ಕಾಂತಾರ ಚಾಪ್ಟರ್-1 ಶೂಟಿಂಗ್‌ಗೂ ಮೊದಲೇ ರಿಷಬ್ ಶೆಟ್ಟಿಗೆ ‘ನಿನಗೆ ಶತ್ರುಗಳ ಕಾಟ ಜಾಸ್ತಿ. ಹರಕೆ ಹೊತ್ತಿಕೋ, ನಿನ್ನ ಕಷ್ಟಗಳನ್ನ ನಿವಾರಿಸ್ತೀನಿ’ ಅಂತ ಎಚ್ಚರಿಸಿತ್ತು ಪಂಜುರ್ಲಿ ದೈವ. ಅದ್ರಂತೆ ಶೆಟ್ರು ದೈವಕ್ಕೆ ಹರಕೆ ಹೊತ್ತು, ಸಿನಿಮಾ ಮಾಡಿದ್ರು. ಹತ್ತು, ಹಲವು ವಿಘ್ನಗಳ ನಡುವೆ ಸಿನಿಮಾನ ಕಂಪ್ಲೀಟ್ ಮಾಡಿ, ತೆರೆಗೆ ತಂದಿದ್ರು. ಇದೀಗ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಇಡೀ ಕಾಂತಾರ-1 ಟೀಂ ಬಂದು ಹರಕೆ ತೀರಿಸಿದೆ. ಅದ್ರ ಅವಿಸ್ಮರಣೀಯ ಕ್ಷಣಗಳನ್ನ ನೀವೊಮ್ಮೆ ಕಣ್ತುಂಬಿಕೊಳ್ಳಿ.
ಪಂಜುರ್ಲಿ ದೈವ ಹಾಗೂ ರಿಷಬ್ ಶೆಟ್ಟಿಗೆ ಅವಿನಾಭಾವ ಸಂಬಂಧವಿದೆ. ಅದಕ್ಕೆ ಕಾರಣ ಕಾಂತಾರ ಸಿನಿಮಾಗಳು. ಈ ಹಿಂದೆ ಕಾಂತಾರ ಚಿತ್ರ ದೊಡ್ಡ ಮಟ್ಟಕ್ಕೆ ಹಿಟ್ ಆಗೋಕೆ ಕಾರಣ ದೈವದ ಕುರಿತ ಅಂಶಗಳು. ದೇವರ ಆಶೀರ್ವಾದ ಇದ್ರೆ ಸಾಕು. ಯಾರು ಏನು ಬೇಕಾದ್ರೂ ಸಾಧಿಸಬಹುದು ಅನ್ನೋದನ್ನ ರಿಷಬ್ ಶೆಟ್ಟಿ ಪ್ರೂವ್ ಮಾಡಿದ್ರು. ಅದ್ರಂತೆ ಕಾಂತಾರ ಚಾಪ್ಟರ್-1 ಕೂಡ 900 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದ ವಿಶ್ವ ಸಿನಿದುನಿಯಾದ ಹುಬ್ಬೇರಿಸಿದ್ದು ಗೊತ್ತೇಯಿದೆ.

ವರಾಹಿ ಪಂಜುರ್ಲಿಗೆ ಕಾಂತಾರ ಟೀಂ ಹರಕೆ ನೇಮೋತ್ಸವ
ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ
ಕಾಂತಾರ-1 ಅಷ್ಟು ದೊಡ್ಡ ಹಿಟ್ ಆಗೋಕೆ ಒನ್ಸ್ ಅಗೈನ್ ಪಂಜುರ್ಲಿ, ಗುಳಿಗ ದೈವಗಳೇ ಪ್ರಮುಖ ಕಾರಣ. ಅಫ್ ಕೋರ್ಸ್ ಅದು ಸಾಕಾರ ಆಗೋಕೆ ರಿಷಬ್ ಶೆಟ್ಟಿ ಅವ್ರ ಹಾರ್ಡ್ ವರ್ಕ್, ಹಾನೆಸ್ಟ್ ಎಫರ್ಟ್ಸ್ ಕೂಡ ಇತ್ತು. ಆದ್ರೆ ಆ ಸಂಕಲ್ಪ ಈಡೇರೋಕೆ ವರಾಹಿ ಪಂಜುರ್ಲಿ ದೈವದ ಕೃಪೆ ಸಾಕಷ್ಟಿದೆ. ಅದೇ ಕಾರಣದಿಂದ ಸಾಕಷ್ಟು ಅಡೆ, ತಡೆ, ವಿಘ್ನಗಳನ್ನ ಎದುರಿಸಿ ಸಿನಿಮಾ ಕಂಪ್ಲೀಟ್ ಆಗಿತ್ತು. ಸಾವಿನ ಕದ ತಟ್ಟಿ ಬಂದಿದ್ರಂತೆ ರಿಷಬ್.

