ಬಾಲಿವುಡ್ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್… ಇವರಿಬ್ಬರೂ ಒಟ್ಟಿಗೆ ಒಂದೇ ಫ್ರೇಮ್‌ನಲ್ಲಿ ಬಂದ್ರೆ ಹೇಗಿರುತ್ತೆ. ? ಇಡೀ ಗ್ಲೋಬ್ ಅಲ್ಲಾಡೋದು ಪಕ್ಕಾ. ಈಗ ಈ ‘ರಾಮಾಯಣ’ ಬಿಫೋರ್ ರಿಲೀಸ್‌ನಲ್ಲೇ ಹೊಸ ಹಿಸ್ಟರಿ ಕ್ರಿಯೇಟ್ ಮಾಡೋಕೆ ರೆಡಿಯಾಗಿದೆ. ಇಂಡಿಯಾ ಮಾತ್ರವಲ್ಲ, ಚೀನಾದಲ್ಲೂ ರಾಮಾಯಣ ರಿಲೀಸ್ ಆಗ್ತಿದ್ದು ಯಾವ ಟೈಟಲ್ ಇಡಲಾಗಿದೆ ಹೇಳ್ತೀವಿ ಈ ಸ್ಟೋರಿ ನೋಡಿ.
- ನ್ಯೂ ಟೈಟಲ್.. ಚೀನಾಗೆ ಸನಾತನ ‘ರಾಮಾಯಣ’ ಎಂಟ್ರಿ
- ಭಾರತಕ್ಕಿಂತ ಮೊದಲೇ ವಿದೇಶದಲ್ಲಿ ರಾಮಾಯಣ ದರ್ಶನ
- ಸೆ.24ಕ್ಕೆ ಚೀನಾದಲ್ಲಿ ರಾಮಾಯಣ ಸ್ಪೆಷಲ್ ಶೋ
- ದಂಗಲ್ ದಾಖಲೆ ಮುರಿಯುತ್ತಾ ರಾಮಾಯಣ..?
ರಾಮಾಯಣ ಪಾರ್ಟ್ 1 ಸಿನಿಮಾ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೂ ಮುನ್ನವೇ ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಸುನಾಮಿ ಎಬ್ಬಿಸಿದೆ. ನಿರ್ದೇಶಕ ನಿತೇಶ್ ತಿವಾರಿ ಕಲ್ಪನೆಯಲ್ಲಿ ಮೂಡಿಬರುತ್ತಿರೋ ಈ ಮಹಾಕಾವ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಣಬೀರ್ ಕಪೂರ್ ಜಂಟಿಯಾಗಿ ಅಖಾಡಕ್ಕಿಳಿದಿದ್ದಾರೆ. ಈಗ ಈ ಸಿನಿಮಾ ವಿಶ್ವದ ಎರಡನೇ ಅತಿದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದಲ್ಲೂ ಬಿಡುಗಡೆಯಾಗಲು ಸಜ್ಜಾಗಿದ್ದು, ಗ್ಲೋಬಲ್ ಬಾಕ್ಸ್ ಆಫೀಸ್ ಧೂಳೆಬ್ಬಿಸೋಕೆ ಕೌಂಟ್‌ಡೌನ್ ಶುರುವಾಗಿದೆ.
ಚೀನಾದ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಸಖತ್ ಪ್ಲಾನ್ ಮಾಡಿಕೊಂಡಿದೆ. ಅಲ್ಲಿ ಈ ಚಿತ್ರಕ್ಕೆ ‘The Legend of Prince’ ಅಂತ ಹೊಸ ಶೀರ್ಷಿಕೆ ಇಡಲಾಗುತ್ತಿದೆ. ಅಷ್ಟೇ ಅಲ್ಲ, ದಂಗೆ ಎಬ್ಬಿಸಿದ ‘ದಂಗಲ್’ ಸಿನಿಮಾದ ಜಾಗತಿಕ ವಿತರಣೆ ಮಾಡಿದ್ದ ಪ್ರಸಿದ್ಧ ‘ಸೋನಿ ಪಿಕ್ಚರ್ಸ್’ ಸಂಸ್ಥೆಯೇ ಈ ಸಿನಿಮಾದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಚೀನಾ ಪ್ರೇಕ್ಷಕರಿಗೆ ಭಾರತೀಯ ಮಹಾಕಾವ್ಯವನ್ನು ಅತ್ಯಂತ ಅದ್ದೂರಿಯಾಗಿ ತೋರಿಸಲು ಬಿಗ್ ಲೆವೆಲ್‌ನಲ್ಲೇ ಪ್ಲಾನ್ ನಡೀತಿದೆ.
ಚೀನಾದಲ್ಲಿ ಪ್ರಚಾರ ಅಂದ್ರೆ ಸುಮ್ನೆನಾ? ಸೆಪ್ಟೆಂಬರ್ 24ರಂದು ಅಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೀಲಿದೆ. ಆ ಬಳಿಕ ಅಕ್ಟೋಬರ್ 1ರಿಂದ ಆರಂಭವಾಗುವ ಚೀನಾದ ಪ್ರಸಿದ್ಧ ‘ಗೋಲ್ಡನ್ ವೀಕ್’ ಸಂದರ್ಭದಲ್ಲಿ ಬೀಜಿಂಗ್, ಶಾಂಘೈ ನಂತಹ ಬೃಹತ್ ನಗರಗಳಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಚಿತ್ರತಂಡ ಅದ್ದೂರಿಯಾಗಿ ರೋಡ್ ಶೋ ಹಾಗೂ ಪ್ರಚಾರ ಕೈಗೊಳ್ಳಲಿದ್ದಾರೆ.
ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಈ ಸಿನಿಮಾ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ನವೆಂಬರ್ 6ರಂದೇ ವಿದೇಶಿ ಪ್ರೇಕ್ಷಕರಿಗೆ ‘ರಾಮಾಯಣ’ದ ದರ್ಶನವಾಗಲಿದ್ದು, ಭಾರತದಲ್ಲಂತೂ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಬಿಡುಗಡೆಯಾಗಲಿದೆ. ಅಂದರೆ ವಿದೇಶಿ ಪ್ರೇಕ್ಷಕರು ಭಾರತೀಯರಿಗಿಂತ ಎರಡು ದಿನ ಮುಂಚಿತವಾಗಿಯೇ ಸಿನಿಮಾವನ್ನು ಕಣ್ಣುಂಬಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಅಂದು ‘ದಂಗಲ್’ ಸಿನಿಮಾ ಚೀನಾದಲ್ಲಿ ಸೃಷ್ಟಿಸಿದ ಇತಿಹಾಸ ಯಾರೂ ಮರೆಯುವಂತಿಲ್ಲ. ಬರೋಬ್ಬರಿ 1,200 ರಿಂದ 1,300 ಕೋಟಿ ರೂಪಾಯಿ ಬಾಚಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು. ಈಗ ಅದೇ ನಿರ್ದೇಶಕ ನಿತೇಶ್ ತಿವಾರಿ, ರಾಕಿಂಗ್ ಸ್ಟಾರ್ ಯಶ್ ಮತ್ತು ರಣಬೀರ್ ಕಾಂಬಿನೇಷನ್‌ನಲ್ಲಿ ಬರ್ತಿರೋ ‘ರಾಮಾಯಣ’ ಸಿನಿಮಾ ‘ದಂಗಲ್’ ಬರೆದಿದ್ದ ಸಾರ್ವಕಾಲಿಕ ದಾಖಲೆಗಳನ್ನು ನುಚ್ಚುನೂರು ಮಾಡಿ ಹೊಸ ಇತಿಹಾಸ ಬರೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
