ರವಿಚಂದ್ರನ್ ‘ರಣಧೀರ’.. 36 ಸಾವಿರ & 17 ವರ್ಷದ ಖುಷ್ಬೂ..!

ಕ್ರೇಜಿಸ್ಟಾರ್ & ವೀರಸ್ವಾಮಿ ಎಂಥಾ ಹೃದಯವಂತರು ಗೊತ್ತಾ..?!

Film 2025 04 02t102553.532

ಖಷ್ಬೂ.. ಭಾರತೀಯ ಚಿತ್ರರಂಗ ಕಂಡ ಅಪರೂಪದ ಅಭಿನೇತ್ರಿ. 55 ವರ್ಷದ ಖಷ್ಬೂ ಅವರು ಪಂಚಭಾಷಾ ತಾರೆಯಾಗಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಹೀಗೆ ಬಹುತೇಕ ಎಲ್ಲಾ ಭಾಷೆಗಳಲ್ಲಿ ತಮ್ಮ ನಟನಾ ಗಮ್ಮತ್ತು ತೋರಿದ್ದಾರೆ. ಕಳೆದ 40 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿರೋ ಖುಷ್ಬೂ, ಹುಟ್ಟಿ ಬೆಳೆದದ್ದೆಲ್ಲಾ ಮುಂಬೈ. 1980ರ ದಶಕದಲ್ಲೇ ಬಾಲನಟಿಯಾಗಿ ಬಣ್ಣ ಹಚ್ಚಿದ ಖುಷ್ಬೂ ಹತ್ತಾರು ಚಿತ್ರಗಳಲ್ಲಿ ತಾನು ಭವಿಷ್ಯದ ಅಭಿನೇತ್ರಿ ಅನ್ನೋದನ್ನ ನೋಡುಗರಿಗೆ ಮನವರಿಕೆ ಮಾಡ್ತಾರೆ.

ಅದ್ರಂತೆ 1985ರಲ್ಲಿ ಜಾನೂ ಅನ್ನೋ ಹಿಂದಿ ಚಿತ್ರದ ಮುಖೇನ ನಾಯಕನಟಿಯಾಗಿ ಬಾಲಿವುಡ್ ನಿಂದಲೇ ಲಾಂಚ್ ಆಗ್ತಾರೆ. ಮುಂದೆ ನಡೆದದ್ದೆಲ್ಲಾ ಇತಿಹಾಸ. ಈಕೆ 80 ಹಾಗೂ 90ರ ದಶಕದ ಮೋಸ್ಟ್ ಡಿಮ್ಯಾಂಡಿಂಗ್ ಬಹುಭಾಷಾ ನಟೀಮಣಿ. ಬರೀ ಬಣ್ಣದಲೋಕಕ್ಕಷ್ಟೇ ಸೀಮಿತವಾಗದ ಖುಷ್ಬೂ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಲ್ಲೂ ಗುರ್ತಿಸಿಕೊಳ್ತಾರೆ. ಕಳೆದ ಐದು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರೋ ಖುಷ್ಬೂ, ಮೋದಿ ಸಿದ್ದಾಂತಗಳನ್ನು ಚಾಚೂ ತಪ್ಪದೆ ಪಾಲಿಸ್ತಿದ್ದಾರೆ.