ಕಾಂತಾರ ಚಾಪ್ಟರ್-1 ಶೂಟಿಂಗ್‌ಗೂ ಮೊದಲೇ ಮಂಗಳೂರಿನ ಬಾರೆಬೈಲ್ ವರಾಹಿ ಪಂಜುರ್ಲಿ, ಜಾರಂದಾಯ & ಬಂಟ ದೈವಸ್ಥಾನಕ್ಕೆ ತೆರಳಿ ದೈವದ ಮಾತುಗಳನ್ನ ಆಲಿಸಿದ್ದರು ರಿಷಬ್ ಶೆಟ್ಟಿ. ಅಂದು ನಿನಗೆ ಶತ್ರುಗಳು ಜಾಸ್ತಿ ಇದ್ದಾರೆ. ಎಚ್ಚರಿಕೆ ಇರಲಿ. ಹರಕೆ ಹೊತ್ತಿಕೋ, ನಿನ್ನ ಸಮಸ್ಯೆಗಳನ್ನ ನಿವಾರಿಸುತ್ತೇನೆ ಎಂದಿತ್ತು ದೈವ. ಅದ್ರಂತೆ ರಿಷಬ್ ಶೆಟ್ಟಿ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೂಡಿ ಹರಕೆ ಹೊತ್ತಿದ್ದರು. ಇದೀಗ ಆ ಹರಕೆಯನ್ನ ತೀರಿಸುವ ಕಾರ್ಯ ಮಾಡಿದೆ ಚಿತ್ರತಂಡ.

ವಿಜಯ್ ಕಿರಗಂದೂರು, ಡೈರೆಕ್ಟರ್ ಸಂತೋಷ್ ಸಾಥ್
ಕಣ್ಣೀರು ಸುರಿಸಬೇಡ.. ನಿನ್ನ ಹಿಂದೆ ನಾನಿದ್ದೇನೆಂದ ದೈವ..!
ರಿಷಬ್ ಶೆಟ್ಟಿ ತನ್ನ ಮಕ್ಕಳು ಹಾಗೂ ಪತ್ನಿ ಸಮೇತ ಮಂಗಳೂರಿಗೆ ತೆರಳಿ ನಿನ್ನೆ ಮಧ್ಯೆರಾತ್ರಿವರೆಗೂ ಪಂಜುರ್ಲಿ ದೈವಕ್ಕೆ ಹರಕೆ ತೀರಿಸುವ ಕಾರ್ಯ ಮಾಡಿದ್ರು. ಆ ಹರಕೆ ನೇಮೋತ್ಸವಕ್ಕೆ ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಸೇರಿದಂತೆ ಸಾಕಷ್ಟು ಮಂದಿ ಹಿತೈಷಿಗಳು ಸಾಥ್ ನೀಡಿದ್ರು.

ಗಗ್ಗರ ಸೇವೆ ಜೊತೆ ಅನ್ನ ಸಂತರ್ಪಣೆ ಕೂಡ ಮಾಡಿಸಿದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರ್‌ಗೆ ಪಂಜುರ್ಲಿ ದೈವ ಅಭಯ ಹಸ್ತ ನೀಡಿತು. ಕಣ್ಣೀರು ಸುರಿಸಬೇಡ.. ನಿನ್ನ ಹಿಂದೆ ನಾನಿದ್ದೇನೆ ಅನ್ನೋ ಮಾತನ್ನು ಹೇಳುವ ಮೂಲಕ ಸಿನಿಮಾದ ಗೆಲುವನ್ನು ಅಭಿನಂದಿಸಿದೆ. ರಿಷಬ್ ಶೆಟ್ಟಿಯನ್ನ ಅಪ್ಪಿ, ಆಲಂಗಿಸಿದ ದೈವ, ಅವರು ನೀಡಿದ ಹರಕೆ ಕೋಲಕ್ಕೆ ಸಂತುಷ್ಟವಾಗಿದೆ. ಅದೇ ಕಾರಣಕ್ಕೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿ, ಮಮಕಾರ ತೋರಿದೆ ಪಂಜುರ್ಲಿ ದೈವ. ವೀಳ್ಯ ಶಕುನದ ಮೂಲಕ ದೈವ ಸಂತುಷ್ಟದ ಸೂಚನೆ ಸಿಕ್ಕಿದೆ.

ಕೋಲಕ್ಕೂ ಮುನ್ನ ವರಾಹಿ ಪಂಜುರ್ಲಿಗೆ ಉಗ್ರ ಎಣ್ಣೆಬೂಲ್ಯ ಅರ್ಪಿಸಲಾಯಿತು. ಒಟ್ಟಾರೆ ಇದು ಬಹಳ ಅವಿಸ್ಮರಣೀಯ ಹಾಗೂ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಯಿತು. ಚಿತ್ರದ ದೈವಿಕ ಅಂಶಗಳು, ಅದನ್ನ ನಿಷ್ಠೆಯಿಂದ ಪಾಲಿಸಿದ ಶೆಟ್ರು ಹಾಗೂ ಟೀಂ, ದೈವ ಅವರೊಟ್ಟಿಗೆ ನಿಂತ ಪರಿ, ಹರಕೆಯಲ್ಲಿ ನೀಡಿದ ಈ ಅಭಯ ಎಲ್ಲವೂ ಪವಾಡ ಸದೃಷ್ಯಗಳೇ ಸರಿ. ಅಂದಹಾಗೆ ಈ ಹಿಂದೆ ಕಾಂತಾರ ಚಿತ್ರ ಹಿಟ್ ಆದ ಬಳಿಕ ಕೂಡ ಇದೇ ರೀತಿ ಹರಕೆ ತೀರಿಸುವ ಕಾರ್ಯ ಮಾಡಿದ್ರು ರಿಷಬ್ ಹಾಗೂ ವಿಜಯ್ ಕಿರಗಂದೂರು.





