ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್‌ಗೆ ನಮ್ಮ ಹೆಮ್ಮೆಯ ಕನ್ನಡಿಗರು ಬ್ಯಾಕ್ ಟು ಬ್ಯಾಕ್ ಗುನ್ನಾ ಇಡೋ ಕಾರ್ಯಗಳು ಪದೇ ಪದೆ ಮರುಕಳಿಸುತ್ತಿದೆ. ಯೆಸ್.. ಈ ಹಿಂದೆ ಯಶ್ ಮುಂದೆ ಡಲ್ ಹೊಡೆದಿದ್ರು ಶಾರೂಖ್. ಇದೀಗ ರಿಷಬ್ ಶೆಟ್ಟಿ ಕೂಡ ಕಿಂಗ್ ಖಾನ್ ದಾಖಲೆಯನ್ನ ಸರಿಗಟ್ಟಿದ್ದಾರೆ. ಏನದು ರೆಕಾರ್ಡ್ ಅಂತೀರಾ..? ಇಲ್ಲಿದೆ ನೋಡಿ.
- ಅಂದು ಯಶ್.. ಇಂದು ರಿಷಬ್.. ಶಾರೂಖ್‌ಗೆ ಗುನ್ನಾ..!
- KGF ರಾಕಿಭಾಯ್ ಮುಂದೆ ಝೀರೋ ಆಗಿದ್ದ ಖಾನ್..!
- ಪಠಾಣ್ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ
- ಇಂಗ್ಲಿಷ್ನಲ್ಲೂ ಬರ್ತಿದೆ ಕಾಂತಾರ.. ರನ್ ಟೈಮ್ ಟ್ರಿಮ್
ಅಂದೊಂದಿತ್ತು ಕಾಲ.. ಆಗ ಬರೀ ಬಾಲಿವುಡ್ ಸಿನಿಮಾಗಳದ್ದೇ ಜಮಾನ. ಆದ್ರೀಗ ಕಾಲ ಬದಲಾಗಿದೆ. ಪ್ರೇಕ್ಷಕರ ಅಭಿರುಚಿ ಕೂಡ ತುಂಬಾ ಬದಲಾಗಿದೆ. ಸೌತ್ ಸಿನಿದುನಿಯಾದ ಮಲಯಾಳಂ, ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ರುಚಿಸುತ್ತಿವೆ. ನೂರಾರು ಅಲ್ಲ, ಸಾವಿರಾರು ಕೋಟಿ ಬ್ಯುಸಿನೆಸ್ ಮಾಡ್ತಿವೆ. ಆ ಸಾಲಿನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರಾದ ರಿಷಬ್ ಶೆಟ್ಟಿ ಹಾಗೂ ಯಶ್ ಕನ್ನಡದ ಕೀರ್ತಿ ಪತಾಕೆಯನ್ನ ಮುಗಿಲೆತ್ತರದಲ್ಲಿ ಹಾರಿಸುತ್ತಿದ್ದಾರೆ.
ಕೆಜಿಎಫ್ ಸಿನಿಮಾಗಳ ಶೈಲಿಯಲ್ಲೇ ಕಾಂತಾರ ಸಿನಿಮಾಗಳು ಕೂಡ ವಿಶ್ವದ ಮೂಲೆ ಮೂಲೆಗೆ ತಲುಪಿವೆ. ಚಿತ್ರಪ್ರೇಮಿಗಳ ನಿರೀಕ್ಷೆಗೂ ಮೀರಿ ಸದ್ದು ಮಾಡ್ತಿವೆ. ಅದ್ರಲ್ಲೂ ಬಾಲಿವುಡ್ ಸೂಪರ್ ಸ್ಟಾರ್‌ಗಳಿಗೆ ಸಿಂಹಸ್ವಪ್ನರಾಗ್ತಿದ್ದಾರೆ ಯಶ್ ಹಾಗೂ ರಿಷಬ್. ಯೆಸ್.. ಕೆಜಿಎಫ್ ಸಿನಿಮಾದ ವೇಳೆ ಶಾರೂಖ್ ಝೀರೋ ಸಿನಿಮಾ ರಿಲೀಸ್ ಆಗಿ ಅಕ್ಷರಶಃ ಬಾಕ್ಸ್ ಆಫೀಸ್‌ನಲ್ಲಿ ಕೂಡ ಝೀರೋ ಆಗಿಬಿಟ್ಟಿತ್ತು.