ಇನ್ನೂ ಕನ್ನಡ ಚಿತ್ರರಂಗದೊಂದಿಗೆ ಖುಷ್ಬೂಗೆ ವಿಶೇಷವಾದ ನಂಟಿದೆ. 1987ರಲ್ಲಿ ನಮ್ಮ ಚಂದನವನಕ್ಕೂ ಕಾಲಿಟ್ಟ ಖುಷ್ಬೂ, ರಣಧೀರ ಸಿನಿಮಾದಿಂದ ಬ್ಯಾಕ್ ಟು ಬ್ಯಾಕ್ ಕನ್ನಡ ಚಿತ್ರಗಳನ್ನ ಮಾಡ್ತಾರೆ. ಅಂಜದ ಗಂಡು, ಯುಗಪುರುಷ, ಪ್ರೇಮಾಗ್ನಿ, ಹೃದಯ ಗೀತೆ, ರುದ್ರ, ತಾಳಿಗಾಗಿ, ಗಗನ, ಕಲಿಯುಗ ಭೀಮ, ಒಂಟಿ ಸಲಗ.. ಹೀಗೆ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟಿಸೋ ಮೂಲಕ ಕನ್ನಡದ ಮನೆ ಮಗಳಾಗ್ತಾರೆ. ಅದಾದ ಬಳಿಕವೂ ಪುಂಡರ ಗಂಡ, ಶಾಂತಿ ಕ್ರಾಂತಿ, ಅಭಿಜಿತ್, ಪಾಳೆಗಾರ, ಜೀವನದಿ, ಮಹಾ ಎಡಬಿಡಂಗಿ, ಚಾಮುಂಡಿ, ಆಂಟಿ ಪ್ರೀತ್ಸೆ, ಮ್ಯಾಜಿಕ್ ಅಜ್ಜಿ, ಜನನಿ, ನಾನಲ್ಲ ಅನ್ನೋ ಸಾಕಷ್ಟು ಚಿತ್ರಗಳನ್ನ ಮಾಡ್ತಾರೆ.


ಬೆಳ್ಳಿತೆರೆ, ರಾಜಕಾರಣದ ಜೊತೆ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾದಂತಹ ಖುಷ್ಬೂ ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಅಲ್ಲದೆ, ಒಂದಷ್ಟು ಶೋಗಳಿಗೆ ಹೋಸ್ಟ್ ಆಗಿ, ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಖುಷ್ಬೂ ಅಂದ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈಕೆ ನಮ್ಮ ನೆಲದ ಹೆಣ್ಣು ಮಗಳು ಅನ್ನೋ ಪ್ರೀತಿ, ಗೌರವ, ಅಭಿಮಾನವಿದೆ. ಇಂತಹ ಖುಷ್ಬೂ ಒಮ್ಮೆ ಕೇವಲ 36 ಸಾವಿರ ರೂಪಾಯಿಗಳ ಬಿಲ್ ಕಟ್ಟಲಾಗದೆ ಒದ್ದಾಡಿದ ನಿದರ್ಶನವೊಂದಿದೆ ಅಂದ್ರೆ ನೀವು ನಂಬಲೇಬೇಕು. ಹೌದು.. ಇದನ್ನ ನಾವು ಹೇಳ್ತಿರೋದಲ್ಲ. ಸ್ವತಃ ಖುಷ್ಬೂ ಅವರೇ ಇತ್ತೀಚೆಗೆ 80ರ ದಶಕದ ಆ ರೋಚಕ ಘಟನೆಯನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅದು 1987ನೇ ಇಸವಿ. ಆಗ ಖಷ್ಬೂಗೆ ಇನ್ನೂ 17 ವರ್ಷ. ಅಮ್ಮನೊಂದಿಗೆ ಚೆನ್ನೈಗೆ ಬಂದು ಚಿತ್ರರಂಗದಲ್ಲಿ ಆಕೆ ಬದುಕು ಕಟ್ಟಿಕೊಳ್ಳೋ ಮನಸ್ಸು ಮಾಡಿದ್ದ ಕಾಲಘಟ್ಟ. ಕನ್ನಡ ಚಿತ್ರರಂಗಕ್ಕೆ ಆಕೆ ಬಲಗಾಲಿಟ್ಟಿದ್ದ ಪರ್ವವದು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಂದೆ, ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ ನಿರ್ಮಾಣದ ರಣಧೀರ ಚಿತ್ರದ ಶೂಟಿಂಗ್ ಸಮಯದಲ್ಲಿ ಖಷ್ಬೂ ಬಾಳಲ್ಲಿ ಒಂದು ಮರೆಯಲಾಗದ ಘಟನೆ ನಡೆಯುತ್ತದೆ. ಅದನ್ನ ಸ್ವತಃ ಖುಷ್ಬೂ ಅವರೇ ಮುಕ್ತವಾಗಿ 38 ವರ್ಷಗಳ ಬಳಿಕ ಹಂಚಿಕೊಂಡಿದ್ದಾರೆ.


