ್ರಕ್ರಿಯೆಗಳು ಕೆಳಹಂತದ ವಿಚಾರಣಾ ನ್ಯಾಯಾಲಯದಲ್ಲೇ ಮುಂದುವರಿಯಲಿವೆ.

ದೆಹಲಿ ಹೈಕೋರ್ಟ್ ಆದೇಶದ ಬಳಿಕ ಸುಪ್ರೀಂ ಕೋರ್ಟ್ ಮೊರೆ

ಇಡಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಹಾಗೂ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಜಾಕ್ವೆಲಿನ್ ಫರ್ನಾಂಡಿಸ್ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆ ಮನವಿಯನ್ನು ತಿರಸ್ಕರಿಸಿದ ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆ ಅರ್ಜಿಯನ್ನೇ ಹಿಂಪಡೆದಿರುವುದರಿಂದ, ಪ್ರಕರಣದ ವಿಚಾರಣೆ ಕೆಳಹಂತದ ನ್ಯಾಯಾಲಯದಲ್ಲೇ ಮುಂದುವರಿಯಲಿದೆ.

ನ್ಯಾಯಮೂರ್ತಿ ಹಿಂದೆ ಸರಿದಿದ್ದ ಪ್ರಕರಣ

ಈ ಅರ್ಜಿ ಜೂನ್ 11ರಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಕೇಸ್‌ನಲ್ಲಿ ತಮ್ಮ ಪುತ್ರ ಸರ್ಕಾರದ ಪರವಾಗಿ ವಕೀಲರಾಗಿ ಹಾಜರಾಗಿದ್ದ ಹಿನ್ನೆಲೆ, ನೈತಿಕ ಕಾರಣಗಳಿಂದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಪ್ರಕರಣವನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಪೀಠಕ್ಕೆ ವರ್ಗಾಯಿಸಲಾಗಿತ್ತು.

‘ನಾನು ನಿರಪರಾಧಿ’ ಎಂದಿದ್ದ ಜಾಕ್ವೆಲಿನ್

ಇತ್ತೀಚೆಗೆ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಾಕ್ವೆಲಿನ್ ಫರ್ನಾಂಡಿಸ್, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದರು. ತಾವು ಯಾವುದೇ ತಪ್ಪು ಮಾಡಿಲ್ಲ ಮತ್ತು ನ್ಯಾಯಾಲಯದಲ್ಲೇ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸುವುದಾಗಿ ತಿಳಿಸಿದ್ದರು.

ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್, ಆತನ ಪತ್ನಿ ಲೀನಾ ಮರಿಯಾ ಪಾಲ್ ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಜುಲೈ 16ಕ್ಕೆ ನಿಗದಿಪಡಿಸಲಾಗಿದೆ.

ಅಪ್ರೂವರ್ ಅರ್ಜಿಯನ್ನೂ ಹಿಂಪಡೆದಿದ್ದರು

ಕೆಲವು ವಾರಗಳ ಹಿಂದೆಯೇ ಜಾಕ್ವೆಲಿನ್ ಫರ್ನಾಂಡಿಸ್ ಈ ಪ್ರಕರಣದಲ್ಲಿ ಅಪ್ರೂವರ್ (ಸರ್ಕಾರದ ಸಾಕ್ಷಿದಾರ) ಆಗಲು ಸಲ್ಲಿಸಿದ್ದ ಅರ್ಜಿಯನ್ನೂ ಹಿಂಪಡೆದಿದ್ದರು. ಆ ಅರ್ಜಿಗೆ ಇಡಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ತನಿಖೆ ವೇಳೆ ಜಾಕ್ವೆಲಿನ್ ಸಂಪೂರ್ಣ ಸಹಕಾರ ನೀಡಿಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಇಡಿ ಆರೋಪಿಸಿದೆ. ಅಲ್ಲದೆ, ಸುಕೇಶ್ ಚಂದ್ರಶೇಖರ್ ಅವರ ಅಪರಾಧ ಹಿನ್ನೆಲೆ ತಿಳಿದಿದ್ದರೂ ಅವರೊಂದಿಗೆ ಸಂಪರ್ಕ ಮುಂದುವರಿಸಿದ್ದರೆಂಬ ಆರೋಪವನ್ನೂ ಜಾರಿ ನಿರ್ದೇಶನಾಲಯ ಮಾಡಿದೆ. ಪ್ರಸ್ತುತ, ಪ್ರಕರಣದ ವಿಚಾರಣೆ ಮುಂದುವರಿಯುತ್ತಿದ್ದು, ನ್ಯಾಯಾಲಯದ ಮುಂದಿನ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

Exit mobile version