ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

ಕಮಾನ್ ಕಾಳಿ..ಇದು KD ಅಡ್ಡಾದ ಹೈ- ವೋಲ್ಟೇಜ್ ಸಾಂಗ್

BeFunky collage (69)

ಕೆಡಿ ಅಂದ್ರೆ ಕಾಳಿದಾಸನೂ ಹೌದು..ಕಿಚ್ಚ-ಧ್ರುವ ಕಾಂಬೋ ಕೂಡ ಹೌದು. ಯಾಕಂದ್ರೆ ಕಾಳಿಗೆ ಕಾಲಭೈರವನಾಗಿ ಬಾದ್‌ಷಾ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಇಷ್ಟಕ್ಕೂ ಕಮಾನ್ ಕಾಳಿ ಹೈ ವೋಲ್ಟೇಜ್ ಸಾಂಗ್ ಹೇಗಿದೆ..? ಸುದೀಪ್ ಡೇಟ್ಸ್ ಕೊಟ್ಟಿದ್ದು ಎಷ್ಟು ದಿನ..? ಪ್ರೇಮ್-ಧ್ರುವಗಾಗಿ ಕಿಚ್ಚ ಮಾಡಿದ್ದೇನು..? ಕಾಂಟ್ರವರ್ಸಿಗಳ ಬಗ್ಗೆ ಅಭಿನಯ ಚಕ್ರವರ್ತಿ ಏನಂದ್ರು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಬಾರೋ ಮಾದಯ್ಯನ್ ತೇರ್ ಬಂದಂಗೆ..ನಿನ್ನ ಊರೆಲ್ಲಾ ಕೊಂಡಾಡ್ವಂಗೆ.. ಕಮಾನ್ ಕಾಳಿ.. ಕಮಾನ್ ಕಾಳಿ.. ಬಾರೋ ಸುನಾಮಿ ಎದ್ ಬಂದಂಗೆ ಏರಿಯಾ ಊರೆಲ್ಲಾ ಕೊಚ್ಚೋಗಂಗೆ.. ಕಮಾನ್ ಕಾಳಿ.. ಕಮಾನ್ ಕಾಳಿ.. ಇದು ಇದೇ ಗುರುವಾರ ತೆರೆಗಪ್ಪಳಿಸುತ್ತಿರೋ ಕೆಡಿ ಚಿತ್ರದ ಮತ್ತೊಂದು ಸಾಂಗ್. ಇದು ನಾಯಕನಟ ಕಾಳಿ, ಆತನಿಗಾಗಿ ಕೈ ಜೋಡಿಸೋ ಮಚ್ಚ್ ಲಕ್ಷ್ಮೀ ಹಾಗೂ ಇಡೀ ಏರಿಯಾ ಜನರ ನಡುವೆ ಚಿತ್ರಿಸಲಾಗಿದೆ. ಪೊಲೀಸರು ಕಾಳಿಯನ್ನ ಬಂಧಿಸಿ, ಕರೆದೊಯ್ಯುವಾಗಿನ ಗೀತೆ ಆಗಿದೆ.

ಕಮಾನ್ ಕಾಳಿ..ಇದು KD ಅಡ್ಡಾದ ಹೈ- ವೋಲ್ಟೇಜ್ ಸಾಂಗ್

ಸಾವಿರಾರು ಮಂದಿ ಡ್ಯಾನ್ಸರ್ಸ್..ರೆಟ್ರೋ ಸೆಟ್..ಸಖತ್ ಸ್ಟೆಪ್ಸ್

ಪ್ರೇಮ್ ಅವರೇ ಸಾಹಿತ್ಯ ಬರೆದ ಈ ಹಾಡಿಗೆ ಆಂಟೋನಿ ದಾಸ್ ಗಾಯನವಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ಇನ್ನೂ ಹೀರೋ, ಹೀರೋಯಿನ್ ಧ್ರುವ-ರೀಷ್ಮಾ ಜೊತೆ ಸಾವಿರಾರು ಡ್ಯಾನ್ಸರ್ಸ್‌‌ನ ಇಟ್ಕೊಂಡು ಕೊರಿಯೋಗ್ರಫಿ ಮಾಡಿರೋದು ಅಪ್ಪು ಅವರ ಫೇವರಿಟ್ ಕೊರಿಯೋಗ್ರಾಫರ್, ಟಾಲಿವುಡ್‌ನ ಜಾನಿ ಮಾಸ್ಟರ್. ಆ್ಯಕ್ಷನ್ ಪ್ರಿನ್ಸ್ ಧ್ರುವ ಹಾಗೂ ರೀಷ್ಮಾ ಡ್ಯಾನ್ಸ್ ನೆಕ್ಸ್ಟ್‌ ಲೆವೆಲ್‌‌ಗಿದ್ದು, ಇದು ಕೆಡಿ ಚಿತ್ರಕ್ಕೆ ಟ್ರಂಪ್‌‌ಕಾರ್ಡ್ ಸಾಂಗ್ ಆಗುವ ಸಾಧ್ಯತೆಯಿದೆ.

