ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?

ಜೈಲಿನಲ್ಲಿದ್ದರೂ ಜಾಕ್ವೆಲಿನ್ ಮೇಲಿನ ಸುಕೇಶ್ ಲವ್ ಕಮ್ಮಿಯಾಗಿಲ್ಲ

Untitled design 2026 08 18T181351.095

ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಸುಕೇಶ್ ಚಂದ್ರಶೇಖರ್ ಲವ್ ಪಯಣ ಮತ್ತೆ ನ್ಯೂಸ್ ಹೆಡ್‌ಲೈನ್ಸ್‌ಗೆ ಬಂದಿದೆ. ದೆಹಲಿಯ ತೇಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೂ ಸುಕೇಶ್ ಮಾಡ್ತಿರೋ ಕಿತಾಪತಿ ಕಮ್ಮಿಯಾಗಿಲ್ಲ. ಜಾಕ್ವೆಲಿನ್ ಬರ್ತ್‌ಡೇ ಬಂದ್ರೆ ಸಾಕು, ಸುಕೇಶ್ ಕಡೆಯಿಂದ ದಿನಕ್ಕೊಂದು ಶಾಕಿಂಗ್ ಗಿಫ್ಟ್ ಅನೌನ್ಸ್ ಆಗುತ್ತೆ. ಈ ಬಾರಿ ಜಾಕ್ವೆಲಿನ್ ಗೆ ಸಿಗ್ತಿರೊ ಗಿಫ್ಟ್ ಏನು..? ಇದರಿಂದ ನಟಿ ಜಾಕ್ವೆಲಿನ್‌ಗೆ ಮತ್ತೆ ಕಂಟಕ ತಂದಿಡುತ್ತಾ? ಇಲ್ಲಿದೆ ನೋಡಿ…

ಫರ್ನಾಂಡಿಸ್ ಹಾಗೂ ನಟೋರಿಯಸ್ ವಂಚಕ ಸುಕೇಶ್ ಚಂದ್ರಶೇಖರ್ ಕಥೆ ಯಾವುದೇ ಹೈ-ಡ್ರಾಮಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ದೆಹಲಿ ಜೈಲಿನಿಂದಲೇ ಪ್ರೇಮ ಪತ್ರಗಳನ್ನು ಬರೆಯುತ್ತಾ ಸುದ್ದಿಯಲ್ಲಿರೋ ಸುಕೇಶ್, ಇತ್ತೀಚೆಗೆ ಜಾಕ್ವೆಲಿನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೊಮ್ಮೆ ದುಬಾರಿ ಗಿಫ್ಟ್‌ಗಳ ಸುರಿಮಳೆಗೈದಿದ್ದಾನೆ. ಈ ಬಾರಿ ಬರೀ ಲಕ್ಸರಿ ಬ್ಯಾಗ್, ಕಾರ್, ಪ್ರೈವೇಟ್ ಜೆಟ್ ಅಥವಾ ಜ್ಯುವೆಲ್ಲರಿ ಅಲ್ಲ, ಬದಲಾಗಿ ಬೃಹತ್ ಫಿಲ್ಮ್ ಸ್ಟುಡಿಯೋ, ಫುಟ್‌ಬಾಲ್ ಕ್ಲಬ್ ಮತ್ತು ಬ್ರ್ಯಾಂಡ್ ನ್ಯೂ ‘ಫುಟ್‌ಬಾಲ್ ಸ್ಟೇಡಿಯಂ’ ಅನ್ನೇ ಗಿಫ್ಟ್ ಮಾಡುವುದಾಗಿ ಪತ್ರ ಬರೆದು ದೇಶಾದ್ಯಂತ ಸದ್ದು ಮಾಡಿದ್ದಾನೆ.

ಸುಕೇಶ್ ಬರೆಯುವ ಪತ್ರಗಳು ಹಾಗೂ ಆತ ಕೊಡುವ  ಗಿಫ್ಟ್‌ಗಳ ಪಟ್ಟಿ ಕೇಳಿದರೆ ಯಾರಾದರೂ ಶಾಕ್ ಆಗಲೇಬೇಕು. ಕಳೆದ ವರ್ಷ ‘ಲೇಡಿ ಜಾಕ್ವೆಲಿನ್’ ಹೆಸರಿನ ಯೋಚ್ , ಶೇರುಗಳು ಹಾಗೂ ಕೋಟ್ಯಂತರ ರೂಪಾಯಿ ಚಾರಿಟಿ ಫಂಡ್ ಅನೌನ್ಸ್ ಮಾಡಿದ್ದ ಈತ, ಈಗ ಜಾಕ್ವೆಲಿನ್ ಮೇಲಿರೋ ಪ್ರೀತಿಯನ್ನು ತೋರಿಸಲು ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಟೀಮ್‌ಗಳ ಆಫರ್ ನೀಡಿದ್ದಾನೆ. “ನನ್ನ ಬೊಮ್ಮಾ… ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ” ಎಂದು ಕವನಗಳನ್ನು ಬರೆಯುತ್ತಾ, ಆಕೆಯ ಮೇಲಿರೋ ‘ಲವ್ ಹ್ಯಾಂಗೋವರ್’ ಇನ್ನು ಇಳಿದಿಲ್ಲ ಎಂಬುದನ್ನು ಜಗತ್ತಿಗೆ ಸಾರುತ್ತಿದ್ದಾನೆ.

