ಮುಂಬೈ, ನವೆಂಬರ್ 28: ಬಾಲಿವುಡ್‌ನ ಅತ್ಯಂತ ಜನಪ್ರಿಯ ತಾರಾಜೋಡಿ ಕಿಯಾರಾ ಅಡ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರು ತಮ್ಮ ಮಗಳ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಪುಟ್ಟ ಮಗಳಿಗೆ ಅವರು ‘ಸರಾಯಾ ಮಲ್ಹೋತ್ರಾ’ (Saraya Malhotra) ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ಟಾರ್ ದಂಪತಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಜುಲೈ 16, 2025ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಿಯಾರಾ ಅಡ್ವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ದಿನದಿಂದಲೂ ಅಭಿಮಾನಿಗಳು ಮಗಳ ಮುಖ ಯಾವಾಗ ತೋರಿಸುತ್ತೀರಾ ?”, “ಹೆಸರು ಏನು ?” ಎಂದು ಕಾದು ಕುಳಿತಿದ್ದರು. ಆದರೆ ಕಿಯಾರಾ-ಸಿದ್ದಾರ್ಥ್ ದಂಪತಿ ತಮ್ಮ ಮಗಳ ಮುಖವನ್ನು ಇದುವರೆಗೂ ಕ್ಯಾಮೆರಾ ಮುಂದೆ ತೋರಿಸಿಲ್ಲ. ಈಗಲಾದರೂ ಮಗಳ ಹೆಸರನ್ನು ಮಾತ್ರ ಸಾಂಪ್ರದಾಯಿಕವಾಗಿ ಬಹಿರಂಗಪಡಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
‘ಸರಾಯಾ’ ಹೆಸರಿನ ಅರ್ಥ
‘ಸರಾಯಾ’ ಎಂಬ ಹೆಸರು ಪರ್ಷಿಯನ್ ಮೂಲದ್ದಾಗಿದ್ದು, “ರಾಜಕುಮಾರಿ” ಎಂಬ ಅರ್ಥವನ್ನು ಹೊಂದಿದೆ. ಇದೇ ಹೆಸರನ್ನು ಸಿದ್ದಾರ್ಥ್‌ರ ಕುಟುಂಬದಲ್ಲಿ ಸಾಂಪ್ರದಾಯಿಕವಾಗಿ ಇಡುವ ಸಂಪ್ರದಾಯವೂ ಇದೆ ಎನ್ನಲಾಗಿದೆ. ಕಿಯಾರಾ ಅಡ್ವಾನಿ ಅವರ ಕುಟುಂಬದಲ್ಲಿ ಸಹ ಈ ಹೆಸರಿಗೆ ವಿಶೇಷ ಮಹತ್ವವಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
2023ರ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭರ್ಜರಿ ಸಾಂಪ್ರದಾಯಿಕ ಮದುವೆಯಾದ ಕಿಯಾರಾ-ಸಿದ್ದಾರ್ಥ್ ದಂಪತಿ ಬಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಕಪಲ್ ಎಂದೇ ಖ್ಯಾತಿ ಪಡೆದಿದ್ದರು. ‘ಶೇರ್‌ಶಾ’ ಚಿತ್ರದ ಸೆಟ್‌ನಲ್ಲಿ ಪ್ರೀತಿಯಾಗಿ, ಎರಡೇ ವರ್ಷದಲ್ಲಿ ಮದುವೆಯಾಗಿ ಈಗ ಪೋಷಕರಾಗಿದ್ದಾರೆ.
ಮಗಳ ಜನನದ ನಂತರ ಕಿಯಾರಾ ಯಾವುದೇ ಶೋಟಿಂಗ್ ಹೋಗದೆ ಸಧ್ಯ ರಜೆ ತೆಗೆದುಕೊಂಡಿದ್ದಾರೆ. ಈಗ ಮಗಳು ನಾಲ್ಕು ತಿಂಗಳು ತುಂಬಿದ್ದು, ಕಿಯಾರಾ ಮತ್ತೆ ಸ್ಕ್ರೀನ್‌ಗೆ ಮರಳುವ ತಯಾರಿಯಲ್ಲಿದ್ದಾರೆ. ಡಿಸೆಂಬರ್‌ನಿಂದಲೇ ಹೊಸ ಚಿತ್ರಗಳ ಚಿತ್ರೀಕರಣ ಆರಂಭಿಸಲಿದ್ದಾರೆ ಎನ್ನಲಾಗಿದೆ. ಆದರೆ ಮಗಳ ಆರೈಕೆಗೆ ಹೆಚ್ಚಿನ ಆಧ್ಯತೆ ನೀಡಲಿದ್ದಾರೆ.
ಕಿಯಾರಾ-ಸಿದ್ದಾರ್ಥ್ ಪೋಸ್ಟ್ ಮಾಡಿದ ಕ್ಷಣದಿಂದಲೇ “Welcome Princess Saraya”, “ಅತ್ಯಂತ ಸುಂದರ ಹೆಸರು”, “ಲಿಟಿಲ್ ಏಂಜೆಲ್ ಸರಾಯಾ”, ಎಂಬ ಕಾಮೆಂಟ್‌ಗಳಿಂದ ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಕರಣ್ ಜೋಹಾರ್, ವರುಣ್ ಧವನ್, ಅನನ್ಯಾ ಪಾಂಡೆ, ಅಥಿಯಾ ಶೆಟ್ಟಿ ಸೇರಿದಂತೆ ಬಾಲಿವುಡ್ ತಾರೆಯರೆಲ್ಲರೂ ಹಾರ್ಟ್ ಎಮೋಜಿಗಳೊಂದಿಗೆ ಕಿಯಾರಾ ಹಾಗೂ ಸಿದ್ದಾರ್ಥ್ ದಂಪತಿಗೆ ಶುಭ ಹಾರೈಸಿದ್ದಾರೆ.
