ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿಸಿ ಸಿನಿಮಾದ ಕ್ಯಾತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟ್ರೈಲರ್ ಲಾಂಚ್ ದಿನ ನಡೆದ ಗಲಾಟೆ ಪ್ರಕರಣ ಸದ್ಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ ನಿರ್ಮಾಪಕ ಗುರುದತ್ ಗಾಣಿಗ. ಇದೀಗ ಕರಾವಳಿ ಕ್ಯಾಪ್ಟನ್ ಮತ್ತೊಂದು ಬಾಂಬ್ ಸಿಡಿಸಿದ್ದು, ಅದ್ರ ಪ್ರಕಾರ ಮಾತು ತಪ್ಪಿದ್ರಾ ಡೈನಾಮಿಕ್ ಪ್ರಿನ್ಸ್ ಅನ್ನೋ ಅನುಮಾನ ಶುರುವಾಗಿದೆ.
ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌ಪ್ಯಾಕ್ ಸೀಕ್ರೆಟ್ ರಿವೀಲ್
ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡದ ಪ್ರಜ್ಜು.. ಕೆರಳಿದ ಡೈರೆಕ್ಟರ್
ಗಲಾಟೆ ಮರುದಿನವೇ 25 ಲಕ್ಷ ರೂ ಬಾಕಿ ಸಂಭಾವನೆ ಪಾವತಿ
ಟ್ರೈಲರ್‌ನಲ್ಲಷ್ಟೇ ಅಲ್ಲ.. ಕರಾವಳಿ ಚಿತ್ರದಲ್ಲೂ ಇರಲ್ಲ ಪ್ರಜ್ಜು ಧ್ವನಿ
ಕರಾವಳಿ.. ಕರಾವಳಿ.. ಕರಾವಳಿ.. ಕಾಂತಾರದಿಂದ ಹಿಡಿದು ಅದ್ಯಾಕೋ ಕರಾವಳಿ ಹಾಗೂ ಅದ್ರ ನೆಲದ ಕಥೆಗಳು ಬಂದಾಗಲೆಲ್ಲಾ ವಿವಾದಗಳು ಭುಗಿಲೇಳುತ್ತಲೇ ಇವೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಗೂ ಕಾಂತಾರ ಸಿನಿಮಾಗಳ ಸಮಯದಲ್ಲೇ ಇಂಥದ್ದೇ ಕೆಲ ವಿವಾದಗಳು ಸುತ್ತಿಕೊಂಡಿದ್ದವು. ಇದೀಗ ಕರಾವಳಿ ಚಿತ್ರದ್ದೂ ಅದೇ ಕಥೆ. ಇನ್‌ಫ್ಯಾಕ್ಟ್ ಕಥೆ, ಪಾತ್ರಗಳು, ಮೇಕಿಂಗ್‌ನಿಂದ ಸಿನಿಮಾ ಕೂಡ ಸದ್ದು ಮಾಡ್ತಿದೆ. ಆದ್ರೆ ಕಾಂಟ್ರವರ್ಸಿಗಳಿಂದ ಕರಾವಳಿಯ ಸದ್ದು ಕೊಂಚ ಜೋರೇ ಇದೆ.
ಇದೇ ಜುಲೈ 24ಕ್ಕೆ ತೆರೆಗೆ ಬರ್ತಿರೋ ಕರಾವಳಿ ಸಿನಿಮಾ ಇದೀಗ ಹೀರೋ ಹಾಗೂ ಫಿಲ್ಮ್ ಮೇಕರ್ ನಡುವಿನ ಜಗಳಗಳಿಂದಾಗಿ ಟಾಕ್ ಆಪ್ ದಿ ಟೌನ್ ಆಗಿದೆ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಲೀಡ್‌ನಲ್ಲಿ ನಟಿಸ್ತಿರೋ ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಹೀರೋ ಪ್ರಜ್ಜು ವಾಯ್ಸ್ ಇಲ್ಲದೆ ರಿಲೀಸ್ ಆಗಿತ್ತು. ಅದೇ ಕಾರಣಕ್ಕೆ ಪ್ರಜ್ವಲ್ ಫ್ಯಾನ್ಸ್ ಇವೆಂಟ್‌ನಲ್ಲಿ ಬಂದು ಗಲಾಟೆ ಕೂಡ ಮಾಡಿದ್ರು. ಆ ಕುರಿತು ಚಿತ್ರತಂಡ ಗಲಾಟೆ ಮಾಡಿದವ್ರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದೆ.
