ಬೆಳ್ಳಿಪರದೆ ಮೇಲೆ ಕಾಂತಾರ ಬೆಳಕಿನ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಮೋಷನ್ಸ್‌ನಲ್ಲಿ ಬ್ಯುಸಿ ಆಗಿದೆ. ಕೊಚ್ಚಿ, ಬೆಂಗಳೂರು, ಹೈದ್ರಾಬಾದ್ ಮುಗಿಸಿ ಮುಂಬೈನಲ್ಲೂ ಅಬ್ಬರದ ಪ್ರಚಾರ ಮಾಡಿದೆ ಟೀಂ. ಆದ್ರೀಗ ಆಂಧ್ರದಲ್ಲಿ ಬಾಯ್ಕಾಟ್ ಅಭಿಯಾನ ಶುರುವಾಗಿದ್ದು, ಆ ರೀತಿ ಮಾಡೋದು ಸರಿಯಲ್ಲ ಎಂದು ಸ್ವತಃ ಡಿಸಿಎಂ ಪವನ್ ಕಲ್ಯಾಣ್ ಕಾಂತಾರ ಬೆಂಬಲಕ್ಕೆ ನಿಂತಿದ್ದಾರೆ. ಇವೆಲ್ಲದರ ಕುರಿತ ಸೆನ್ಸೇಷನಲ್ ಸ್ಟೋರಿ ಇಲ್ಲಿದೆ ನೋಡಿ.
ಬರೋಬ್ಬರಿ 100 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾದ ಕನ್ನಡದ ಸಿನಿಮಾವೊಂದು 7 ಭಾಷೆಗಳಲ್ಲಿ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗೋದು ತಮಾಷೆಯ ಮಾತಲ್ಲ. ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ರಿಷಬ್ ಶೆಟ್ಟಿ ಅದನ್ನ ಸಾಕಾರಗೊಳಿಸುವಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಯೆಸ್.. ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಚಿತ್ರದ ರಿಲೀಸ್‌ಗೆ ಇನ್ನೊಂದೇ ಒಂದು ದಿನ ಬಾಕಿ ಉಳಿದಿದೆ. ದೇಶಾದ್ಯಂತ ಚಿತ್ರತಂಡ ಭರ್ಜರಿ ಪ್ರಮೋಷನ್ಸ್‌ನಲ್ಲಿ ತೊಡಗಿಸಿಕೊಂಡಿದೆ.
ನಾನು ಹೆಮ್ಮೆಯ ಕನ್ನಡಿಗ.. ಮುಂಬೈನಲ್ಲಿ ಮೌನ ಮುರಿದ ಶೆಟ್ರು
ಪ್ಯಾನ್ ಇಂಡಿಯಾ ಭರ್ಜರಿ ಪ್ರಮೋಷನ್ಸ್‌ನಲ್ಲಿ ಟೀಂ ಕಾಂತಾರ
ಇತ್ತೀಚೆಗೆ ಕೊಚ್ಚಿಯಲ್ಲಿ ಮೊದಲ ಬಾರಿಗೆ ಕಾಂತಾರ-1 ಇವೆಂಟ್ ಮಾಡಿದ್ರು ರಿಷಬ್ ಶೆಟ್ಟಿ ಅಂಡ್ ಟೀಂ ಕಾಂತಾರ. ಅದಾದ ಬಳಿಕ ನಮ್ಮ ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಇವೆಂಟ್ ನೆರವೇರಿತ್ತು. ನಂತರ ಪಕ್ಕದ ತೆಲಂಗಾಣದ ಹೈದ್ರಾಬಾದ್‌ನಲ್ಲಿ ಜೂನಿಯರ್ ಎನ್‌ಟಿಆರ್ ಉಪಸ್ಥಿತಿಯಲ್ಲಿ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಮೊನ್ನೆ ಅಲ್ಲಿನ ಇವೆಂಟ್ ಮುಗಿಸಿ, ನಿನ್ನೆ ಮುಂಬೈಗೆ ಹಾರಿದ್ದ ಕಾಂತಾರ ತಂಡ, ಅಲ್ಲಿ ಕೂಡ ಸುದ್ದಿಗೋಷ್ಠಿ ನಡೆಸಿ, ಚಿತ್ರದ ಪ್ರಚಾರ ಕಾರ್ಯಗಳನ್ನ ನಡೆಸಿತು. ಆದ್ರೆ ಅಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ಆಂಧ್ರದಲ್ಲಿ ಎದ್ದಿರೋ ನೆಗೆಟಿವ್ ಕ್ಯಾಂಪೇನ್‌ಗೆ ರಿಷಬ್ ಶೆಟ್ಟಿಯ ರಿಯಾಕ್ಷನ್.
