ಅಂಕಲಿಯಲ್ಲಿ ಕನ್ನಡದ ಕಂಪು: 50 ವರ್ಷದ ಮಯೂರ ಚಿತ್ರಮಂದಿರದ ಐತಿಹಾಸಿಕ ಸಂಭ್ರಮ!

Web 2025 05 20t083048.508

ಕನ್ನಡದ ಪರಿಸ್ಥಿತಿ ರಾಜಧಾನಿಗಿಂತ ಗಡಿನಾಡಿನಲ್ಲೇ ಉತ್ತಮವಾಗಿದೆ ಎಂದು ಅನಿಸಿದ್ದು ನಿನ್ನೆ ಅಂಕಲಿ ಎಂಬ ಪುಟ್ಟ ಊರಿನಲ್ಲಿ. ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿರುವ ಅಂಕಲಿಯಲ್ಲಿ ೧೫೦ ವರ್ಷದ ಕನ್ನಡದ ಹಳೆಯ ಶಾಲೆಯ ಜತೆಗೆ ಸುಸಜ್ಜಿತ ಆಧುನಿಕ ಕನ್ನಡ ಶಾಲೆಯೂ ಇದೆ. ಎಲ್ಲೆಲ್ಲೂ ಕನ್ನಡ ನುಡಿ, ಫಲಕಗಳು ರಾರಾಜಿಸುತ್ತಿವೆ. ಗಾಂಧಿ ಭೇಟಿ ಇತ್ತ , ಹಲವು ಸ್ವಾತಂತ್ರ್ಯಯೋಧರನ್ನು ಕಂಡ ಅಚ್ಚ ಕನ್ನಡದ ಊರು.
ಅಂಕಲಿಯಲ್ಲಿ ೫೦ ವರ್ಷ ಆಯುಷ್ಯದ ಮಯೂರ ಎಂಬ ಚಿತ್ರಮಂದಿರವಿದೆ. ಬಹುತೇಕ ಕನ್ನಡ ಸಿನಿಮಾಗಳನ್ನೇ ತೋರಿಸುತ್ತ ಬಂದ, ಸುಸಜ್ಜಿತ ಹವಾನಿಯಂತ್ರಿತ ಮಂದಿರ. ಈ ಐವತ್ತು ವರ್ಷಕ್ಕೂ ಅಣ್ಣಾ ಸಾಹೇಬ ಈಶ್ವರ ಜಕಾತಿ ಎಂಬ ಒಬ್ಬರೇ ಮೇನೇಜರ್.

ಈ ಹತ್ತು ಹಲವು ಸಂಭ್ರಮಾಚರಣೆಗಾಗಿ ಗಡಿನಾಡ ಕನ್ನಡದ ರೂವಾರಿ, ಸಂಸ್ಕೃತಿ ಪ್ರೇಮಿ ಮತ್ತು ತನ್ನ ಹುಟ್ಟೂರು ಅಂಕಲಿಯನ್ನು ಬಹುವಾಗಿ ಹಚ್ಚಿಕೊಂಡ ಡಾ.ಪ್ರಭಾಕರ ಕೋರೆ ನಮ್ಮನ್ನೆಲ್ಲ ಕರೆದಿದ್ದರು. ರವಿಚಂದ್ರನ್, ಡಾಲಿ ಧನಂಜಯ, ಸಪ್ತಮಿಗೌಡ, ಅನುಪ್ರಭಾಕರ್, ಮಂಡ್ಯ ರಮೇಶ್, ಅಮೂಲ್ಯ..ಎಲ್ಲರ ನಡುವೆ ಗ್ಲಾಮರ್ ಇಲ್ಲದ ತೆರೆಯ ಹಿಂದಣ ವ್ಯಕ್ತಿ ನಾನೊಬ್ಬನೇ.

ಹಣವಂತರು ಅಭಿರುಚಿವಂತರಾದರೆ ಮತ್ತು ಲಕ್ಷ್ಮೀ-ಸರಸ್ವತಿಯರು ಒಟ್ಚಿಗೇ ಇದ್ದರೆ ನೋಡಲು ಚೆಂದ. ಅಭಿರುಚಿಹೀನ ಶ್ರೀಮಂತಿಕೆ ನಾಯ ಮೊಲೆ ಹಾಲು. ಲಕ್ಷಾಂತರ ಜನರಿಗೆ ವಿದ್ಯೆ, ಸಾವಿರಾರು ಜನರಿಗೆ ಕೆಲಸ,ಎಲ್ಲರಲ್ಲಿ ಕನ್ನಡ ಕಟ್ಟುವ ಹಠ, ಅಕೃತಕ ಆತಿಥ್ಯ-ಇವು ಕೋರೆಯವರಲ್ಲಿ ನಾನು ಬಹುಕಾಲದಿಂದ ಮೆಚ್ಚಿಕೊಂಡ ಗುಣ. ಅವರು ಕಟ್ಟಕಡೆಯ ಮನುಷ್ಯನನ್ನೂ ಹೆಸರಿಟ್ಟು ಕರೆದು ಗೌರವಿಸುವ ಬಗೆ ನನಗೆ ಬಹಳ ಇಷ್ಟ. ಮಹಾನಗರಗಳಲ್ಲೇ ಏಕಪರದೆಗಳು ಮುಚ್ಚುತ್ತಿರುವಾಗ ಅಂಕಲಿಯಲ್ಲಿ ಮಯೂರ ಮಿಂಚುತ್ತಿದ್ದಾನೆ. ೫೦ ವರ್ಷ ನಿರಂತರ ಸೇವೆ ಸಲ್ಲಿಸಿದ ಮೇನೇಜರ ಜಕಾತಿಗೂ ಒಂದು ಸನ್ಮಾನ. ಹಿರಿಯರು ಅಂದರೆ ಹೀಗಿರಬೇಕು. ಹೀಗೆ ಪಕ್ಷಾತೀತವಾಗಿರಬೇಕು.ಹೀಗೆ ಎಲ್ಲರನ್ನೂ ಒಳಗೊಂಡು,ಎಲ್ಲರೊಳಗೊಂದಾಗಿ ಜೀವಿಸಬೇಕು.

Exit mobile version