ಯಶ್ ನಟನೆಯ ಕೆಜಿಎಫ್-2, ಶಾರೂಖ್ ಸಿನಿಮಾಗಳಿಗಿಂತ ಜಾಸ್ತಿ ಕಲೆಕ್ಷನ್ ಮಾಡಿ, ಸಾವಿರ ಕೋಟಿ ಸರದಾರ ಅನ್ನೋ ಬಿರುದು ಪಡೆಯುವಂತಾಯ್ತು. ಇದೀಗ ಮತ್ತೊಮ್ಮೆ ರಿಷಬ್ ಶೆಟ್ಟಿ ಮತ್ತದೇ ಬಾಲಿವುಡ್ ಕಿಂಗ್ ಖಾನ್‌ನ ಇನ್ನಿಲ್ಲದೆ ಕಾಡ್ತಿದ್ದಾರೆ. ಭಾರತದಲ್ಲಿ ಶಾರೂಖ್ ಖಾನ್ ನಟನೆಯ ಪಠಾಣ್ ಸಿನಿಮಾ ಗಳಿಸಿದ್ದ 543 ಕೋಟಿ 22 ಲಕ್ಷ ಗಳಿಕೆಯನ್ನ ಕೇವಲ 20 ದಿನದಲ್ಲಿ 547 ಕೋಟಿ 1 ಲಕ್ಷ ರೂಪಾಯಿ ಗಳಿಸೋ ಮೂಲಕ ರಿಷಬ್ ಕಾಂತಾರ ಸರಿಗಟ್ಟಿದೆ. ಇದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಬಜೆಟ್, ಸ್ಟಾರ್‌ಡಮ್‌ಗಿಂತ ಇಲ್ಲಿ ಕಥೆ, ಮೇಕಿಂಗ್ ಹಾಗೂ ಪಾತ್ರಗಳಲ್ಲಿರೋ ಜೀವಂತಿಕೆಯೇ ಮುಖ್ಯ ಆಗುತ್ತೆ ಅನ್ನೋದನ್ನ ಕಾಂತಾರ ಮಗದೊಮ್ಮೆ ಪ್ರೂವ್ ಮಾಡಿದೆ. 850 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋ ಕಾಂತಾರ-1 ಇಂದಿಗೂ ಎಲ್ಲೆಡೆ ಚಿತ್ರಮಂದಿರಗಳು ಕಿಕ್ಕಿರಿದು ತುಂಬುವಂತಾಗಿವೆ. ಯಾಕಂದ್ರೆ ಆ ಸಿನಿಮಾಗೆ ಅಂಥದ್ದೊಂದು ಮಹಾನ್ ಶಕ್ತಿಯಿದೆ.
ಇದೀಗ ಕಾಂತಾರ-1 ಇದೇ ಅಕ್ಟೋಬರ್ 31ರಿಂದ ಇಂಗ್ಲಿಷ್‌ಗೂ ಡಬ್ ಆಗಿ ತೆರೆಗಪ್ಪಳಿಸುತ್ತಿದೆ. ಆಂಗ್ಲ ಭಾಷೆಗೆ ಡಬ್ ಆಗಿ ರಿಲೀಸ್ ಆಗ್ತಿರೋ ಭಾರತದ ಮೊಟ್ಟ ಮೊದಲ ಸಿನಿಮಾ ಇದು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗ್ತಿದೆ ಕಾಂತಾರ. ಅಂದಹಾಗೆ ಆಸ್ಕರ್ ಅಂಗಳಕ್ಕೆ ಹೋಗೋಕೆ ಹಾಗೂ ಹಾಲಿವುಡ್ ಮಂದಿಗೂ ರೀಚ್ ಆಗೋಕೆ ಇದು ಬೆಸ್ಟ್ ಚಾಯ್ಸ್ ಕೂಡ ಆಗಿದೆ. ಅಲ್ಲದೆ, ಎರಡೂ ಮುಕ್ಕಾಲು ಗಂಟೆ ಕಾಲ ಇದ್ದ ರನ್ ಟೈಂನ ಎರಡೂ ಕಾಲು ಗಂಟೆಗೆ ಇಳಿಸಿ, ಕ್ರಿಸ್ಪಿಯಾಗಿ ಇಂಗ್ಲಿಷ್‌ನಲ್ಲಿ ರಿಲೀಸ್ ಮಾಡ್ತಿದೆ ಹೊಂಬಾಳೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