ಹೌದು.. ಹೈದ್ರಾಬಾದ್ ಇವೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ ರಿಷಬ್ ಶೆಟ್ಟಿಯನ್ನ ತೆಲುಗು ಚಿತ್ರಪ್ರೇಮಿಗಳು ಬೇಕು ಅಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುವ ಕಾರ್ಯ ಮಾಡಿದ್ರು. ಅಲ್ಲದೆ, ಬಾಯ್ಕಾಟ್ ಕಾಂತಾರ ಅನ್ನೋ ಕ್ಯಾಂಪೇನ್ ಶುರು ಮಾಡಿದ್ರು. ತೆಲುಗು ಬಾರದಿದ್ರೂ ತೆಲುಗು ಭಾಷೆಯಲ್ಲಿ ಮಾತಾಡಿ ಅಂದ್ರೆ ಹೇಗೆ ಮಾತಾಡೋಕೆ ಸಾಧ್ಯ ಅಲ್ಲವೇ..? ಹಾಗಾಗಿ ಮುಂಬೈ ಪತ್ರಕರ್ತರು ಕೇಳಿದ ಹೈದ್ರಾಬಾದ್ ವಿವಾದದ ಅಲೆಗೆ ರಿಷಬ್ ಶೆಟ್ಟಿ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ.
ಕಾಂತಾರಗೆ ಪವನ್ ಬೆಂಬಲ.. ವೈಜಾಗ್‌ನಲ್ಲಿ ಗ್ರ್ಯಾಂಡ್ ಇವೆಂಟ್
ಕನ್ನಡ ಚಿತ್ರಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ- ಡಿಸಿಎಂ ಪವನ್
ನಾನು ಹೆಮ್ಮೆಯ ಕನ್ನಡಿಗ. ಕನ್ನಡದಲ್ಲಿ ಯೋಚಿಸುತ್ತೇನೆ. ಹಾಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಭಾಷೆಗಳನ್ನ ಕಲಿಯೋದು ನನಗೆ ಇಷ್ಟ. ನಾನು ಒಂದು ಸ್ಥಳಕ್ಕೆ ಹೋಗಿ ಮಾತನಾಡುವಾಗ ಆ ನೆಲದ ಭಾಷೆಯನ್ನ ಅಗೌರವಿಸಬಾರದು. ನನಗೆ ಕನ್ನಡ ಹೇಗೋ ಇತರೇ ಭಾಷೆಗಳು ಕೂಡ ಹಾಗೆಯೇ. ಅಷ್ಟೇ ಗೌರವ ಇದೆ. ಅವುಗಳನ್ನ ಕೂಡ ಪ್ರೀತಿಸುತ್ತೇನೆ ಎಂದಿದ್ದಾರೆ.
ಪವನ್ ಕಲ್ಯಾಣ್ ನಟನೆಯ OG ಸಿನಿಮಾದ ಬಾಕ್ಸ್ ಆಫೀಸ್‌ಗೆ ಎಫೆಕ್ಟ್ ಆಗಲಿದೆ ಅನ್ನೋ ಕಾರಣಕ್ಕೆ ಕೆಲ ಪವನ್ ಫ್ಯಾನ್ಸ್ ಹಾಗೂ ತೆಲುಗು ಮಂದಿ, ಕಾಂತಾರ-1 ಚಿತ್ರದ ರಿಲೀಸ್‌ಗೆ ಅಡ್ಡಿಪಡಿಸ್ತಿದ್ದಾರೆ ಎನ್ನಲಾಗಿತ್ತು. ಆದ್ರೀಗ ಅದಕ್ಕೆ ಸ್ವತಃ ಡಿಸಿಎಂ ಪವನ್ ಎಂಟ್ರಿ ಕೊಟ್ಟಿದ್ದು, ಕನ್ನಡ ಚಿತ್ರಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ರಾಷ್ಟ್ರೀಯ ಐಕ್ಯತಾ ಭಾವನೆಯಿಂದ ಯೋಚಿಸಬೇಕು. ಕನ್ನಡ ಕಂಠೀರವ ಡಾ ರಾಜ್‌ಕುಮಾರ್‌ರಿಂದ ಹಿಡಿದು, ಸುದೀಪ್, ಶಿವಣ್ಣ, ಉಪೇಂದ್ರ ಮತ್ತು ರಿಷಬ್ ಶೆಟ್ಟಿವರೆಗೆ ನಮ್ಮ ತೆಲುಗು ಮಂದಿ ಎಲ್ಲರನ್ನ ಬೆಂಬಲಿಸಿದ್ದಾರೆ. ನಾವು ಸೋದರತ್ವದಿಂದ ಮುಂದುವರೆಯಬೇಕು. ಕಾಂತಾರಗೆ ಅಡ್ಡಿಪಡಿಸಬೇಡಿ ಅಂತ ಪವನ್ ಕಲ್ಯಾಣ್ ತೆಲುಗು ಮಂದಿಗೆ ಮನವಿ ಮಾಡಿದ್ದಾರಂತೆ.