ಇದನ್ನ ಬಾದ್‌ಷಾ ಕಿಚ್ಚ ಸುದೀಪ್ ಲಾಂಚ್ ಮಾಡಿ, ಟೀಂಗೆ ಶುಭಹಾರೈಸಿದ್ರು. ಇಲ್ಲಿಯ ತನಕ ಎಲ್ಲಾ ರಿಲಿಕಲ್ ಸಾಂಗ್ಸ್‌ನಿಂದಲೇ ಕೆಡಿ ಆಲ್ಬಮ್ ಸದ್ದು ಮಾಡಿತ್ತು. ಆದ್ರೀಗ ಈ ವಿಡಿಯೋ ಸಾಂಗ್ ಸಂಚಲನ ಮೂಡಿಸೋ ರೇಂಜ್‌‌ಗಿದೆ. ಇಲ್ಲಿ ಮಾಸ್ ಇದೆ, ಎಮೋಷನ್ಸ್ ಇದೆ, ಫೀಲಿಂಗ್ಸ್ ಇದೆ. ಅಷ್ಟೇ ಅಲ್ಲ ಭರವಸೆ ಇದೆ, ಭವಿಷ್ಯದ ಕನಸಿದೆ. ಕಾಳಿಯ ರೌದ್ರಾವತಾರದ ಝಲಕ್ ಇದೆ. ಮಚ್ಚು ಹಿಡಿದು ರಾರಾಜಿಸೋ ನಾಯಕನಟನ ದೃಶ್ಯಗಳು ಆತ ಏನು ಬೇಕಾದ್ರೂ ಮಾಡಲಾರ ಅನ್ನೋದ್ರ ಹಿಂಟ್ ನೀಡ್ತಿದೆ.

ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

ನಾನ್‌‌ಸ್ಟಾಪ್ ಕೆಲಸ.. ರೆಸ್ಟ್‌‌ನಲ್ಲಿದ್ದೀನಿ ಅಂದಿದ್ಯಾಕೆ ಬಾದ್‌ಷಾ..?!

 

ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಸಾಕಷ್ಟು ಮಂದಿ ಸ್ಟಾರ್ಸ್ ಬಣ್ಣ ಹಚ್ಚಿದ್ದಾರೆ. ರಮೇಶ್ ಅರವಿಂದ್, ರವಿಚಂದ್ರನ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅಂತಹ ಘಟಾನುಘಟಿ ಸ್ಟಾರ್‌‌ಗಳು ಸಾಥ್ ನೀಡಿದ್ದು, ಈ ಸ್ಟಾರ್ ಕ್ಯಾಂಪೇನ್‌‌ನಲ್ಲಿ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಇರೋದು ಇಂಟರೆಸ್ಟಿಂಗ್. ಹೌದು.. ಕಾಲ ಭೈರವನಾಗಿ ಕಿಚ್ಚ ಕಮಾಲ್ ಮಾಡಲಿದ್ದಾರೆ. ಅದೂ ಕೆಡಿ ಕ್ಲೈಮ್ಯಾಕ್ಸ್‌‌‌ನಲ್ಲಿ ಅನ್ನೋದು ಇಂಟರೆಸ್ಟಿಂಗ್.

ಕಿಚ್ಚನಿಗಾಗಿಯೇ ವಿಶೇಷ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಸುದೀಪ್ ಜೊತೆ ಪ್ರೇಮ್, ಧ್ರುವ ಹಾಗೂ ರೀಷ್ಮಾ ಉಪಸ್ಥಿತರಿದ್ದರು. ಸುದೀಪ್ ಅವರ ಸ್ಟಾರ್ಡಮ್, ಅವ್ರಿಂದ ಕಲಿತ ಗುಣ ಏನು ಅನ್ನೋದನ್ನ ಧ್ರುವ ವಿವರಿಸಿದ್ರೆ, ರೀಷ್ಮಾ ಅಂತೂ ನಾಚಿ ನೀರಾದ್ರು.

