ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಾಯಿಯಾದ ನಂತರದ ತಮ್ಮ ಮೊದಲ ಹೋಳಿ ಹಬ್ಬವನ್ನು ಪತಿ ವಿಕ್ಕಿ ಕೌಶಲ್ ಮತ್ತು ಕುಟುಂಬದವರೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದಾರೆ. 2025ರ ನವೆಂಬರ್‌ನಲ್ಲಿ ಮಗ ವಿಹಾನ್ ಕೌಶಲ್ ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಕತ್ರಿನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಹಬ್ಬದ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಾಯ್ತನದ ಹೊಳಪಿನಲ್ಲಿ ಕತ್ರಿನಾ
ತಾಯಿಯಾದ ಬಳಿಕದ ಮೊದಲ ಹೋಳಿ ಕತ್ರಿನಾ ಪಾಲಿಗೆ ವಿಶೇಷವಾಗಿತ್ತು. ಬಿಳಿ ಬಣ್ಣದ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಕತ್ರಿನಾ, ತಾಯ್ತನದ ಹೊಳಪಿನೊಂದಿಗೆ ಕಂಗೊಳಿಸುತ್ತಿದ್ದಾರೆ. ಫೋಟೋದಲ್ಲಿ ಪತಿ ವಿಕ್ಕಿ ಕೌಶಲ್ ಜೊತೆಗೆ ಖುಷಿಯಿಂದ ಪೋಸ್ ನೀಡಿದ್ದಾರೆ. ಇವರ ಜೊತೆಗೆ ಸಹೋದರರಾದ ಸನ್ನಿ ಕೌಶಲ್ ಮತ್ತು ಇಸಾಬೆಲ್ ಕೈಫ್ ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಕತ್ರಿನಾ ಫೋಟೋ ಹಂಚಿಕೊಂಡು ‘ದಿ ಹ್ಯಾಪಿಯೆಸ್ಟ್ ಹ್ಯಾಪಿ ಹೋಳಿ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಪ್ರೀತಿಯ ಸುರಿಮಳೆಯಾಗುತ್ತಿದ್ದು, ತಾರೆಯರೂ ಸೇರಿದಂತೆ ಹಲವರು ಕಮೆಂಟ್‌ಗಳ ಮೂಲಕ ಶುಭ ಕೋರಿದ್ದಾರೆ.
ಮಗ ವಿಹಾನ್‌ನ ಸ್ವಾಗತ
ಜನವರಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಜಂಟಿಯಾಗಿ ಮಗನ ಹೆಸರನ್ನು ಬಹಿರಂಗಪಡಿಸಿದ್ದರು. ಮಗುವಿನ ಕೈಗಳನ್ನು ಒಂದರ ಮೇಲೊಂದು ಇಟ್ಟ ಫೋಟೋ ಹಂಚಿಕೊಂಡು, “ನಮ್ಮ ಬದುಕಿನ ಬೆಳಕಿನ ಕಿರಣ. ವಿಹಾನ್ ಕೌಶಲ್. ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ, ಜೀವನ ಸುಂದರವಾಗಿದೆ. ನಮ್ಮ ಜಗತ್ತು ಒಂದೇ ಕ್ಷಣದಲ್ಲಿ ಬದಲಾಗಿದೆ. ಕೃತಜ್ಞತೆಗೆ ಪದಗಳೇ ಇಲ್ಲ” ಎಂದು ಬರೆದುಕೊಂಡಿದ್ದರು.
ಕಳೆದ ವರ್ಷ ನವೆಂಬರ್ 7 ರಂದು ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿತ್ತು. ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ, ನಾವು ನಮ್ಮ ಗಂಡು ಮಗುವನ್ನು ಸ್ವಾಗತಿಸುತ್ತೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವ ಕಸರತ್ತು
ಮಗನ ಜನನದ ಬಳಿಕ ಕತ್ರಿನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಬಹಳ ವಿರಳ. ಫೆಬ್ರವರಿಯಲ್ಲಿ ಮುಂಬೈನಲ್ಲಿ ಫಿಟ್‌ನೆಸ್ ತರಬೇತುಗಾರ್ತಿ ಯಾಸ್ಮಿನ್ ಕರಾಚಿವಾಲಾ ಅವರೊಂದಿಗೆ ಕಟ್ಟಡವೊಂದರಿಂದ ಹೊರಬರುತ್ತಿರುವಾಗ ಪಾಪರಾಜಿಗಳನ್ನು ಕಂಡು ಅವಸರದಲ್ಲಿ ಕಾರು ಹತ್ತಿ ತಪ್ಪಿಸಿಕೊಂಡಿದ್ದರು. ಆದರೆ ಹೋಳಿ ಹಬ್ಬದ ಸಂಭ್ರಮದಲ್ಲಿ ಮಾತ್ರ ಕುಟುಂಬದೊಂದಿಗೆ ಖುಷಿಯಿಂದ ಕಾಣಿಸಿಕೊಂಡಿದ್ದಾರೆ.
ವಿಕ್ಕಿ-ಕತ್ರಿನಾ ಪ್ರೇಮಕಥೆ
ಡಿಸೆಂಬರ್ 9, 2021 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ವಿಕ್ಕಿ ಮತ್ತು ಕತ್ರಿನಾ ವಿವಾಹವಾಗಿದ್ದರು. ಅತಿ ಗೌಪ್ಯವಾಗಿ ನಡೆದ ಈ ಮದುವೆಯಲ್ಲಿ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದರು.