ಸುಕೇಶ್ ಜೈಲಿನಲ್ಲಿ ಕುಳಿತು ಮಾಡುವ ಈ ‘ಆಪರೇಷನ್ ಲವ್’ ಬಾಲಿವುಡ್ ಬ್ಯೂಟಿಗೆ ಮಾತ್ರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಈಗಾಗಲೇ 200 ಕೋಟಿ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ವಿಚಾರಣೆಗೊಳಪಡಿಸಿದ್ದು, ಚಾರ್ಜ್‌ಶೀಟ್‌ನಲ್ಲೂ ಹೆಸರು ಸೇರಿಸಿದೆ. ಸುಕೇಶ್ ಹೀಗೆ ಬಹಿರಂಗವಾಗಿ ಬರೆಯುವ ಒಂದೊಂದು ಪ್ರೇಮಪತ್ರ ಮತ್ತು ನೀಡುವ ದುಬಾರಿ ಪ್ರಾಮಿಸ್‌ಗಳು ಜಾಕ್ವೆಲಿನ್ ಹಾಗೂ ಕಾನೂನು ತನಿಖಾ ಸಂಸ್ಥೆಗಳ ನಡುವಿನ ಅನುಮಾನದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ.

ಇವರಿಬ್ಬರ ಲಿಂಕ್ ಆರಂಭವಾಗಿದ್ದು ಪ್ರೈವೇಟ್ ಜೆಟ್‌ಗಳು, ರೋಲ್ಸ್ ರಾಯ್ಸ್ ಕಾರುಗಳು, ವಜ್ರದ ಆಭರಣಗಳು ಮತ್ತು ಬೆಲೆಬಾಳುವ ಪರ್ಸಿಯನ್ ಬೆಕ್ಕುಗಳ ಗಿಫ್ಟ್‌ಗಳ ವಿನಿಮಯದ ಮೂಲಕ. ತಾನು ಶೇಖರ್ ರೆಡ್ಡಿ ಎಂಬ ದೊಡ್ಡ ಉದ್ಯಮಿ ಹಾಗೂ ಸೌತ್ ಇಂಡಸ್ಟ್ರಿಯ ಪ್ರೊಡ್ಯೂಸರ್ ಎಂದು ಹೇಳಿಕೊಂಡು ಜಾಕ್ವೆಲಿನ್‌ಗೆ ಸುಕೇಶ್ ಹತ್ತಿರವಾಗಿದ್ದ. ಆದರೆ, ಸುಕೇಶ್ ಮಾಡಿದ್ದೆಲ್ಲವೂ ದೆಹಲಿಯ ಉದ್ಯಮಿಗಳ ಹೆಂಡತಿಯರಿಂದ ಲೂಟಿ ಮಾಡಿದ ಅಕ್ರಮ ಹಣ ಎಂಬುದು ಹೊರಬಿದ್ದಾಗ, ಜಾಕ್ವೆಲಿನ್ ಅಕ್ಷರಶಃ ಸಿಕ್ಕಿಬಿದ್ದರು. ಜೈಲಿನಲ್ಲಿ ಇದ್ದುಕೊಂಡೇ ಪ್ರೀತಿಯ ಪಟಾಕಿ ಸಿಡಿಸುತ್ತಿರೋ ಸುಕೇಶ್ ನಡೆ, ಜಾಕ್ವೆಲಿನ್‌ಗೆ ತನಿಖಾ ಸಂಸ್ಥೆಗಳ ಉಸಿರುಗಟ್ಟಿಸುವ ನಿಗಾವನ್ನು ಮತ್ತಷ್ಟು ಹೆಚ್ಚಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸುಕೇಶ್ ವಿರುದ್ಧ ಡಜನ್‌ಗಟ್ಟಲೆ ಕ್ರಿಮಿನಲ್ ಕೇಸ್‌ಗಳಿದ್ದು, ಜೈಲಿನಿಂದ ಆಚೆಗೆ ಬರುವುದು ತೀರಾ ಕಷ್ಟದ ಮಾತಾಗಿದೆ. ಇತ್ತ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲೇರಿ, “ಸುಕೇಶ್ ತನ್ನ ಹೆಸರನ್ನು ಪ್ರಚಾರಕ್ಕಾಗಿ ಹಾಗೂ ನನ್ನ ಮೇಲೆ ಬೆದರಿಕೆ ತಂತ್ರವಾಗಿ ಬಳಸಿಕೊಳ್ಳುತ್ತಿದ್ದಾನೆ” ಎಂದು ದೂರು ನೀಡಿದ್ದಾರೆ. ಆದರೆ, ಸುಕೇಶ್ ಮಾತ್ರ ಜೈಲಿನಿಂದ ಜಾಕ್ವೆಲಿನ್ ಹೆಸರಿನಲ್ಲಿ ಹೊಸ ಹೊಸ ಆಫರ್‌ಗಳನ್ನು, ಕ್ರೀಡಾಂಗಣದ ಪ್ರಾಮಿಸ್‌ಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿಲ್ಲ. ಈ ಸುಕೇಶ್-ಜಾಕ್ವೆಲಿನ್ ಹೈ-ವೋಲ್ಟೇಜ್ ಲವ್ ಡ್ರಾಮಾ ಮುಂಬರುವ ದಿನಗಳಲ್ಲಿ ಇನ್ನೆಷ್ಟು ಶಾಕಿಂಗ್ ಟ್ವಿಸ್ಟ್‌ಗಳನ್ನು ತರಲಿದೆಯೋ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version