ಕನ್ನಡ ಚಿತ್ರರಂಗದ ಹಿರಿಯನಟಿಯರಲ್ಲಿ ಒಬ್ಬರಾದ ಶ್ರುತಿಗೆ ಇಂದು ಬರ್ತ್ ಡೇ ಸಂಭ್ರಮ. ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷಗಳಾದ್ರೂ ಎಂದೂ ಜನುಮ ದಿನ ಸಂಭ್ರಮಾಚರಣೆ ಮಾಡದ ಈಕೆ ಮಗಳು ಗೌರಿಗಾಗಿ ಫಸ್ಟ್ ಟೈಂ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡರು. ಶಿವರಾಜ್‌ಕುಮಾರ್ ಸೇರಿದಂತೆ ಇಡೀ ಸ್ಯಾಂಡಲ್‌ವುಡ್ ಬಂದು ಶುಭ ಕೋರಿ, ಆ ಸಂಭ್ರಮವನ್ನು ಅವಿಸ್ಮರಣೀಯ ಆಗಿಸಿತು.
- ಮಗಳಿಗಾಗಿ ಶ್ರುತಿ ಬರ್ತ್ ಡೇ.. ಇಡೀ ಸ್ಯಾಂಡಲ್‌ವುಡ್ ಸಾಥ್
- ಹಿರಿಯನಟಿಗೆ 50 ವರ್ಷ ಆದ್ರೂ ಅದೇ ಬ್ಯೂಟಿ.. ಅದೇ ಛಾರ್ಮ್
- 35 ವರ್ಷಗಳ ಫಿಲ್ಮ್ ಜರ್ನಿ ಮೆಲುಕು.. ತಾರೆಯರ ಸಮಾಗಮ..!
- ಚಿತ್ರರಂಗಕ್ಕೆ ಶ್ರುತಿ- S ಮಹೇಂದರ್ ಮಗಳು ಗೌರಿ ಗ್ರ್ಯಾಂಡ್ ಎಂಟ್ರಿ
ಶ್ರುತಿ.. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟೀಮಣಿ. ಹಾಸನ ಮೂಲದ ಈಕೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ರ ಮುದ್ದಿನ ತಂಗಿಯೂ ಹೌದು. 90ರ ದಶಕದ ಬಹುಬೇಡಿಕೆ ನಟಿಯಾಗಿದ್ದ ಈಕೆ, ಮೊದಲು ಕರಿಯರ್ ಶುರು ಮಾಡಿದ್ದು ಪಕ್ಕದ ಮಲಯಾಳಂ ಚಿತ್ರದಿಂದ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಶಿವಣ್ಣನ ತಂಗಿ ಪಾತ್ರದಿಂದ ಚಂದನವನಕ್ಕೆ ಬಲಗಾಲಿಟ್ಟು ಬಂದರು.
1990ರಲ್ಲಿ ದ್ವಾರಕೀಶ್ ನಿರ್ದೇಶನದ ಶ್ರುತಿ ಸಿನಿಮಾ ಇವ್ರಿಗೆ ಬಹುದೊಡ್ಡ ನೇಮು ಫೇಮು ತಂದುಕೊಡ್ತು. ಅಂದಿನಿಂದಲೇ ಗಿರಿಜಾ ಅಂತಿದ್ದ ಮೂಲ ಹೆಸರನ್ನ ತೆಗೆದು, ಶ್ರುತಿ ಅಂತಲೇ ನಾಮಕರಣ ಮಾಡಿದ್ರು ದ್ವಾರಕೀಶ್. ಇಂದಿಗೂ ಶ್ರುತಿ ಅಂತಲೇ ಕರೆಸಿಕೊಳ್ಳೋ ಇವ್ರು, ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಸೌತ್ನ ಅಷ್ಟೂ ಚಿತ್ರರಂಗಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ಮೆರೆದಿದ್ದಾರೆ.
ಹೆತ್ತ ಕರಳು ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈಕೆ, ಆಘಾತ ಚಿತ್ರದ ನಟನೆಗಾಗಿ ಸ್ಟೇಲ್ ಫಿಲ್ಮ್ ಅವಾರ್ಡ್ ಮುಡಿಗೇರಿಸಿಕೊಂಡರು. ತಮಿಳಿನ ಕಲ್ಕಿ ಚಿತ್ರದ ನಟನೆಗಾಗಿ ತಮಿಳು ಇಂಡಸ್ಟ್ರಿಯಲ್ಲೂ ಫಿಲ್ಮ್ ಫೇರ್ ಪ್ರಶಸ್ತಿ ಪಡೆದು ಕನ್ನಡದ ಕೀರ್ತಿ, ಗರಿಮೆ ಹೆಚ್ಚಿಸಿದ್ರು ಶ್ರುತಿ.