ಅಷ್ಟಕ್ಕೇ ನಿಲ್ಲದ ಈ ಕರಾವಳಿ ಕ್ಯಾತೆ ಮತ್ತೊಂದು ಹಂತಕ್ಕೆ ಹೋಗಿದೆ. ನಟ ಪ್ರಜ್ವಲ್ ವಾಯ್ಸ್ ಬರೀ ಟ್ರೈಲರ್‌ನಲ್ಲಷ್ಟೇ ಅಲ್ಲ, ಸಿನಿಮಾದಲ್ಲಿ ಕೂಡ ಇರಲ್ಲವಂತೆ. ಡಬ್ಬಿಂಗ್ ಆರ್ಟಿಸ್ಟ್ ಬಳಿ ವಾಯ್ಸ್ ಡಬ್ ಮಾಡಿಸಿರೋ ಟೀಂ, ಚಿತ್ರವನ್ನ ರಿಲೀಸ್ ಮಾಡಲು ಮುಂದಾಗಿದೆ. ಅಲ್ಲದೆ, ಗಲಾಟೆ ಆದ ಮರುದಿನವೇ ಬಾಕಿ ಉಳಿದ 25 ಲಕ್ಷ ರೂಪಾಯಿ ಸಂಭಾವನೆ ಹಣವನ್ನ ಪ್ರಜ್ವಲ್ ದೇವರಾಜ್‌ಗೆ ಪಾವತಿಸಲಾಗಿದೆಯಂತೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರೋ ಕರಾವಳಿ ಕ್ಯಾಪ್ಟನ್ ಗುರುದತ್ ಗಾಣಿಗ, ಮತ್ತೊಂದು ರಹಸ್ಯ ಕೂಡ ಬಯಲು ಮಾಡಿದ್ದಾರೆ.
ಕರಾವಳಿ ಚಿತ್ರದ ಪಾತ್ರಕ್ಕಾಗಿ ನಟ ಪ್ರಜ್ವಲ್ ಸಿಕ್ಸ್ ಪ್ಯಾಕ್ ಮಾಡೋ ಮೂಲಕ ದೈಹಿಕ ರೂಪಾಂತರಕ್ಕೆ ಒಪ್ಪಿಕೊಂಡಿದ್ದರಂತೆ. ಅದು ಕಥೆಗೆ ಬಹುಮುಖ್ಯವಾದ ಅಂಶವೂ ಆಗಿತ್ತಂತೆ. ಅದೇ ಕಾರಣದಿಂದ ಅಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡಲು ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿತ್ತು. ಆದ್ರೆ ಆ ಸಿಕ್ಸ್‌ಪ್ಯಾಕ್‌ನ ಟ್ರಾನ್ಸ್‌ಫಾರ್ಮೇಷನ್ ಆಗದೇ ಇರೋ ಕಾರಣ, ಬಾಕಿ ಉಳಿದ ಸಂಭಾವನೆ ಮೊತ್ತ 25 ಲಕ್ಷವನ್ನ ಟ್ರ್ಯಾನ್ಸಾಕ್ಷನ್ ಮಾಡದೆ ಉಳಿಸಿಕೊಳ್ಳಲಾಗಿತ್ತು ಅಂತ ಸ್ಪಷ್ಟಪಡಿಸಿದ್ದಾರೆ ಗುರುದತ್ ಗಾಣಿಗ.