ಸರ್ಸೆ ಸರ್ಸೆ ಸಾಂಗ್ 2 ಸಾಲು ಬದಲಾಗಿದೆ.. ಸೆನ್ಸಾರ್ ಬಂದಾಗಿದೆ

ಥಿಯೇಟರ್ ದೇವಸ್ಥಾನ.. ಪೈರಸಿ ಬಗ್ಗೆ ಅಭಿನಯ ಚಕ್ರವರ್ತಿ ಟಾಕ್

ಕೆಡಿ ಚಿತ್ರದಲ್ಲಿ ತಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, 150 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ನನ್ನದು ಮೂರು ದಿನದ ಕೆಲಸ ಮಾತ್ರ. ಧ್ರುವ ನನ್ನ ಸೋದರನಿದ್ದಂತೆ. ಆತ ಒಂದು ದೊಡ್ಡ ಸಿನಿಮಾ ಮಾಡಿದಾಗ, ಅದರ ಭಾಗವಾಗಿ ನಿಲ್ಲಬೇಕೆಂದು ನಾನಿಲ್ಲಿಗೆ ಬಂದೆ. ನಾಯಕಿ ರೀಷ್ಮಾ ಕೂಡ ಉತ್ತಮ ನಟಿ ಎಂದು ನಾಯಕ, ನಾಯಕಿ ಇಬ್ಬರನ್ನೂ ಮೆಚ್ಚಿಕೊಂಡರು. ಅಲ್ಲದೆ ನಾನು ಚಿರಂಜೀವಿ ಸರ್ಜಾ ಅವರೊಟ್ಟಿಗೂ ನಟಿಸಿದ್ದೆ. ಈಗ ಧ್ರುವ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ದು ಖುಷಿ ಇದೆ ಎಂದ್ರು ಕಿಚ್ಚ.

ನಂತರ ಚಿತ್ರೋದ್ಯಮ ಈಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿ, ಸದ್ಯ ಕನ್ನಡ ಚಿತ್ರರಂಗ ಅಳಿವಿನಂಚಿನಲ್ಲಿದೆ. ಮಾಧ್ಯಮಗಳು ಇಂತಹ ಚಿತ್ರಗಳು ಬಂದಾಗ ಸಪೋರ್ಟ್ ಮಾಡಬೇಕು ಅಂತಲೂ ಹೇಳಿದರು ಸುದೀಪ್. ನಿರ್ದೇಶಕ ಪ್ರೇಮ್ ಒಬ್ಬ ಪ್ಯಾಷನೇಟ್ ಫಿಲ್ಮ್ ಮೇಕರ್, ಒಂದೊಳ್ಳೆ ಸಿನಿಮಾ ಕೊಡಲು ಪ್ರಯತ್ನಿಸುತ್ತಾರೆ. ಅವರು ತೆಗೆದಿರುವ ಪ್ರತಿ ಫ್ರೇಮ್ ತುಂಬಾ ಇಷ್ಟವಾಯ್ತು. ಪ್ರೇಮ್ ನನಗೆ  ಒಬ್ಬ ವ್ಯಕ್ತಿಯಾಗಿ ಇಷ್ಟ, ಇಷ್ಟಪಟ್ಟವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದ. ಅವರು ಎಲ್ಲಿರ್ತಾರೋ ಅಲ್ಲಿ ಎನರ್ಜಿ ಇರುತ್ತೆ. ಆಗ ನಮ್ಮ ಎನರ್ಜಿಯೂ ಜಾಸ್ತಿ ಆಗುತ್ತೆ ಎಂದರು.

ಸರ್ಸೆ ಸರ್ಸೆ ಹಾಡಿನ ವಿವಾದದ ಬಗ್ಗೆ ಮಾತನಾಡುತ್ತಾ.. ಪ್ರೇಮ್ ಈ ಹಿಂದೆ ಸಾಕಷ್ಟು ಸದಭಿರುಚಿಯ ಸಾಹಿತ್ಯ ಬರೆದು, ತಂದೆ, ತಾಯಿ, ಮಕ್ಕಳು ಒಂದಾಗುವಂತೆ ಮಾಡಿದ್ದುಂಟು. ಆದರೆ ಒಂದು ತಪ್ಪು ನಡೆದಿದೆ. ಅದನ್ನು ಸರಿಪಡಿಸಿಕೊಂಡಿದ್ದಾರೆ. ನಮ್ಮವರನ್ನು ನಾವುಗಳು ಕಡೆಗಣಿಸದೆ ಕೈಹಿಡಿಯಬೇಕು ಅಂತ ಕಿವಿಮಾತು ಹೇಳಿದ್ರು.