ಅಂಬರೀಶ್ರ 200ನೇ ಹಾಗೂ ಶ್ರುತಿ ನಟನೆಯ 100ನೇ ಸಿನಿಮಾ ಗೌಡ್ರು. ಈ ಚಿತ್ರದಲ್ಲಿ ಮಗದೊಮ್ಮೆ ಮನೋಜ್ಞ ಅಭಿನಯ ನೀಡಿ, ಎಲ್ಲರ ಮನಸ್ಸು ಗೆದ್ದ ಶ್ರುತಿ ಇನ್ನೊಮ್ಮೆ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದುಕೊಂಡರು. ಪುಟ್ಟಕ್ಕನ ಹೈವೇ ಚಿತ್ರ ಮಾಡಿದ ಹಂಗಾಮದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗೆ ಕೌಟುಂಬಿಕ ಸಿನಿಮಾಗಳಿಂದಲೇ ಗಮನ ಸೆಳೆದ ಅಭಿನೇತ್ರಿ ಈ ಶ್ರುತಿ.
ಭಾವನಾತ್ಮಕ ಪಾತ್ರಗಳಿಂದಲೇ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದ್ದ ಶ್ರುತಿ, ಅಳುಮುಂಜಿ ಶ್ರುತಿ ಅಂತಲೇ ಖ್ಯಾತಿ ಪಡೆದರು. ಆದ್ರೆ ಅದರ ಹೊರತಾಗಿ ಭಿನ್ನ ಅಲೆಯ ಪಾತ್ರಗಳಿಂದ ತಾನು ವರ್ಸಟೈಲ್ ಌಕ್ಟ್ರೆಸ್ ಅನಿಸಿಕೊಂಡರು. ವಿಲನ್ ಆಗಿಯೂ ಅಬ್ಬರಿಸುತ್ತಿರೋ ಶ್ರುತಿ, ಭಜರಂಗಿ-2, ಕಾಟೇರ ಚಿತ್ರಗಳಲ್ಲಿ ಎಲ್ಲರ ಹುಬ್ಬೇರಿಸಿದ್ರು.
ಸಿನಿಮಾ ಕ್ಷೇತ್ರದ ಹೊರತಾಗಿ ರಾಜಕಾರಣದಲ್ಲೂ ತೊಡಗಿಸಿಕೊಂಡಿರೋ ಶ್ರುತಿ, ತಾನೊಬ್ಬ ದಿಟ್ಟ ರಾಜಕಾರಣಿ ಅಂತಲೂ ಪ್ರೂವ್ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಮಹಿಳಾ ಘಟಕದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರೋ ಶ್ರುತಿಗೆ ಇಂದು ಬರ್ತ್ ಡೇ ಸಂಭ್ರಮ. 49 ವಸಂತಗಳನ್ನ ಪೂರೈಸಿ 50ನೇ ವರ್ಷಕ್ಕೆ ಕಾಲಿಟ್ಟಿರೋ ಶ್ರುತಿಗೆ ಹ್ಯಾಪಿ ಹುಟ್ದಬ್ಬ ಹೇಳ್ತಾ ಅವ್ರ ಸಿನಿಮಾ ಹಾಗೂ ರಾಜಕೀಯ ರಂಗಕ್ಕೆ ಶುಭ ಕೋರೋಣ.
ಇಂಟರೆಸ್ಟಿಂಗ್ ಅಂದ್ರೆ 35 ವರ್ಷಗಳಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳದ ಶ್ರುತಿ, ಇದೇ ಮೊದಲ ಬಾರಿಗೆ ಮಗಳು ಗೌರಿಗಾಗಿ ಇಸ್ಕಾನ್ ಟೆಂಪಲ್ ಆವರಣದಲ್ಲಿರೋ ದ್ವಾರಕ ಹಾಲ್‌ನಲ್ಲಿ ಗ್ರ್ಯಾಂಡ್ ಆಗಿ ಜನುಮ ದಿನ ಸಂಭ್ರಮಾಚರಿಸಿದ್ರು. ಶಿವರಾಜ್‌ಕುಮಾರ್, ರವಿಚಂದ್ರನ್, ಮಾಳವಿಕಾ, ಅಮೂಲ್ಯ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಲಾಶ್ರೀ, ಎಸ್ ನಾರಾಯಣ್, ಉಮಾಶ್ರೀ, ಟೆನ್ನಿಸ್ ಕೃಷ್ಣ ಸೇರಿದಂತೆ ಚಿತ್ರರಂಗದ ಬಹುತೇಕ ಗಣ್ಯರು ಆಗಮಿಸಿ ಶ್ರುತಿಗೆ ಶುಭ ಕೋರಿದ್ರು.
ಇದೇ ಸಂದರ್ಭದಲ್ಲಿ ಅಮ್ಮನಿಗಾಗಿ ಹಾಡು ಹಾಡಿದ ಮಗಳು ಗೌರಿ, ಎಲ್ಲರ ಗಮನ ಸೆಳೆದರು. ಮಗಳು ಗೌರಿ ಚಿತ್ರರಂಗದ ಎಂಟ್ರಿ ಬಗ್ಗೆಯೂ ಶ್ರುತಿ ಹಿಂಟ್ ನೀಡಿದ್ರು.
ಒಟ್ಟಾರೆ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಆಗಿರೋ ಶ್ರುತಿಗೆ ಶುಭವಾಗಲಿ ಅನ್ನೋದಷ್ಟೇ ಕನ್ನಡಿಗರ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್