ಚೆನ್ನೈ ಫಂಕ್ಷನ್ ಕ್ಯಾನ್ಸಲ್.. ಕರೂರು ಕಾಲ್ತುಳಿತ ದುರಂತ ಎಫೆಕ್ಟ್
ಸಾವು ನೋವುಗಳಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ ಟೀಂ
ಇದು ನಿಜಕ್ಕೂ ಕಾಂತಾರ ಚಿತ್ರತಂಡ ಹಾಗೂ ರಿಷಬ್ ಶೆಟ್ಟಿಗೆ ಆನೆಬಲ ತಂದಿದೆ. ಇದಕ್ಕೆ ಪೂರಕವಾಗಿ ಮುಂಬೈನಿಂದ ವೈಜಾಗ್‌ಗೆ ಹಾರಿರುವ ರಿಷಬ್ ಟೀಂ, ಇಂದು ಸಮುದ್ರದ ತಟದಲ್ಲಿರೋ ವೈಜಾಗ್‌ನಲ್ಲಿ ಕಾಂತಾರ ಇವೆಂಟ್ ನಡೆಸಲಿದೆಯಂತೆ. ಇಂದು ಮಧ್ಯೆರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿರೋ ಶೆಟ್ರು ನಾಳೆ ಒಂದು ದಿನ ಕನ್ನಡದಲ್ಲಿನ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.
ಎಲ್ಲಾ ಓಕೆ.. ತಮಿಳುನಾಡಿನಲ್ಲಿ ಪ್ರಮೋಷನ್ಸ್ ಇಲ್ಲ ಯಾಕೆ ಅನ್ನೋ ಮಾತು ಬರ್ತಿದೆ. ಅದಕ್ಕೆ ಉತ್ತರ ರೀಸೆಂಟ್ ಆಗಿ ನಡೆದ ಕರೂರು ಕಾಲ್ತುಳಿತ ದುರಂತ. ಹೌದು.. ದಳಪತಿ ವಿಜಯ್ ಟಿವಿಕೆ ಪಕ್ಷದ ರ್ಯಾಲಿಯಲ್ಲಿ ಬರೋಬ್ಬರಿ 41 ಮಂದಿ ಸಾವನ್ನಪ್ಪಿದ್ರು. ನೂರಾರು ಮಂದಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಅಲ್ಲಿ ಹೋಗಿ ಪ್ರಮೋಷನ್ಸ್ ಮಾಡುವುದು ಸರಿಯಲ್ಲ ಅನ್ನೋ ನಿರ್ಧಾರಕ್ಕೆ ಬಂದಿದೆ ಚಿತ್ರತಂಡ. ಅದೇ ಕಾರಣದಿಂದ ಚೆನ್ನೈನಲ್ಲಿ ನಡೆಯಬೇಕಿದ್ದ ಇವೆಂಟ್‌ನ ರದ್ದುಗೊಳಿಸಿ, ಸಾವು ನೋವುಗಳಾದ ಕುಟುಂಬಗಳಿಗೆ ಸಂತಾಪ ಸೂಚಿಸಿದೆ ಟೀಂ ಕಾಂತಾರ.
ಒಟ್ಟಾರೆ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಸ್ವತಃ ಆಂಧ್ರ ಮಂದಿಗೆ ಕಾಂತಾರ ವಿಚಾರದಲ್ಲಿ ಅಡೆತಡೆ ಮಾಡಬಾರದು. ಶಾಂತರೀತಿಯಿಂದ ಇರಬೇಕೆಂದು ಮನವಿ ಮಾಡಿರೋ ಹಿನ್ನೆಲೆ ನಮ್ಮ ಕರಾವಳಿಯ ದಂತಕಥೆಯ ಹಾದಿ ಸುಗಮವಾಗಲಿದೆ. ಈಗಾಗ್ಲೇ ನೂರು ಕೋಟಿ ಕೊಟ್ಟು ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿ ಮಾಡಿರೋ ಆಂಧ್ರ ವಿತರಕರಿಗೂ ಇದರಿಂದ ಕೊಂಚ ರಿಲ್ಯಾಕ್ಸ್ ಸಿಕ್ಕಂತಾಗಿದೆ.
ವಿಜಯ ದಶಮಿ ಹಬ್ಬದ ದಿನ ಅಕ್ಟೋಬರ್ 2ಕ್ಕೆ ಕಾಂತಾರ ಬೆಳಕಿನ ದರ್ಶನ ಥಿಯೇಟರ್‌ನಲ್ಲಿ ಆಗಲಿದೆ. ಇಲ್ಲಿ ಪ್ರಕೃತಿ ಹಾಗೂ ಮನುಷ್ಯನ ಸಂಘರ್ಷದ ಜೊತೆ ಕರಾವಳಿಯ ಮೂಲ ದೈವದ ಉಗಮ, ಶಿವ ನೆಲೆಸಿದ್ದ ಆ ನೆಲ, ಅಲ್ಲಿನ ವಿಶೇಷತೆಗಳ ಅನಾವರಣ ಕೂಡ ಆಗಲಿದೆ.