ಪೈರಸಿ ಬಗ್ಗೆಯೂ ಮಾತನಾಡಿ ಧ್ರುವ ಸರ್ಜಾಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಅವರೇ ಪೈರಸಿ ಆಗದಂತೆ ನೋಡಿಕೊಳ್ಳುತ್ತಾರೆ. ಅದನ್ನೂ ಮೀರಿ ನಮಗೆ ಚಿತ್ರಮಂದಿರ ದೇವಾಲಯವಿದ್ದಂತೆ, ದೇವರನ್ನು ನೋಡಲು ದೇವಸ್ಥಾನಕ್ಕೆ ಬರಬೇಕು, ಹಾಗೇ ನಮ್ಮ ಮೇಲೆ ಪ್ರೀತಿಯಿರುವವರು ಥಿಯೇಟರ್‌‌‌ಗೆ ಬಂದೇ ಬರ್ತಾರೆ ಅಂತ ಪ್ರೇಕ್ಷಕರ ಮೇಲೆ ನಂಬಿಕೆ ವ್ಯಕ್ತಪಡಿಸಿದರು ಕಿಚ್ಚ ಸುದೀಪ್.

ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ ಸುದೀಪ್ ಅವರು ನನಗೆ ಬ್ರದರ್ ಥರ. ನನ್ನ ಬಗ್ಗೆ ಯಾವುದೇ ವಿವಾದ ಆಗಲಿ ಸದಾ ಬೆಂಬಲಕ್ಕೆ ನಿಲ್ತಾರೆ. ಈ ಸಿನಿಮಾದಲ್ಲಿ ಒಂದು ಪವರ್‌‌ಫುಲ್ ಪಾತ್ರವಿದೆ. ನೀವು ಮಾಡಬೇಕು ಎಂದು ಅವರನ್ನು ಕೇಳಿದಾಗ ಒಂದೇ ಮಾತಿಗೆ  ಆಯ್ತು ಬರ್ತೀನಿ ಅಂದ್ರು. ಚಿತ್ರದಲ್ಲಿ ಅವರು ಕಾಲ ಭೈರವನಾಗಿ ಅಬ್ಬರಿಸಿದ್ದಾರೆ. ಅವರ ಪಾತ್ರ ತುಂಬಾ ವೈಲೆಂಟ್ ಆಗಿದೆ ಎಂದರು.

ಇದಲ್ಲದೆ ಸುದೀಪ್ ನೆಕ್ಸ್ಟ್ ಮೂವೀಸ್ ಅಪ್ಡೇಟ್ ಹಾಗೂ ಕ್ರಿಕೆಟ್ ಬಗ್ಗೆ ಕೇಳಿದವರಿಗೆ ನಾನು ನಾನ್‌ಸ್ಟಾಪ್ ಕೆಲಸ ಮಾಡಿದ್ದೀನಿ. ಸದ್ಯ ರೆಸ್ಟ್‌‌ನಲ್ಲಿದ್ದೀನಿ. ಸದ್ಯದಲ್ಲೇ ಬಿಲ್ಲ ರಂಗ ಬಾಷ ಸ್ಟಾರ್ಟ್ ಆಗ್ತಿದೆ ಅಂದ್ರು ಕಿಚ್ಚ.

ಒಟ್ಟಾರೆ ಧ್ರುವ ಸರ್ಜಾಗೆ ಕಿಚ್ಚನ ಸ್ಪೆಷಲ್ ಅಪಿಯರೆನ್ಸ್ ಕೆಡಿ ಸಿನಿಮಾಗೆ ಆನೆಬಲ ತಂದುಕೊಟ್ಟಿದೆ. ರಿಲೀಸ್‌ಗೆ ದಿನಗಣನೆ ಶುರುವಾಗಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟರ ಮಟ್ಟಿಗೆ ಕಮಾಯಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

 

Exit mobile version