ಚೆನ್ನೈನ AVM ಸ್ಟುಡಿಯೋದಲ್ಲಿ ರಣಧೀರ ಚಿತ್ರದ ಶೂಟಿಂಗ್ ನಡೆಯುತ್ತಿರುತ್ತದೆ. ಒಂದು ದಿನ ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಟ್ಟ ಖುಷ್ಬೂ ಮುಖದಲ್ಲಿ ನಗುವಿಲ್ಲ. ಆಕೆಯ ಮನಸ್ಸು ಭಾರವಾಗಿದೆ. ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಕಷ್ಟ. ಮೌನಕ್ಕೆ ಜಾರಿದ ಖುಷ್ಬೂರನ್ನ ಆ ರೀತಿ ಡಲ್ ಆಗಿ ಕಂಡಂತಹ ರಣಧೀರ ಚಿತ್ರದ ನಾಯಕ ನಟ ಕಮ್ ನಿರ್ದೇಶಕ ವಿ ರವಿಚಂದ್ರನ್ ಹಾಗೂ ನಿರ್ಮಾಪಕ ವೀರಸ್ವಾಮಿ ಅವರು, ಆಕೆಯ ಸ್ಟ್ಯಾಫ್ ನಿಂದ ಏನಾಗಿದೆ ಅನ್ನೋದನ್ನ ಅರಿಯುತ್ತಾರೆ. ಇಷ್ಟಕ್ಕೂ ಅಂಥದ್ದೇನಾಗಿತ್ತು ಅಂದ್ರೆ, ಅದೇ ಎವಿಎಂ ಸ್ಟುಡಿಯೋ ಪಕ್ಕದಲ್ಲಿದ್ದ ವಿಜಯ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಖುಷ್ಬೂ ತಾಯಿ ದಾಖಲಾಗಿರ್ತಾರೆ. ಆಕೆಗೆ ಚಿಕಿತ್ಸೆ ನೀಡಿ, ತಕ್ಕಮಟ್ಟಿಗೆ ಗುಣವೂ ಆಗಿರುತ್ತದೆ. ಆದ್ರೆ 36 ಸಾವಿರ ರೂಪಾಯಿ ಬಿಲ್ ಪಾವತಿಸಿ, ಡಿಸ್ಚಾರ್ಜ್ ಮಾಡಿಕೊಂಡು ಹೋಗಲು ಹೇಳಿರುತ್ತಾರೆ. ಖುಷ್ಬೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ ಅವ್ರ ತಾಯಿ ಆಸ್ಪತ್ರೆಯಲ್ಲೇ ಇರ್ತಾರೆ.

