ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯ ನಡುವೆ ರೀಮೇಕ್ ಸಂಸ್ಕೃತಿ ತುಸು ತಣ್ಣಗಾಗಿತ್ತು. ಆದರೆ, ಇತ್ತೀಚೆಗೆ ದಕ್ಷಿಣದ ಹಳೆಯ ಸತ್ವಯುತ ಕಥೆಗಳನ್ನು ಬಾಲಿವುಡ್‌ಗೆ ಒಯ್ಯುವ ಪ್ರಯತ್ನಗಳು ಮತ್ತೆ ಚುರುಕುಗೊಂಡಿವೆ. ಈ ಸಾಲಿನಲ್ಲಿ ಈಗ ತೆಲುಗಿನ ಆ್ಯಕ್ಷನ್ ಡ್ರಾಮಾ ‘ಡಿಯರ್ ಕಾಮ್ರೆಡ್’ ಹಿಂದಿಗೆ ಮರುನಿರ್ಮಾಣವಾಗುತ್ತಿದೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಈ ಸಿನಿಮಾದ ರೀಮೇಕ್ ಮಾಡಲು ಮುಂಂದಾಗಿದ್ದು, ಹೊಸ ತಾರಾಗಣದೊಂದಿಗೆ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.
ವಿಜಯ್-ರಶ್ಮಿಕಾ ಸ್ಥಾನಕ್ಕೆ ಸಿದ್ಧಾಂತ್-ಪ್ರತಿಭಾ
2019ರಲ್ಲಿ ಬಿಡುಗಡೆಯಾಗಿದ್ದ ‘ಡಿಯರ್ ಕಾಮ್ರೆಡ್’ನಲ್ಲಿ ವಿಜಯ್ ದೇವರಕೊಂಡ ಅವರ ರಗಡ್ ಲುಕ್ ಮತ್ತು ರಶ್ಮಿಕಾ ಮಂದಣ್ಣ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಾಲಿವುಡ್ ಆವೃತ್ತಿಯಲ್ಲಿ ವಿಜಯ್ ದೇವರಕೊಂಡ ನಿರ್ವಹಿಸಿದ್ದ ಬಾಬಿ ಪಾತ್ರವನ್ನು ಯುವ ನಟ ಸಿದ್ಧಾಂತ್ ಚತುರ್ವೇಧಿ ಪೋಷಿಸುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ನಿರ್ವಹಿಸಿದ್ದ ಕ್ರಿಕೆಟ್ ಆಟಗಾರ್ತಿಯ ಪಾತ್ರಕ್ಕೆ ‘ಲಾಪತಾ ಲೇಡೀಸ್’ ಖ್ಯಾತಿಯ ಪ್ರತಿಭಾ ರಂತಾ ಆಯ್ಕೆಯಾಗಿದ್ದಾರೆ. ಲಾಪತಾ ಲೇಡೀಸ್‌ನಲ್ಲಿ ‘ಪುಷ್ಪಾ ರಾಣಿ’ಯಾಗಿ ಜನಮನ ಗೆದ್ದಿದ್ದ ಪ್ರತಿಭಾಗೆ ಇದು ಕೆರಿಯರ್‌ನ ಪ್ರಮುಖ ಸಿನಿಮಾವಾಗಲಿದೆ.
‘ಡಿಯರ್ ಕಾಮ್ರೆಡ್’ ಕೇವಲ ಪ್ರೇಮಕಥೆಯಲ್ಲ. ಇದರಲ್ಲಿ ಒಬ್ಬ ಕ್ರಿಕೆಟ್ ಆಟಗಾರ್ತಿ ಕ್ರೀಡಾ ಕ್ಷೇತ್ರದಲ್ಲಿ ಎದುರಿಸುವ ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟದ ಕಥೆಯಿದೆ. ತನ್ನ ಪ್ರೇಯಸಿಯ ಕನಸಿಗೆ ಅಡ್ಡಬರುವ ಇತರೆ ಪ್ರಭಾವಿ ವ್ಯಕ್ತಿಗಳ ವಿರುದ್ಧ ನಾಯಕ ಹೇಗೆ ನಿಲ್ಲುತ್ತಾನೆ ಮತ್ತು ಆಕೆಗೆ ಹೇಗೆ ಧೈರ್ಯ ತುಂಬುತ್ತಾನೆ ಎಂಬುದು ಈ ಚಿತ್ರದ ಕಥೆಯಾಗಿದೆ. ಹಿಂದಿ ಪ್ರೇಕ್ಷಕರಿಗೆ ಒಗ್ಗುವಂತೆ ಕಥೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ರೀಮೇಕ್ ಮೇಲೆ ಕರಣ್ ಜೋಹರ್ ಒಲವು
ಕರಣ್ ಜೋಹರ್ ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಸಿದ್ಧಾಂತ್ ಚತುರ್ವೇಧಿ ನಾಯಕನಾಗಿ ನಟಿಸಿದ್ದ ‘ದಡಕ್ 2’ ಬಿಡುಗಡೆಯಾಗಿತ್ತು. ಇದು ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾದ ರೀಮೇಕ್ ಆಗಿತ್ತು. ಈಗ ಸಿದ್ಧಾಂತ್ ಮತ್ತು ಕರಣ್ ಜೋಹರ್ ಜೋಡಿ ಮತ್ತೊಂದು ದಕ್ಷಿಣದ ಕಥೆಯನ್ನು ಹಿಂದಿಗೆ ತರುತ್ತಿರುವುದು ಕುತೂಹಲ ಮೂಡಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ತೆಲುಗು ಆವೃತ್ತಿಯು ಸುಮಾರು 33 ಕೋಟಿ ಗಳಿಸಿ ಸಾಧಾರಣ ಯಶಸ್ಸು ಕಂಡಿದ್ದರೂ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾಗೆ ಇಂದಿಗೂ ಭಾರಿ ಬೇಡಿಕೆಯಿದೆ. ಅದೇ ಕ್ರೇಜ್ ಅನ್ನು ಬಾಲಿವುಡ್‌ನಲ್ಲಿ ಬಳಸಿಕೊಳ್ಳಲು ಕರಣ್ ಪ್ಲಾನ್ ಮಾಡಿದ್ದಾರೆ.





