ಬೆಂಗಳೂರು: ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಯಶಸ್ಸಿನ ಉತ್ಸಾಹದೊಂದಿಗೆ, ಈಗ ‘ಕಾಂತಾರ 1’ ಚಿತ್ರವು ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾದ ಕೀರ್ತಿಪತಾಕೆಯನ್ನು ಹಾರಿಸಲು ಸಜ್ಜಾಗುತ್ತಿದೆ. ಕುಂದಾಪುರದ ಸುಂದರ ಭೂಪ್ರದೇಶದಲ್ಲಿ ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ, ಬಹುಕೋಟಿ ವೆಚ್ಚದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣವು ಅಂತಿಮ ಹಂತಕ್ಕೆ ತಲುಪಿದ್ದು, ಅಕ್ಟೋಬರ್ 2 ರಂದು ಏಳು ಭಾಷೆಗಳಲ್ಲಿ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರ ಜೊತೆಗೆ, ಈ ಚಿತ್ರವನ್ನು ಇಂಗ್ಲೀಷ್‌ನಲ್ಲಿಯೂ ತಯಾರಿಸಲಾಗುತ್ತಿದ್ದು, ಜಾಗತಿಕ ಪ್ರೇಕ್ಷಕರನ್ನು ಸೆಳೆಯುವ ಗುರಿಯನ್ನು ಚಿತ್ರತಂಡ ಹೊಂದಿದೆ. ಇದೀಗ, ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸುವ ಉದ್ದೇಶದಿಂದ ‘ಕಾಂತಾರ 1’ ತಂಡವು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ.
ಹೊಂಬಾಳೆ ಫಿಲಂಸ್‌ನ ಸಹ-ಸಂಸ್ಥಾಪಕರಾದ ಚಲುವೇಗೌಡ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮುಂಬೈನಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಆಯೋಜಿತವಾದ ‘ವರ್ಲ್ಡ್ ಆಡಿಯೋ ವಿಷ್ಣುವಲ್ ಆಂಡ್ ಎಂಟರ್‌ಟೈನ್‌ಮೆಂಟ್’ (ವೇಲ್ಸ್) ಶೃಂಗಸಭೆಯಲ್ಲಿ ಭಾಗವಹಿಸಿದ ಅವರು, ‘ಕಾಂತಾರ 1’ ಆಸ್ಕರ್‌ಗಾಗಿ ಸ್ಪರ್ಧಿಸುವ ಕುರಿತು ತಮ್ಮ ಯೋಜನೆಯನ್ನು ಬಹಿರಂಗಪಡಿಸಿದರು. “ಕಾಂತಾರ 1 ಚಿತ್ರವು ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಲು ಕಾರ್ಯತಂತ್ರ ರೂಪಿಸುತ್ತಿದೆ. ಇದು ಕನ್ನಡ ಚಿತ್ರರಂಗವನ್ನು ಜಾಗತಿಕವಾಗಿ ಗುರುತಿಸುವ ಮಹತ್ವದ ಹೆಜ್ಜೆಯಾಗಲಿದೆ. ಆಸ್ಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಚಾರ ಕಾರ್ಯತಂತ್ರಗಳ ಬಗ್ಗೆ ಭಾರತದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಇಂತಹ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿದರೆ, ಭಾರತೀಯ ಚಿತ್ರ ನಿರ್ಮಾಪಕರಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ,” ಎಂದು ಅವರು ಒತ್ತಿಹೇಳಿದರು.
ಈ ಗೋಷ್ಠಿಯಲ್ಲಿ ತೆಲುಗಿನ ‘ಆರ್‌ಆರ್‌ಆರ್’ ಚಿತ್ರದ ಸಂಕಲನಕಾರ ಎ. ಶ್ರೀಕರ್ ಪ್ರಸಾದ್ ಮತ್ತು ಆಸ್ಕರ್ ಸಮಿತಿಯ ಸದಸ್ಯ ಉಜ್ವಲ್ ನಿರ್ಗುಡ್ಕರ್ ಭಾಗವಹಿಸಿದ್ದರು. ಈ ಚಿತ್ರವು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ಸಾಧನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ‘ಕಾಂತಾರ’ ಚಿತ್ರವು ತನ್ನ ಸಾಂಸ್ಕೃತಿಕ ಕಥನ, ದೃಶ್ಯ ಸೌಂದರ್ಯ, ಮತ್ತು ಭಾವನಾತ್ಮಕ ಆಳದಿಂದಾಗಿ ಈಗಾಗಲೇ ದೇಶಾದ್ಯಂತ ಮನ್ನಣೆ ಗಳಿಸಿದೆ. ಈಗ ‘ಕಾಂತಾರ 1’ ಈ ಯಶಸ್ಸನ್ನು ಜಾಗತಿಕವಾಗಿ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಆಸ್ಕರ್‌ಗೆ ಸ್ಪರ್ಧಿಸುವುದಕ್ಕಾಗಿ, ಚಿತ್ರತಂಡವು ಚಿತ್ರದ ಗುಣಮಟ್ಟವನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಉನ್ನತೀಕರಿಸುತ್ತಿದೆ. ಇಂಗ್ಲೀಷ್ ಆವೃತ್ತಿಯ ಜೊತೆಗೆ, ಚಿತ್ರದ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಯೋಜನೆಯೂ ಇದೆ. ಈ ಎಲ್ಲಾ ಪ್ರಯತ್ನಗಳು ಕನ್ನಡ ಚಿತ್ರರಂಗದ ಶಕ್ತಿಯನ್ನು ವಿಶ್ವಕ್ಕೆ ತೋರಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ‘ಕಾಂತಾರ 1’ ಚಿತ್ರವು ಕೇವಲ ಒಂದು ಸಿನಿಮಾವಾಗಿರದೆ, ಕನ್ನಡದ ಸಂಸ್ಕೃತಿ, ಕಲೆ, ಮತ್ತು ಕಥನ ಶೈಲಿಯನ್ನು ಜಾಗತಿಕವಾಗಿ ಪರಿಚಯಿಸುವ ಒಂದು ಸಾಂಸ್ಕೃತಿಕ ರಾಯಭಾರಿಯಾಗಲಿದೆ.