ಈ ವಿಷಯ ತಿಳಿದ ರವಿಚಂದ್ರನ್ ಹಾಗೂ ಅವ್ರ ತಂದೆ ವೀರಸ್ವಾಮಿ ಅವರು, ಖುಷ್ಬೂಗೂ ತಿಳಿಯದಂತೆ ಆಸ್ಪತ್ರೆಗೆ ತೆರಳಿ, ಖುಷ್ಬೂ ತಾಯಿಯನ್ನ ಭೇಟಿ ಮಾಡಿ, 36 ಸಾವಿರ ರೂಪಾಯಿ ಮೊತ್ತದ ಬಿಲ್ ಪಾವತಿಸಿ, ಆಕೆಯನ್ನ ಮನೆಗೂ ಬಿಟ್ಟು ಬರ್ತಾರೆ. ನಂತ್ರ ಸೆಟ್ ಗೆ ಮರಳಿ, ಇಂತಹ ವಿಷಯವನ್ನು ನಮ್ಮ ಬಳಿ ಯಾಕೆ ಹೇಳಿಲ್ಲ ಅಂತ ಖುಷ್ಬೂ ಬಳಿ ಜಗಳ ಕೂಡ ಮಾಡ್ತಾರೆ. 36 ಸಾವಿರ ರೂಪಾಯಿ ಈ ದಿನಕ್ಕೆ ಸಣ್ಣ ಮೊತ್ತದ ಹಣವೇ ಇರಬಹುದು. ಆದ್ರೆ 1987ರಲ್ಲಿ ಅದು ಕೋಟಿ ಸಮಾನ. ಅಂತಹ ಕಡು ಕಷ್ಟಕಾಲದಲ್ಲಿ ಖುಷ್ಬೂ ಫ್ಯಾಮಿಲಿ ಜೊತೆ ನಿಂತ ಟ್ರೆಂಡ್ ಸೆಟ್ಟರ್, ದಿ ಶೋ ಮ್ಯಾನ್, ಕನಸುಗಾರ ಡಾ. ವಿ ರವಿಚಂದ್ರನ್ ಹಾಗೂ ಅವರ ತಂದೆಯನ್ನ ಈಗ ನೆನೆದಿರೋ ಖುಷ್ಬೂ ನಿಜಕ್ಕೂ ದೊಡ್ಡ ಮನಸ್ಸಿನ ದೊಡ್ಡ ತಾರೆ.


ಹತ್ತಿದ ಏಣಿಯನ್ನೇ ಒದೆಯೋ ಈ ಕಾಲಘಟ್ಟದಲ್ಲಿ ಖುಷ್ಬೂ ಅವರು ಈ ರೀತಿ ಮಾಡಿದ ಸಹಾಯವನ್ನು ನೆನೆದು ಗ್ರೇಟ್ ಅನಿಸಿಕೊಂಡಿದ್ದಾರೆ. ನಾವು ಯಾವಾಗ್ಲೂ ಎಲ್ಲಿಂದ ಬಂದ್ವಿ..? ಹೇಗೆ ಬಂದ್ವಿ ಅನ್ನೋದನ್ನ ಮರೆಯಬಾರದು ಅನ್ನೋದು ಇದರ ನೀತಿಪಾಠ. ಅಷ್ಟೇ ಅಲ್ಲ, ಸಹಾಯ ಮಾಡಿದವರಿಗೆ ಸಣ್ಣದೊಂದು ಕೃತಜ್ಞತಾಭಾವ ಇರಬೇಕು. ಇನ್ನು ರವಿಚಂದ್ರನ್ ಆ ಕಾಲದಲ್ಲೇ ಪ್ಯಾನ್ ಇಂಡಿಯಾ ಮಾಡಿದವರು. ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು, ದೆಸೆ ತೋರಿಸದವರು. ನೂತನ, ವಿನೂತನ ಪ್ರಯೋಗಗಳನ್ನ ಮಾಡಿದವರು. ಅವ್ರ ಜೀವಿತಾವಧಿಯಲ್ಲಿ ಸಿನಿಮಾನೇ ಉಸಿರಾಡಿದವರು. ಖುಷ್ಬೂ ಅವರದ್ದು ಜಸ್ಟ್ ಒಂದು ಇನ್ಸಿಡೆಂಟ್. ಈ ರೀತಿ ಸಾವಿರಾರು ಮಂದಿಗೆ ಸಹಾಯ ಮಾಡಿದೆ ಈಶ್ವರಿ ಪ್ರೊಡಕ್ಷನ್ಸ್, ವೀರಸ್ವಾಮಿ ಹಾಗೂ ರವಿಚಂದ್ರನ್. ಇದಲ್ಲವೇ ಮಾನವೀಯತೆ..? ಇದಲ್ಲವೇ ರಿಯಲ್ ಹೀರೋಯಿಸಂ..? ಇದಲ್ಲವೇ ಸಾರ್ಥಕ ಜೀವನ..?

Exit mobile version