ಜಿಮ್‌ನಲ್ಲಿ ಸದಾ ಸಿಕ್ಕಾಪಟ್ಟೆ ಬೆವರಿಳಿಸುವ ಹಾಗೂ ದೇಹವನ್ನು ಕಟ್ಟು ಮಸ್ತಾಗಿ ಇಟ್ಟುಕೊಳ್ಳುವಂತಹ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅದ್ಯಾಕೇ ಸಿಕ್ಸ್‌ಪ್ಯಾಕ್ ಮಾಡಲಿಲ್ಲ ಅನ್ನೋದೇ ಅಚ್ಚರಿ. ಅಲ್ಲದೆ, ಅದು ಅವರುಗಳ ಅಗ್ರಿಮೆಂಟ್‌ನಲ್ಲಿ ನಮೂದಾಗಿದೆಯಾ ಅಥ್ವಾ ಇಲ್ಲವಾ..? ಇದಕ್ಕೆ ಪ್ರಜ್ವಲ್ ದೇವರಾಜ್ ಏನು ಹೇಳ್ತಾರೆ ಅನ್ನೋ ಕುತೂಹಲ ಕೂಡ ಇದೆ.
ಬಾಕಿ ಹಣ ಪಾವತಿಸದೆ ಡಬ್ಬಿಂಗ್ ಮಾಡಲ್ಲ ಎಂದು ಪಟ್ಟು ಹಿಡಿದ ಪ್ರಜ್ವಲ್‌ಗಾಗಿ ಎರಡು ತಿಂಗಳ ಕಾಲ ಕಾದಂತಹ ನಿರ್ಮಾಣಪಕರು ಕೆವಿಎನ್ ಸುಪ್ರೀತ್, ಜಾಕ್ ಮಂಜು ಹಾಗೂ ಲೋಹಿತ್ ಅನ್ನೋ ನಿರ್ಮಾಪಕರುಗಳ ಮಧ್ಯಸ್ಥಿಕೆಯಿಂದ ಸಮಸ್ಯೆ ನಿವಾರಿಸಲು ಮುಂದಾಗಿದ್ದಾರೆ. ಅದೂ ಕೂಡ ಸಾಧ್ಯವಾಗಿಲ್ಲ. ಹಾಗಾಗಿ ಬೇರೋಬ್ಬರ ಮೂಲಕ ವಾಯ್ಸ್ ಡಬ್ ಮಾಡಿಸಿರೋ ಟೀಂ, ಅದನ್ನ ಪ್ರಜ್ವಲ್ ದೇವರಾಜ್ ಮ್ಯಾನೇಜರ್ ಮುಖೇನ ಅವರಿಗೂ ಮಾಹಿತಿ ನೀಡಿರೋದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
..ಇಷ್ಟೆಲ್ಲಾ ಆದ ಬಳಿಕವೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿ ಚಿತ್ರದ ಬಗ್ಗೆ, ನಿರ್ದೇಶಕ, ನಿರ್ಮಾಪಕರುಗಳ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಾ ಅಪ ಪ್ರಚಾರ ಮಾಡ್ತಿರೋರ ವಿರುದ್ಧ ಕಾನೂನಿನಾತ್ಮಕವಾಗಿ ತನಿಖೆ ನಡೆಸುವಂತೆ ಠಾಣೆಗೆ ದೂರು ನೀಡಲಾಗಿದೆ ಅಂತಲೂ ಹೇಳಿದ್ದಾರೆ. ಅದೇನೇ ಇರಲಿ, ಇವರುಗಳ ಜಗಳ, ಜಂಜಾಟಗಳಿಗೆ ಒಂದೊಳ್ಳೆ ಸಿನಿಮಾ ಬಲಿ ಆಗಬಾರದು. ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳು ಜನರ ಮನೆ, ಮನಸ್ಸುಗಳನ್ನ ತಲುಪಬೇಕು. ಕರಾವಳಿ ಕಾಂತಾರದಷ್ಟೇ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿ, ವಿಜಯೋತ್ಸವ ಆಚರಿಸಲಿ, ಚಿತ್ರತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಅನ್ನೋದು ನಮ್ಮ ಆಶಯ.
