ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತ ನಟ ದರ್ಶನ್ ಜೊತೆಗಿನ ಗೆಳೆತನದ ಕ್ಷಣಗಳನ್ನು ಮೆಲುಕು ಹಾಕಿದ ಅವರು, ದರ್ಶನ್ ಅವರ ಕುದುರೆ ಸವಾರಿ ಕುರಿತಾದ ರೋಚಕ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಿಚ್ಚ ಸುದೀಪ್ ಮಾತನಾಡುತ್ತಾ, “ದರ್ಶನ್ ತನ್ನ ಫಾರ್ಮ್‌ಹೌಸ್‌ನಲ್ಲಿ ಕುದುರೆ ಸವಾರಿ ಮಾಡಲು ಕಲಿಸಲು ಪ್ರಯತ್ನಿಸಿದ್ದ. ಆದರೆ, ನಾನೊಮ್ಮೆ ಕುದುರೆಯಿಂದ ಬಿದ್ದಿದ್ದರಿಂದ, ನನಗೆ ಭಯ ಶುರುವಾಯಿತು. ಮತ್ತೊಮ್ಮೆ ದರ್ಶನ್ ಕುದುರೆ ಏರಿಸಿದಾಗಲೂ ಭಯಗೊಂಡು ಕೆಳಗಿಳಿದುಬಿಟ್ಟೆ,” ಎಂದು ನೆನಪಿಸಿಕೊಂಡರು. “ನಾನು ಪೌರಾಣಿಕ ಸಿನಿಮಾಗಳನ್ನು ಮಾಡುವುದಿಲ್ಲ, ಏಕೆಂದರೆ ಕುದುರೆ ಓಡಿಸುವುದು ಕಷ್ಟ,” ಎಂದು ಹಾಸ್ಯದ ಮಾತಿನಲ್ಲಿ ಹೇಳಿದರು.
ದರ್ಶನ್ ಜೊತೆಗಿನ ದೂರ: ಹಿಂದಿನ ಸತ್ಯ
ಸುದೀಪ್ ತಮ್ಮ ಮತ್ತು ದರ್ಶನ್ ನಡುವಿನ ದೂರದ ಬಗ್ಗೆ ಮಾತನಾಡುವಾಗ ಭಾವುಕರಾದರು. “ನಾವಿಬ್ಬರು ದೂರವಾಗಲು ಕಾರಣ ಏನೆಂದು ನಮಗೆ ಮಾತ್ರ ಗೊತ್ತು. ನಾವೇನೂ ಚಿಕ್ಕವರಲ್ಲ, ಕೆಲವೊಂದು ವಿಷಯಗಳನ್ನು ಮಾತನಾಡಲು ಆಗುವುದಿಲ್ಲ. ಕೆಲವರಿಗೆ ನಾವಿಬ್ಬರು ಒಂದಾಗುವುದು ಇಷ್ಟವಿಲ್ಲ. ಆದರೆ, ಯಾರು ನಮ್ಮನ್ನು ದೂರಮಾಡಿದರೆಂದು ನನಗೆ ಗೊತ್ತಿದೆ,” ಎಂದು ಸುದೀಪ್ ಹೇಳಿದರು. “ಸೂರ್ಯನೊಬ್ಬ, ಚಂದ್ರನೊಬ್ಬ. ಅವರು ಎಲ್ಲಿರಬೇಕೋ ಅಲ್ಲಿರಬೇಕು,” ಎಂದು ತಮ್ಮ ಗೆಳೆತನದ ಬಗ್ಗೆ ಮಾತನಾಡಿದರು.
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, “ಈ ವಿಷಯದಲ್ಲಿ ಕಾನೂನು ಮತ್ತು ಸರ್ಕಾರವೇ ನೋಡಿಕೊಳ್ಳುತ್ತವೆ. ನಾನು ಆ ಬಗ್ಗೆ ಮಾತನಾಡುವುದಿಲ್ಲ,” ಎಂದು ಸ್ಪಷ್ಟವಾಗಿ ತಿಳಿಸಿದರು. ಆದರೂ, ದರ್ಶನ್ ಅವರ ಸಿನಿಮಾ ವೃತ್ತಿಜೀವನಕ್ಕೆ ಶುಭಹಾರೈಕೆಯನ್ನು ತಿಳಿಸಿದ ಅವರು, “ದರ್ಶನ್ ಸಿನಿಮಾಗೆ ಒಳ್ಳೆಯದಾಗಲಿ,” ಎಂದು ಹೃದಯಪೂರ್ವಕವಾಗಿ ಹಾರೈಸಿದರು.
ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಉತ್ತರಿಸಿದ ಸುದೀಪ್, “ನಾನು ರಾಜಕೀಯಕ್ಕೆ ಬರುವ ಬಗ್ಗೆ ಈಗಲೇ ಏನೂ ಹೇಳಲಾರೆ. ಆದರೆ, ಬಂದರೂ ನಾನು ಬದಲಾಗುವುದಿಲ್ಲ ಎಂದು ತಮ್ಮ ಸರಳತೆಯನ್ನು ಹೇಳಿದರು.
ಕಿಚ್ಚನ ಹುಟ್ಟುಹಬ್ಬದ ಸಂಭ್ರಮ
ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿರುವ ಕಿಚ್ಚ ಸುದೀಪ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. “ನನ್ನ ಯಶಸ್ಸಿನ ಹಿಂದೆ ಅಭಿಮಾನಿಗಳ ಪ್ರೀತಿಯೇ ಕಾರಣ. ದರ್ಶನ್ ಜೊತೆಗಿನ ಗೆಳೆತನವನ್ನು ಯಾವಾಗಲೂ ಒಪ್ಪಿಕೊಂಡಿದ್ದೇನೆ, ಆದರೆ ಕೆಲವೊಮ್ಮೆ ಸಂದರ್ಭಗಳು ದೂರವಾಗಿಸುತ್ತವೆ,” ಎಂದು ಭಾವುಕವಾಗಿ ಹೇಳಿದರು.